Namma Nani Maduveya Prasanga.Film News

Saturday, December 11, 2021

311

 

*ಸುಮುಹೂರ್ತದಲ್ಲಿ ನಡೆಯಿತು*

 *"ನಮ್​ ನಾಣಿ ಮದ್ವೆ ಪ್ರಸಂಗ".*

 

 *ಖ್ಯಾತ ನಿರ್ದೇಶಕ ಟಿ.ಎನ್​. ಸೀತಾರಾಂ ಅವರಿಂದ ಹೇಮಂತ್ ಹೆಗಡೆ ನಿರ್ದೇಶನದ ಈ ಚಿತ್ರಕ್ಕೆ ಚಾಲನೆ.*  *ಚಿತ್ರತಂಡಕ್ಕೆ ಶುಭಕೋರಿದ ಸನ್ಮಾನ್ಯ ಸಚಿವರಾದ ಎಸ್ ಟಿ. ಸೋಮಶೇಖರ್.*

 

ಅನ್ವಿತಾ ಆರ್ಟ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಹೇಮಂತ್ ಹೆಗಡೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ "ನಮ್ ನಾಣಿ ಮದ್ವೆ ಪ್ರಸಂಗ" ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಂ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.  ಸನ್ಮಾನ್ಯ ಸಚಿವರಾದ ಎಸ್ ಟಿ ಸೋಮಶೇಖರ್ ಚಿತ್ರತಂಡಕ್ಕೆ ಶುಭ ಕೋರಿದರು.  ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

 

ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

 

ಎರಡು ವರ್ಷಗಳ ನಂತರ ಮತ್ತೆ ಚಿತ್ರ ಮಾಡುತ್ತಿದ್ದೇನೆ. ಮಲೆನಾಡು ಹುಡುಗನ ಕಥೆ ಇದು. ಮಲೆನಾಡಿನಲ್ಲಿ ಕೃಷಿ ಮಾಡುವ ಹುಡುಗರಿಗೆ ಹುಡುಗಿ ಸಿಗುವುದಿಲ್ಲ. ಜ್ವಲಂತ ಸಮಸ್ಯೆಯೊಂದನ್ನು ಇಟ್ಟುಕೊಂಡು, ಅದನ್ನು ಹಾಸ್ಯದ ಮೂಲಕ ಹೇಳುವುದಕ್ಕೆ ಹೊರಟಿದ್ದೇನೆ. ನನ್ನ ಸ್ವಂತ ಕಸಿನ್​ ಮದುವೆಯಾಗುವುದಕ್ಕೆ ಕಾಶ್ಮೀರದವರೆಗೂ ಹೋಗಿ ಬಂದ. ಸಾಮಾಜಿಕ ಸಂದೇಶವಿರುವ ಸುಂದರ ಚಿತ್ರ ಇದಾಗಲಿದೆ ಎಂಬ ನಂಬಿಕೆ ನನಗಿದೆ. ಜನ ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ ಎಂದರು ಚಿತ್ರದ ನಾಯಕ - ನಿರ್ದೇಶಕ ಹೇಮಂತ್ ಹೆಗಡೆ.

ನನ್ನ ಮಾಯಾಮೃಗ ಧಾರಾವಾಹಿಯಲ್ಲಿ ಹೇಮಂತ್​ ಅವರಿಂದ ಒಂದು ಪಾತ್ರ ಮಾಡಿಸಿದ್ದೆ. ಆ ನಂತರ ಅವರ ಪಾತ್ರ ಬಹಳ ಜನಪ್ರಿಯವಾಯಿತು. ಮತದಾನ ಚಿತ್ರ ಮಾಡುವಾಗ ನನಗೆ ಸೌಮ್ಯ ಮುಖದ ಹೀರೋ ಬೇಕಾಗಿತ್ತು. ಆಗ ನಾನು ಆಯ್ಕೆ ಮಾಡಿಕೊಂಡಿದ್ದು ಹೇಮಂತ್​ ಅವರನ್ನು. ಮಾಯಾಮೃಗದಲ್ಲಿ ಹೇಮಂತ್​ ಪಾತ್ರ ಮದುವೆಗಾಗಿ ಬಹಳ ಕಷ್ಟಪಡುತ್ತದೆ. ಮತದಾನದಲ್ಲಿ ಮದುವೆಯೇ ಆಗುವುದು. ಇದರಲ್ಲೂ ಮದುವೆಗಾಗಿ ಕಷ್ಟಪಡುವ ಪಾತ್ರ ಎಂದು ಕೇಳಿದ್ದೇನೆ. ನಟನೆ ಮಾಡುವಾಗ ದುರಂತ ಪಾತ್ರಗಳನ್ನು ಮಾಡಿದರೂ, ನಿರ್ದೇಶನ ಮಾಡುವಾಗ ಹಾಸ್ಯಮಯ ಚಿತ್ರಗಳನ್ನೇ ಮಾಡುತ್ತಾರೆ, ಜನರನ್ನು ನಗಿಸುವುದಕ್ಕೆ ಪ್ರಯತ್ನ ಮಾಡುತ್ತಾರೆ ಹೇಮಂತ್​. ನಗು ಮತ್ತು ವಿಷಾದದ  ನಡುವೆ ನಾಣಿಯ ಮದುವೆ ಮಾಡಿಸುವುದಕ್ಕೆ ಅವರು ಹೊರಟಿದ್ದಾರೆ  ಅವರು. ಚಿತ್ರ  ಯಶಸ್ವಿಯಾಗಲಿ ಎಂದು ಹಾರೈಸಿದರು ಟಿ.ಎನ್.ಸೀತಾರಾಂ.

 

 ನನಗೆ ಗೊತ್ತಿಲ್ಲ. ಫೋನ್​ ಮಾಡಿ ಒಂದು ಪಾತ್ರ ಮಾಡಬೇಕು ಎಂದ. ನಮ್ಮಿಬ್ಬರದ್ದು ಹಳೆಯ ಪರಿಚಯ. 30 ವರ್ಷಗಳಿಂದ ಸ್ನೇಹಿತರು. ಬೇರೆಬೇರೆ ಹಂತಗಳಲ್ಲಿ, ವೇದಿಕೆಗಳಲ್ಲಿ ಕೆಲಸ ಮಾಡಿದ್ದೇವೆ. ಅವನ ನಿರ್ದೇಶನದಲ್ಲಿ ಅಭಿನಯಿಸಿರಲಿಲ್ಲ. ಈ ಚಿತ್ರದಲ್ಲಿ ನಟಿಸುವುದಕ್ಕೆ ಕೇಳಿದಾಗ, ತಕ್ಷಣ ಒಪ್ಪಿದೆ. ಅವನ ಮೇಲೆ ನಂಬಿಕೆ ಇದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು ರಾಜೇಶ್ ನಟರಂಗ.

 

ಹೇಮಂತ್ ಹೆಗಡೆ ಅವರಿಗೆ ನಾಯಕಿಯರಾಗಿ ಶ್ರೇಯಾ ವಸಂತ್​ ಮತ್ತು ಶ್ರುತಿ ನಂದೀಶ್​ ನಟಿಸುತ್ತಿದ್ದಾರೆ. ಶರತ್​ ಲೋಹಿತಾಶ್ವ, ನಾರಾಯಣಸ್ವಾಮಿ ಮತ್ತು ರಿತೇಶ್​ ಗೌಡ ಪ್ರಮುಖ ಪಾತ್ರಗಳಲ್ಲಿದ್ದಾರೆ.

 ಜನವರಿ 15ರ ನಂತರ ಶಿರಸಿ ಸುತ್ತಮುತ್ತ ಒಂದೇ ಹಂತದ 30 ದಿನಗಳ ಚಿತ್ರೀಕರಣ ನಡೆಯಲಿದೆ.

Copyright@2018 Chitralahari | All Rights Reserved. Photo Journalist K.S. Mokshendra,