*ಮಾರ್ಚ್ ನಲ್ಲಿ ಎರಡು ದಿನಗಳ ಕಾಲ ನಡೆಯಲಿದೆ 67 ನೇ ಫಿಲಂ ಫೇರ್ ಸೌತ್ ಪ್ರಶಸ್ತಿ ಸಮಾರಂಭ 2019 - 21.*
*ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಪ್ರದಾನ ಸಮಾರಂಭ.*
67ನೇ ಫಿಲಂ ಫೇರ್ ಸೌತ್ ಪ್ರಶಸ್ತಿ 2019-21 ಪ್ರದಾನ ಸಮಾರಂಭ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿದೆ.
ಈ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಿದ್ದರು.
ಕಮರ್ ಫಿಲಂ ಫ್ಯಾಕ್ಟರಿ ಸಹಯೋಗದೊಂದಿಗೆ ಈ ಸಮಾರಂಭ ನಡೆಯಲಿದೆ.
ಫಿಲಂ ಫೇರ್ ಸಂಪಾದಕರಾದ ಜಿತೇಶ್ ಪಿಳ್ಳೈ, ಬಹುಭಾಷಾ ನಟಿ ಪೂಜಾ ಹೆಗ್ಡೆ, ಕಮರ್ ಫಿಲಂ ಫ್ಯಾಕ್ಟರಿಯ ಕಮರ್ ಹಾಗೂ ನಟಿ ತಾರಾ ಅನುರಾಧ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸೌತ್ ಫಿಲಂ ಫೇರ್ ಪ್ರಶಸ್ತಿ ಸಮಾರಂಭ ಕಮರ್ ಫಿಲಂ ಫ್ಯಾಕ್ಟರಿ ಸಹಯೋಗದೊಂದಿಗೆ ನಡೆಸಲು ಸಂತಸವಾಗಿದೆ. ಮಾರ್ಚ್ ಮೊದಲವಾರದಲ್ಲಿ ಎರಡು ದಿನಗಳ ಕಾಲ ಈ ಸಮಾರಂಭ ನಡೆಯಲಿದೆ. ಅನೇಕ ಮನೋರಂಜನಾ ಕಾರ್ಯಕ್ರಮಗಳು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮತ್ತಷ್ಟು ಶೃಂಗಾರಗೊಳಿಸಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಜಿತೇಶ್ ಪಿಳ್ಳೈ.
ಇಲ್ಲಿಯವರೆಗೂ ಬೆಂಗಳೂರಿನಲ್ಲಿ ಫಿಲಂ ಫೇರ್ ಪ್ರಶಸ್ತಿ ಸಮಾರಂಭ ನಡೆದಿಲ್ಲ. ಕಳೆದ ಬಾರಿ ಈ ಸಮಾರಂಭ ನಮ್ಮ ಕೈ ತಪ್ಪಿತ್ತು. ನಾವು ಈ ಸಲ ನಮ್ಮ ಊರಿನಲ್ಲೇ ನಡೆಯಬೇಕೆಂದು ಕೇಳಿಕೊಂಡೆವು. 2022ರ ಮಾರ್ಚ್‌ನಲ್ಲಿ ಇದೇ ಮೊದಲ ಬಾರಿಗೆ ಫಿಲಂ ಫೇರ್ ಸೌತ್ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಲಿದೆ ನಮ್ಮ ಕಮರ್ ಫ್ಯಾಕ್ಟರಿ ಸಹಯೋಗದೊಂದಿಗೆ ಎಂದರು ಕಮರ್.
ಪ್ರತಿಭಾವಂತ ಕಲಾವಿದರ ಹಾಗೂ ತಂತ್ರಜ್ಞರ ಸಮ್ಮಿಲನವಾಗುವ ಮಾಹಾ ವೇದಿಕೆ ಈ ಫಿಲಂ ಫೇರ್ ಪ್ರಶಸ್ತಿ ಸಮಾರಂಭ. 66 ವರ್ಷಗಳ ಬಳಿಕ ನಮ್ಮ ಬೆಂಗಳೂರಿನಲ್ಲಿ ಈ ಸಮಾರಂಭ ನಡೆಯುತ್ತಿರುವುದು ತುಂಬಾ ಸಂತೋಷ. ಯಾವುದೇ ಕೊರತೆ ಬಾರದ ಹಾಗೆ ಸಮಾರಂಭ ಕಮರ್ ನಡೆಸುತ್ತಾರೆ ಎಂಬ ನಂಬಿಕೆ ನನಗಿದೆ. ಸಮಾರಂಭ ಯಶಸ್ವಿಯಾಗಲಿ ಎಂದು ಹಾರೈಸಿದರು ನಟಿ ತಾರಾ ಅನುರಾಧ.
ನನ್ನ ಈಗ ಎಲ್ಲರೂ ಪೂಜಾ ಅಂತ ಕರೆಯುವುದಕ್ಕಿಂತ ಹೆಚ್ಚಾಗಿ ಪುಟ್ಟಬೊಮ್ಮ ಎಂದು ಕರೆಯುತ್ತಿದ್ದಾರೆ.
ನಾನು ಈ ಫಿಲಂ ಫೇರ್ ನಲ್ಲಿ ಭಾಗವಹಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನಾನು ಮಂಗಳೂರಿನವಳು. ಆದರೆ ಹುಟ್ಟಿಬೆಳೆದದ್ದು ಮುಂಬೈನಲ್ಲಿ. ನನಗೆ ಕರ್ನಾಟಕದವಳು ಅಂತ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಇದೆ.
ಫಿಲಂ ಫೇರ್ ಕಲಾವಿದರ ಹಾಗೂ ತಂತ್ರಜ್ಞರ ಪ್ರತಿಭೆಗಳನ್ನು ಗುರುತಿಸುವ ಉತ್ತಮ ವೇದಿಕೆ.
ನಾನು ನನ್ನ ತಂದೆ, ತಾಯಿಯೊಂದಿಗೆ ಚಿಕ್ಕವಳಿದ್ದಾಗ ಫಿಲಂ ಫೇರ್ ನೋಡಲು ಹೋಗಿದ್ದೆ. ಪಾಸ್ ಇರಲಿಲ್ಲ. ಹೈದರಾಬಾದ್ ನ ನಮ್ಮ ಕುಟುಂಬದ ಸ್ನೇಹಿತರೊಬ್ಬರು ಪಾಸ್ ವ್ಯವಸ್ಥೆ ಮಾಡಿದ್ದರು.
ಈಗ ನಾನು ಫಿಲಂ ಫೇರ್ ನಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತೋಷ ಆಗುತ್ತಿದೆ ಅಂದರು. ಬೆಂಗಳೂರಿನಲ್ಲಿ ನಡೆಯಲಿರುವ ಫಿಲಂ ಫೇರ್ ಸಮಾರಂಭಕ್ಕೆ ಪೂಜಾ ಹೆಗ್ಡೆ ಶುಭ ಕೋರಿದರು.
ಸೌತ್ ಫಿಲಂ ಫೇರ್ ಪ್ರಶಸ್ತಿ ಸಮಾರಂಭದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ, ನಿರ್ಮಾಪಕ ಉಮೇಶ್ ಬಣಕಾರ್, ಶಾಸಕ ಬೈರತಿ ಸುರೇಶ್, ನಟಿಯರಾದ ಪ್ರಿಯಾಂಕ ಉಪೇಂದ್ರ, ಹರ್ಷಿಕಾ ಪೂಣಚ್ಛ ಮುಂತಾದ ಗಣ್ಯರು ಉಪಸ್ಥಿತರಿದ್ದರು.