*ಬಿಡುಗಡೆಯಾಯಿತು "ಖಡಕ್ ಹಳ್ಳಿಹುಡುಗರು" ಚಿತ್ರದ ಕನ್ನಡಾಭಿಮಾನದ ಗೀತೆ.*
*ರಾಘವೇಂದ್ರ ರಾಜಕುಮಾರ್ ಹಾಡಿರುವ ಹಾಡಿಗೆ ಭಾರಿ ಮೆಚ್ಚುಗೆ.*
ಹೊಸಬರ ತಂಡವೊಂದು ಹೊಸರೀತಿಯ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ. ಆ ಚಿತ್ರಕ್ಕೆ "ಖಡಕ್ ಹಳ್ಳಿ ಹುಡುಗರು" ಎಂದು ಹೆಸರಿಡಲಾಗಿದೆ.
ಹಳ್ಳಿ ಹಿನ್ನೆಲೆಯಿಂದ ಬಂದಿರುವ ಎಂ ಯು ಪ್ರಸನ್ನ ಹಳ್ಳಿ ನಿರ್ದೇಶಿಸಲಿರುವ ಈ ಚಿತ್ರದ ಕನ್ನಡಾಭಿಮಾನದ ಹಾಡೊಂದನ್ನು ರಾಘವೇಂದ್ರ ರಾಜಕುಮಾರ್ ಹಾಡಿದ್ದಾರೆ. ಈ ಹಾಡಿನ ಬಿಡುಗಡೆ ಸಮಾರಂಭ ಗಣರಾಜ್ಯೋತ್ಸವದ ಶುಭದಿನ ನೆರವೇರಿತು. ಖ್ಯಾತ ನಿರ್ಮಾಪಕ ರೆಹಮಾನ್ ಹಾಡನ್ನು ಬಿಡುಗಡೆ ಮಾಡಿದರು. ಹಾಡಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಸಮಾರಂಭದ ಆರಂಭದಲ್ಲಿ ನಿರ್ದೇಶಕ ಪ್ರಸನ್ನ ಹಳ್ಳಿ ಅವರ ತಾಯಿ ರತ್ನಮ್ಮ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ನಮ್ಮ ಚಿತ್ರದ ನಿರ್ದೇಶಕರು ಹಳ್ಳಿಯಿಂದ ಬಂದು ಉತ್ತಮ ಹಾಡುಗಳನ್ನು ಬರೆದು, ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಎಲ್ಲರ ಸಾಧನೆಯ ಹಿಂದೆ ತಾಯಿಯ ಬೆಂಬಲ ಸಾಕಷ್ಟಿದೆ. ಆ ಹಿನ್ನೆಲೆಯಲ್ಲಿ ನಾವು ನಿರ್ದೇಶಕರ ತಾಯಿಯವರಿಗೆ ಸನ್ಮಾನಿಸಿ ಕಾರ್ಯಕ್ರಮ ಆರಂಭಿಸುತ್ತಿದ್ದೇವೆ ಎನ್ನುತ್ತಾರೆ ಚಿತ್ರತಂಡದ ಸದಸ್ಯರು.
ನಾನು ಮೂಲತಃ ಹಳ್ಳಿಯವನು. ಕೊರೋನ ಲಾಕ್ ಡೌನ್ ಸಮಯದಲ್ಲಿ ಹುಟ್ಟಿದ ಕಥೆಯಿದು. ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ. ಎಂಟು ಮುಖ್ಯ ಪಾತ್ರಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇನೆ. ಚಿತ್ರದಲ್ಲಿ ಆರು ಹಾಡುಗಳಿರುತ್ತದೆ. ಆರು ಹಾಡುಗಳನ್ನು ನಾನೇ ಬರೆದಿದ್ದೇನೆ. ಅದರಲ್ಲಿ "ಕನ್ನಡಕ್ಕೆ ಮೊದಲ ಗೌರವ" ಎಂಬ ಮೊದಲ ಹಾಡನ್ನು ರಾಘವೇಂದ್ರ ರಾಜಕುಮಾರ್ ಹಾಡಿದ್ದಾರೆ. ಅವರಿಗೆ ಧನ್ಯವಾದ. ಈ ಹಾಡನ್ನು ಹಾಡುವಂತೆ ರಾಘಣ್ಣ ಅವರಿಗೆ ಪ್ರೇರಿಪಿಸಿದ ಪುನೀತ್ ರಾಜಕುಮಾರ್ ಅವರಿಗೆ ವಿಶೇಷ ಧನ್ಯವಾದ. ಅಪ್ಪು ಅವರ ಪಿ.ಆರ್.ಕೆ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಮಾರ್ಚ್ ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಪ್ರಸನ್ನ ಹಳ್ಳಿ ತಿಳಿಸಿದರು.
ನನ್ನ ನೋಡಿದರೆ ಹಳ್ಳಿ ಹುಡುಗನ ತರಹ ಕಾಣುವುದಿಲ್ಲ. ನಿರ್ದೇಶಕರು ನನಗೆ ಹಳ್ಳಿಹುಡುಗನ ಗೆಟಪ್ ಹಾಕಿ ನೋಡಿ ಆಯ್ಕೆ ಮಾಡಿಕೊಂಡರು. ಈಗ ಬಿಡುಗಡೆಯಾಗಿರುವ ಹಾಡು ಇಷ್ಟು ಚೆನ್ನಾಗಿ ಬಂದಿದೆ ಅಂದರೆ ಪುನೀತ್ ಸರ್ ಕಾರಣ. ಅವರ ಸಹಾಯ ಮರೆಯುವ ಹಾಗಿಲ್ಲ ಎಂದರು ನಾಯಕ ರಾಜೀವ್ ರಾಥೋಡ್.
ನಾನು ರಾಜೀವ್ ಬಹುದಿನಗಳ ಸ್ನೇಹಿತರು. ಈ ಚಿತ್ರದ ಕಥೆ ಚೆನ್ನಾಗಿದೆ ನೀವು ಒಂದು ಪಾತ್ರ ಮಾಡಬೇಕೆಂದು ಕೇಳಿದ್ದಾರೆ. ಮಾಡುತ್ತೇನೆ. ಚಿತ್ರತಂಡಕ್ಕೆ ಶುಭವಾಗಲಿ ಎಂದರು ನಟ ಧರ್ಮ.
ಚಿತ್ರದಲ್ಲಿ ಅಭಿನಯಿಸುತ್ತಿರುವ ಪ್ರಭಾಸ್ ರಾಜ್, ಚಂದ್ರಪ್ರಭ, ದೀಪು ವಿಜಯ್, ವರದರಾಜ್, ಉದಯ್, ಮಹಂತೇಶ್, ಆರ್ ಎಂ ಎಂ ಮಂಜು, ನಾಯಕಿಯರಾದ ರಾನ್ವಿ ಶೇಖರ್, ದೀಪ ಈ ಸಮಾರಂಭದಲ್ಲಿ ಹಾಜರಿದ್ದು, ತಮ್ಮ ಅಭಿಪ್ರಾಯ ಹಂಚಿಕೊಂಡರು.
ಸಿಂಹ ಮತ್ತು ಪುನೀತ್ ಪಟೇಲ್ ಈ ಚಿತ್ರದ ನಿರ್ಮಾಪಕರು. ಸುಧೀರ್ ಶಾಸ್ತ್ರಿ ಹಾಗೂ ಹದಿನಾಲ್ಕು ವರ್ಷದ ಧ್ರುವ ಈ ಚಿತ್ರದ ಸಂಗೀತ ನಿರ್ದೇಶಕರು. ಪಿ.ಎಲ್ ರವಿ ಈ ಚಿತ್ರದ ಛಾಯಾಗ್ರಾಹಕರು.