Deccan King Producers.6 Film Launch

Thursday, November 25, 2021

450

 

‘ಡೆಕ್ಕನ್ ಕಿಂಗ್’ ಸಂಸ್ಥೆಯ ಸಿನಿಮಾ ಸಾಹಸ; ಒಂದೇ ವೇದಿಕೆಯಲ್ಲಿ 6 ಚಿತ್ರಗಳು ಲಾಂಚ್

 

 

ಒಂದು ಸಿನಿಮಾ ನಿರ್ಮಾಣ ಮಾಡಿ ಸೈ ಎನಿಸಿಕೊಳ್ಳುವುದೇ ಕಷ್ಟದ ಮಾತು. ಹೀಗಿರುವಾಗ ಏಕಕಾಲಕ್ಕೆ 6 ಸಿನಿಮಾಗಳನ್ನು ನಿರ್ಮಾಣ ಮಾಡುವುದು ನಿಜಕ್ಕೂ ಒಂದು ಸಾಹಸ. ಅಂತಹ ಸಾಹಸಕ್ಕೆ ಕೈ ಹಾಕಿರುವುದು ‘ಡೆಕ್ಕನ್ ಕಿಂಗ್’ ಸಂಸ್ಥೆ. ಈ ಸಂಸ್ಥೆಯ ಬಿಜು ಶಿವಾನಂದ್ ಅವರು ಈ ಎಲ್ಲ ಸಿನಿಮಾಗಳ ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ತುಳು, ಕೊಂಕಣಿ ಭಾಷೆಗಳಲ್ಲಿ ಈ ಸಿನಿಮಾಗಳು ಮೂಡಿಬರಲಿವೆ. ಅನೇಕ ಹೊಸ ಕಲಾವಿದರಿಗೆ ಅವಕಾಶ ನೀಡಲಾಗುತ್ತಿದೆ. ‘ಡೆಕ್ಕನ್ ಕಿಂಗ್’ ಸಂಸ್ಥೆಯಿಂದ ನಿರ್ಮಾಣ ಆಗುತ್ತಿರುವ ‘ಸ್ಥಂಭಂ’, ‘ಸಮರ್ಥ್’, ‘ಮಂಗಳೂರು’ ಮತ್ತು ‘ಫೆಬ್ರವರಿ 29 ಸೂರ್ಯಗಿರಿ’ ಚಿತ್ರಗಳ ಶೀರ್ಷಿಕೆ ಅನಾವರಣ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಮಾಡಲಾಗಿದೆ.

 

‘ಡೆಕ್ಕನ್ ಕಿಂಗ್’ ಸಂಸ್ಥೆಯ ಬೆನ್ನು ತಟ್ಟಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹಲವು ಗಣ್ಯರು ಆಗಮಿಸಿದ್ದರು. ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಅವರು ಶುಭಕೋರಿದರು. ಈ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿರುವ ಅನೇಕ ತಂತ್ರಜ್ಞರು ಪರಭಾಷೆಯವರು. ವೇದಿಕೆ ಮೇಲೆ ತಮಿಳಿನಲ್ಲಿ ಮಾತನಾಡಿದ ಅವರಿಗೆ ಉಮೇಶ್ ಬಣಕಾರ್ ಒಂದು ಕಿವಿಮಾತು ಹೇಳಿದರು. ಕನ್ನಡವನ್ನು ಕಲಿತು ಮಾತನಾಡುವಂತೆ ಸೂಚನೆ ನೀಡಿದರು. ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಈ ಮಾತನ್ನು ಪುನರುಚ್ಚರಿಸಿದರು. ಮುಂದಿನ ಸುದ್ದಿಗೋಷ್ಠಿ ವೇಳೆಗೆ ಖಂಡಿತವಾಗಿಯೂ ಕನ್ನಡದಲ್ಲೇ ಮಾತನಾಡುವುದಾಗಿ ಎಲ್ಲ ತಂತ್ರಜ್ಞರು ಭರವಸೆ ನೀಡಿದ್ದಾರೆ.

‘ಡೆಕ್ಕನ್ ಕಿಂಗ್’ ಬ್ಯಾನರ್ ಮೂಲಕ ನಿರ್ಮಾಣ ಆಗುತ್ತಿರುವ ‘ಸಮರ್ಥ್’ ಚಿತ್ರಕ್ಕೆ ತಮಿಳಿನಲ್ಲಿ ‘ವೇದಾದ್ರಿ’ ಎಂದು ಹೆಸರು ಇಡಲಾಗಿದೆ. ಈ ಚಿತ್ರಕ್ಕೆ ರಾಜಾ ವೆಂಕಯ್ಯ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಕನ್ನಡದಲ್ಲಿ ಪ್ರವೀರ್ ಶೆಟ್ಟಿ ಮತ್ತು ಸೋನಲ್ ಮೊಂತೆರೋ ಅಭಿನಯಿಸುತ್ತಿದ್ದಾರೆ. ತಮಿಳಿನಲ್ಲಿ ಕಿಶೋರ್ ಮತ್ತು ಏಸ್ತರ್ ನರೋನಾ ನಟಿಸುತ್ತಿದ್ದಾರೆ. ಪ್ರತಾಪ್ ಪೋತನ್, ಅವಿನಾಶ್, ಪವಿತ್ರಾ ಲೋಕೇಶ್, ಸಂದೀಪ್ ಮಲಾನಿ ಕನ್ನಡ ಮತ್ತು ತಮಿಳು ಎರಡೂ ವರ್ಷನ್ ಗಳಲ್ಲಿ ನಟಿಸಲಿದ್ದಾರೆ. ಕಾರ್ತಿಕ್ ಸುಬ್ರಹ್ಮಣ್ಯಂ ಛಾಯಾಗ್ರಹಣ, ಭಾರದ್ವಾಜ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಸುದ್ದಿಗೋಷ್ಠಿಗೆ ಹಿರಿಯ ನಟ ಅವಿನಾಶ್ ಕೂಡ ಆಗಮಿಸಿದ್ದರು.

 

ಇನ್ನೊಂದು ಚಿತ್ರ ‘ಸ್ತಂಭಂ’ನಲ್ಲಿ ‘ಕೆಜಿಎಫ್’ ಖ್ಯಾತಿಯ ನಟ ಗರುಡ ರಾಮ್ ಅವರು ಬಣ್ಣ ಹಚ್ಚಲಿದ್ದಾರೆ. ಸಂದೀಪ್ ಶೆರಾವತ್ ನಾಯಕನಾಗಿ ನಟಿಸಲಿದ್ದಾರೆ. ಹೊಸ ಕಲಾವಿರಾದ ಆಲಿಯಾ ಮತ್ತು ರಕ್ಷಿತ್ ಅವರಿಗೆ ಈ ಸಿನಿಮಾದಲ್ಲಿ ಅವಕಾಶ ನೀಡಲಾಗಿದೆ. ಅವರೆಲ್ಲರೂ ‘ಡೆಕ್ಕನ್ ಕಿಂಗ್’ ಸಂಸ್ಥೆಗೆ ಧನ್ಯವಾದ ಅರ್ಪಿಸಿದರು.

 

ಸಂದೀಪ್ ಮಲಾನಿ ನಿರ್ದೇಶಿಸಲಿರುವ ‘ಮಂಗಳೂರು’ ಚಿತ್ರಕ್ಕೂ ‘ಡೆಕ್ಕನ್ ಕಿಂಗ್’ ಬ್ಯಾನರ್ ಮೂಲಕ ಬಂಡವಾಳ ಹೂಡಲಾಗುತ್ತಿದೆ. ಈ ಚಿತ್ರಕ್ಕೆ ಇನ್ನಷ್ಟೇ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ. ಈ ಚಿತ್ರ ಕನ್ನಡದ ಜೊತೆಗೆ ಕೊಂಕಣಿ, ತುಳು ಮತ್ತು ಬ್ಯಾರಿ ಭಾಷೆಗಳಲ್ಲಿ ಮೂಡಿಬರಲಿದೆ. ಕರಾವಳಿ ಪ್ರತಿಭೆಗಳಿಗೆ ಅವಕಾಶ ನೀಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಮತ್ತೊಂದು ಸಿನಿಮಾಗೆ ‘ಫೆಬ್ರವರಿ 29 ಸೂರ್ಯಗಿರಿ’ ಎಂದು ಡಿಫರೆಂಟ್ ಆಗಿ ಹೆಸರು ಇಡಲಾಗಿದೆ. ಇದು ಕೂಡ ದ್ವಿಭಾಷಾ ಚಿತ್ರವಾಗಿದ್ದು, ಕನ್ನಡ ಮತ್ತು ತಮಿಳಿನಲ್ಲಿ ನಿರ್ಮಾಣ ಆಗಲಿದೆ. ಇದರಲ್ಲೂ ಪ್ರವೀರ್ ಶೆಟ್ಟಿ, ಏಸ್ತರ್ ನೊರಾನಾ, ಪ್ರಗತಿ, ಗೋಕುಲ್ ಶಿವಾನಂದ್ ಮತ್ತು ಸಂದೀಪ್ ಮಲಾನಿ ನಟಿಸುತ್ತಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,