Rider.Film Teaser Launch

Tuesday, December 07, 2021

288

 

*ನಿಖಿಲ್ ಕುಮಾರ್ ಅಭಿನಯದ "ರೈಡರ್" ಡಿಸೆಂಬರ್ 24ರಂದು ಅದ್ದೂರಿ ಬಿಡುಗಡೆ.*

 

ನಿಖಿಲ್ ಕುಮಾರ್ ನಾಯಕರಾಗಿ‌‌‌ ನಟಿಸಿರುವ, ಬಹು ನಿರೀಕ್ಷಿತ "ರೈಡರ್" ಚಿತ್ರ ಇದೇ ಡಿಸೆಂಬರ್ 24 ರಂದು ಸುಮಾರು 250 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

 

ಈ ಕುರಿತು ಮಾಹಿತಿ ‌ನೀಡಲು ಆಯೋಜಿಸಲಾಗಿದ್ದ, ‌ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.

 

ನಮ್ಮ ಲಹರಿ ಸಂಸ್ಥೆ ಈ ಹಿಂದೆ ಮಹಾ ಕ್ಷತ್ರಿಯ, ಗಣೇಶನ ಗಲಾಟೆ ಹಾಗೂ ತೆಲುಗಿನ ರೋಜ ಚಿತ್ರಗಳನ್ನು ನಿರ್ಮಾಣ ಮಾಡಿತ್ತು. ಈಗ ಸುನೀಲ್ ಅವರ ಶಿವನಂದಿ ಎಂಟರ್ ಟೈನ್ ಮೆಂಟ್ ಜೊತೆಗೂಡಿ "ರೈಡರ್" ಚಿತ್ರ ನಿರ್ಮಾಣ ಮಾಡಿದ್ದೇವೆ. ನಮ್ಮ ಅಣ್ಣ ಮನೋಹರ ನಾಯ್ಡು ಅವರ ಮಕ್ಕಳಾದ ಚಂದ್ರು ಹಾಗೂ ನವೀನ್ ಈಗ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡುಗಳು ಈಗಾಗಲೇ ಗೆದ್ದಿದೆ. ಚಿತ್ರ ಕೂಡ ಯಶಸ್ವಿಯಾಗಲಿದೆ ಎಂದರು ಲಹರಿ ವೇಲು.

 

ಲಹರಿ ಸಂಸ್ಥೆಯ ಚಂದ್ರು ಹಾಗೂ ನವೀನ್ ಸಹ ಚಿತ್ರಕ್ಕೆ ಶುಭ ಕೋರಿದರು.

 

ಒಳ್ಳೆಯ ಸಿನಿಮಾ ಮಾಡಿದ್ದ ಖುಷಿ ಇದೆ. ಇದೇ ಡಿಸೆಂಬರ್ 24 ರಂದು ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರ ಉತ್ತಮವಾಗಿ ಮೂಡಿ ಬರಲು ಸಹಕಾರ ನೀಡಿದ ಇಡೀ ಚಿತ್ರತಂಡಕ್ಕೆ ನನ್ನ ಧನ್ಯವಾದ. ಮೋಜೊ ಆಪ್ ನಲ್ಲಿ ನಮ್ಮ ಚಿತ್ರದ ಹಾಡು 221 ಮಿಲಿಯನ್‌ ಗೂ ಅಧಿಕ ವೀಕ್ಷಣೆಯಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಸುನೀಲ್ ಗೌಡ.

 ಅಪ್ಪು ಅವರನ್ನು ನೆನೆದು ಮಾತು ಆರಂಭಿಸಿದ ನಾಯಕ ನಿಖಿಲ್ ಕುಮಾರ್ , ಕಲಾವಿದರ ಸಂಘಕ್ಕೆ ಮೊದಲ ಬಾರಿಗೆ ಅಂಬರೀಶ್ ಅವರೊಡನೆ ಬಂದಿದ್ದನ್ನು  ನೆನಪಿಸಿಕೊಂಡರು.

ಸೀತಾರಾಮ ಕಲ್ಯಾಣ ಚಿತ್ರದ ಚಿತ್ರೀಕರಣ ನಡೆಯಬೇಕಾದಾಗ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಈ ಚಿತ್ರದ ಕಥೆ ಹೇಳಿದರು. ನಂತರ ಸುನೀಲ್ ಹಾಗೂ ಲಹರಿ ಸಂಸ್ಥೆ ಮೂಲಕ ಈ ಚಿತ್ರದ ನಿರ್ಮಾಣ ಆರಂಭವಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕಲಾವಿದ ಹಾಗೂ ತಂತ್ರಜ್ಞರನ್ನು ನಿಖಿಲ್ ಅವರು ಪ್ರತ್ಯೇಕವಾಗಿ ಅಭಿನಂದಿಸಿದರು. ಅರ್ಜುನ್ ಜನ್ಯರ ಸಂಗೀತದಲ್ಲಿ ಮೂಡಿ ಬಂದಿರುವ ಈ ಹಾಡುಗಳು ಹಿಟ್ ಆಗಿರುವುದು ಸಂತೋಷ ತಂದಿದೆ. ಇದೇ 24 ನೇ ತಾರೀಖು ನಮ್ಮ ಚಿತ್ರ ತೆರೆಗೆ ಬರಲಿದೆ. ನಿಮ್ಮೆಲ್ಲರ ಬೆಂಬಲವಿರಲಿ ಎನ್ನುತ್ತಾರೆ ನಾಯಕ ನಿಖಿಲ್ ಕುಮಾರ್.

 

ನಿರ್ದೇಶಕ ವಿಜಯ್ ಕುಮಾರ್ ಕೊಂಡ ಚಿತ್ರ ಉತ್ತಮವಾಗಿ ಬರಲು ಸಹಕರಿಸಿದ ತಂಡಕ್ಕೆ ಧನ್ಯವಾದ ತಿಳಿಸಿದರು. ವಿತರಕ ಸುಪ್ರೀತ್ ಚಿತ್ರ ಬಿಡುಗಡೆ ಬಗ್ಗೆ ಮಾಹಿತಿ ನೀಡಿದರು.

 

ನಟರಾದ ರಾಜೇಶ್ ನಟರಂಗ, ಗರುಡ ರಾಮ್,  ಚಿಕ್ಕಣ್ಣ, ಶಿವರಾಜ್ ಕೆ.ಆರ್ ಪೇಟೆ, ಮಂಜು ಪಾವಗಡ, ಗಿರೀಶ್, ಅರ್ಜುನ್ ಗೌಡ, ಸಂತು, ಚಿಲ್ಲರ್ ಮಂಜು, ಬೇಬಿ ಪ್ರಾಣ್ಯ,  ಗೀತರಚನೆಕಾರ ಕವಿರಾಜ್, ನೃತ್ಯ ನಿರ್ದೇಶಕ ಭೂಷಣ್ ಹಾಗೂ ಸಾಹಸ ನಿರ್ದೇಶಕ ಚೇತನ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದರು.

 

ಪತ್ರಿಕಾಗೋಷ್ಠಿ ಆರಂಭದಲ್ಲಿ ಪುನೀತ್ ರಾಜಕುಮಾರ್ ಹಾಗೂ ಹಿರಿಯ ನಟ ಶಿವರಾಮ್ ಅವರನ್ನು ನೆನೆದು ಪತ್ರಿಕಾಗೋಷ್ಠಿ ಆರಂಭಿಸಲಾಯಿತು.

ರೀಲ್ಸ್ ನಲ್ಲಿ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ  ಹತ್ತು ಪ್ರತಿಭೆಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

Copyright@2018 Chitralahari | All Rights Reserved. Photo Journalist K.S. Mokshendra,