*ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ "ಮದಗಜ" ಚಿತ್ರದ ಟ್ರೇಲರ್ ಲೋಕಾರ್ಪಣೆ* .
ಶ್ರೀ ಮುರಳಿ ನಾಯಕರಾಗಿ ನಟಿಸಿರುವ "ಮದಗಜ" ಚಿತ್ರದ ಟ್ರೇಲರನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಿಡುಗಡೆ ಮಾಡಿದರು. ಚಿತ್ರ ಡಿಸೆಂಬರ್ 3 ರಂದು ತೆರೆಗೆ ಬರಲಿದೆ.
ಟ್ರೇಲರ್ ಬಿಡುಗಡೆ ಸಮಾರಂಭದ ಆರಂಭದಲ್ಲಿ ಶ್ರೀಮುರಳಿ ಪುನೀತ್ ರಾಜ್‍ಕುಮಾರ್ ಅವರಿಗೆ "ಬೊಂಬೆ ಹೇಳುತ್ತಯ್ತೆ... ನೀನೆ ರಾಜಕುಮಾರ" ಹಾಡು ಹೇಳಿ, ಗಾನನಮನ ಸಲ್ಲಿಸಿದರು.
ಚಿತ್ರದ ಟ್ರೇಲರ್ ಇಷ್ಟು ಚೆನ್ನಾಗಿದೆ ಎಂದರೆ, ಇನ್ನೂ ಸಿನಿಮಾ ಹೇಗೆ ಇರಬೇಡ? ಒಳ್ಳೆ ಹಾಲಿವುಡ್ ಚಿತ್ರದಲ್ಲಿ ಮಾಡಿದ ಹಾಗೆ ಮಾಡಿದ್ದೀರಿ ಎಂದು ಶ್ರೀ ಮುರಳಿ ಅವರನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ಈಗ ಹೆಚ್ಚಿನ ಸಂಖ್ಯೆಯಲ್ಲಿ ಯುವಪೀಳಿಗೆ ನಿರ್ಮಾಣ, ನಿರ್ದೇಶನ ಹಾಗೂ ಕಲಾವಿದರಾಗಿ ಚಿತ್ರರಂಗ ಪ್ರವೇಶಿಸುತ್ತಿರುವುದು ಸಂತಸದ ವಿಷಯ ಎಂದರು.
ತಮ್ಮ ಭಾಷಣದುದ್ದಕ್ಕೂ ಪುನೀತ್ ರಾಜಕುಮಾರ್ ಅವರನ್ನು ಮುಖ್ಯಮಂತ್ರಿಗಳು ಬಹಳವಾಗಿ ನೆನಪಿಸಿಕೊಂಡರು. ಚಿತ್ರತಂಡಕ್ಕೆ ಶುಭ ಹಾರೈಸಿದರು.
ಸಚಿವರಾದ ಅಶ್ವತ್ ನಾರಾಯಣ್ ಹಾಗೂ ಮುನಿರತ್ನ ಅವರು ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಯಾವುದೇ ಒಂದು ವ್ಯಕ್ತಿ ಕೂಡ ಮೊದಲು ತನ್ನ ಕುಟುಂಬವನ್ನು ಚೆನ್ನಾಗಿಟ್ಟುಕೊಳ್ಳಬೇಕು..ನಾನು ಆ ವಿಚಾರದಲ್ಲಿ ಅದೃಷ್ಟವಂತ.. ನನ್ನ ಕುಟುಂಬ ತುಂಬಾ ಚೆನ್ನಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಈ ಸಮಾರಂಭಕ್ಕೆ ಬರಲು ನನ್ನ ಕುಟುಂಬ ಕಾರಣ ಎಂದು ಮಾತು ಆರಂಭಿಸಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು ಸಿನಿಮಾ ಎಂದರೆ ಮಾಯಾಬಜಾರ್ ಅಲ್ಲ.. ಇಲ್ಲಿ ಸಾಕಷ್ಟು ಜನರ ಶ್ರಮವಿರುತ್ತದೆ. ಒಂದು ಒಳ್ಳೆಯ ಚಿತ್ರ ಮೂಡಿಬರಲು ಎಲ್ಲರು ಒಟ್ಟಾಗಿ ಶ್ರಮಿಸಬೇಕು.. ನಮ್ಮ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇದೇ ಡಿಸೆಂಬರ್ 3 ರಂದು ಬಿಡುಗಡೆಯಾಗಿತ್ತಿದೆ. ಎಲ್ಲರ ಪ್ರೋತ್ಸಾಹವಿರಲಿ ಎಂದರು.
ನಮ್ಮ ಚಿತ್ರದ ಮೊದಲ ಹೀರೋ ನಿರ್ಮಾಪಕ ಉಮಾಪತಿ ಅವರು. ಅವರ ಸಹಕಾರದಿಂದ ಚಿತ್ರ ಇಷ್ಟು ಚೆನ್ನಾಗಿ ಬಂದಿದೆ. ನಿರ್ದೇಶಕ ಮಹೇಶ್ ಕುಮಾರ್ ಅವರ ಕಾರ್ಯವೈಖರಿ ಬಗ್ಗೆ ಎಷ್ಟು ಹೇಳಿದರು ಸಾಲದು. "ಮದಗಜ" ದ ಇಡೀ ತಂಡಕ್ಕೆ ನನ್ನ ಅಭಿನಂದನೆ. ನಿರ್ದೇಶಕರು ಹೇಳಿದಂತೆ ನಾನು ನಟಿಸಿದ್ದೇನೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ . ನೋಡಿ. ಹಾರೈಸಿ ಅಂದರು ನಾಯಕ ಶ್ರೀಮುರಳಿ.
ಈ ಚಿತ್ರದಲ್ಲಿ ನನ್ನ ಫಸ್ಟ್ ಲುಕ್ ನೋಡಿದ ಎಷ್ಟೋ ಜನ ನೀವು ಚೆನ್ನಾಗಿ ಕಾಣುತ್ತಿದ್ದೀರಾ.. ಎಂದು ಹೇಳಿದರು.. ಪಲ್ಲವಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಪಾತ್ರ ಕೊಟ್ಟ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ವಂದನೆಗಳು ಎಂದರು ನಟಿ ಆಶಿಕಾ ರಂಗನಾಥ್.
ನಮ್ಮ ತಂದೆ, ತಾಯಿ ಅಥವಾ ಬಳಗದವರು ನಾವು ಯಾವುದಾದರೂ ಒಂದು ವ್ಯಾಪಾರ ಆರಂಭಿಸುತ್ತೇನೆ ಎಂದರೆ, ಐದು, ಹತ್ತು ಲಕ್ಷ ಸಹಾಯ ಮಾಡುತ್ತಾರೆ ಎಂದರೆ ಅದೇ ದೊಡ್ಡ ವಿಷಯ. ಅಂತದರಲ್ಲಿ ನಾವು ಹೇಳಿದ ಕಥೆ ಕೇಳಿ ಇಪ್ಪತ್ತು, ಮೂವತ್ತು ಕೋಟಿ ಖರ್ಚು ಮಾಡಿ ಸಿನಿಮಾ ಮಾಡುವ ನಿರ್ಮಾಪಕರು ತಂದೆ, ತಾಯಿ ಇದ್ದ ಹಾಗೆ. ನಮಗೆ ಆ ರೀತಿ ಸಹಾಯ ಮಾಡಿದವರು ನಿರ್ಮಾಪಕ ಉಮಾಪತಿ ಅವರು.. ನಂತರ ಕಥೆ ಕೇಳಿದ ತಕ್ಷಣ ಚೆನ್ನಾಗಿದೆ ಸಿನಿಮಾ ಮಾಡೋಣ ಎಂದ ನಾಯಕ ಶ್ರೀಮುರಳಿ ಅವರಿಗೆ.. ಚಿತ್ರ ಉತ್ತಮವಾಗಿ ಮೂಡಿಬರಲು ಸಹಕರಿಸಿದ ನನ್ನ ಇಡೀ ತಂಡಕ್ಕೆ ಧನ್ಯವಾದ. ಡಿಸೆಂಬರ್ ಮೂರರಂದು
ತೆರೆಗೆ ಬರಲಿದೆ .. ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ದೇಶಕ ಮಹೇಶ್ ಕುಮಾರ್.
ಚಿತ್ರದಲ್ಲಿ ಅಭಿನಯಿಸಿರುವ ಚಿಕ್ಕಣ್ಣ, ಧರ್ಮಣ್ಣ, ಶಿವರಾಜ್ ಕೆ ಆರ್ ಪೇಟೆ, ಗರುಡ ರಾಮ್ ಅನಿಲ್ ಹಾಗೂ ಚಿತ್ರದ ತಂತ್ರಜ್ಞರು ಚಿತ್ರದ ಬಗ್ಗೆ ಮಾತನಾಡಿದರು.