Dove Master.Film Press Meet

Saturday, December 18, 2021

260

 

*ಬೆಂಗಳೂರಿನಲ್ಲಿ "ಡವ್ ಮಾಸ್ಟರ್" ಗೆ ಬಿರುಸಿನ ಚಿತ್ರೀಕರಣ.*

 

 *ಮಾನವ ಹಾಗೂ ಸಾಕುಪ್ರಾಣಿಯ ಸಂಬಂಧದ ಸುತ್ತಲ್ಲಿನ ಕಥೆ.*

 

ಕೆಲವರು ತಮ್ಮ ಮಕ್ಕಳಷ್ಟೇ ಪ್ರೀತಿ - ವಾತ್ಸಲ್ಯದಿಂದ ಸಾಕುಪ್ರಾಣಿಗಳನ್ನು ಸಾಕಿರುತ್ತಾರೆ. ಆ ಪ್ರಾಣಿಗೂ ತನ್ನ ಯಜಮಾನನೇ ಸರ್ವಸ್ವ.  ಇದೇ ಅಂಶವನ್ನು ಮುಖ್ಯವಾಗಿಟ್ಟುಕೊಂಡು ನಿರ್ಮಾಣವಾಗಿತ್ತಿರುವ ಚಿತ್ರ "ಡವ್ ಮಾಸ್ಟರ್".

 

ತಬಲ ನಾಣಿ ಹಾಗೂ ರಾಕಿ(ನಾಯಿ)   ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಉತ್ತರಹಳ್ಳಿ ಬಳಿಯ ಮನೆಯೊಂದರಲ್ಲಿ ನಡೆಯುತ್ತಿದೆ.

 

ನಾನು ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಇದು ನನ್ನ ನಿರ್ದೇಶನದ ಚೊಚ್ಚಲ ಚಿತ್ರ. ನಿರ್ಮಾಪಕರ ಬಳಿ ಕಥೆ ಬಗ್ಗೆ ಹೇಳಿದ ತಕ್ಷಣ ಒಪ್ಪಿಕೊಂಡರು. ಮನುಷ್ಯ ಹಾಗೂ ಪ್ರಾಣಿ ನಡುವಿನ ಸಂಬಂಧದ ಮೌಲ್ಯ ತಿಳಿಸುವ ಕಥೆ.

ನಾನೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದೇನೆ. ತಬಲನಾಣಿ, ನವೀನ್ ಪಡೀಲ್, ಸುಂದರ್, ಕುರಿ ಪ್ರತಾಪ್, ಮಿತ್ರ, ಕಾಕ್ರೋಜ್ ಸುಧೀ, ಗಿರೀಶ್ ಜತ್ತಿ, ಗೋವಿಂದೇ ಗೌಡ, ಸ್ವಪ್ನ  ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಹಳ ದಿನಗಳ ನಂತರ ಶಕೀಲ ಅವರು ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಕಿ(ನಾಯಿ) ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದು ನಿರ್ದೇಶಕ ಆರ್ಯ ತಮ್ಮ ತಂಡದ ಪರಿಚಯ ಮಾಡಿಕೊಟ್ಟರು.

ನಾನು ಉದ್ಯಮಿ. ನಿರ್ಮಾಪಕನಾಗಿ ಮೊದಲ ಚಿತ್ರ. ಒಳ್ಳೆಯ ತಂಡದೊಂದಿಗೆ ಒಳ್ಳೆಯ ಸಿನಿಮಾ ಮಾಡುತ್ತಿರುವ ಖುಷಿಯಿದೆ ಎಂದರು ನಿರ್ಮಾಪಕ ರೋಷನ್ ಪಾಷಾ.

 

ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಈ ಚಿತ್ರಕ್ಕೆ ಕಥೆಯೇ ಹೀರೋ. ಎರಡನೇ ಹೀರೋ ನಮ್ಮ ರಾಕಿ. ನಾನು‌ ನಾಯಿಯನ್ನು ಪ್ರೀತಿಯಿಂದ ಮಗನಂತೆ ಸಾಕಿರುತ್ತೇನೆ. ಕೊನೆಗೆ ಆ ನಾಯಿಯಿಂದ ನಿಮಗೆ ಕೆಡಕಾಗುತ್ತದೆ ಎಂದು ತಿಳಿದಾಗ, ನಾನು ಏನು ಮಾಡುತ್ತೇನೆ ಎಂಬುದನ್ನು ನೀವು ಚಿತ್ರದಲ್ಲಿ ನೋಡಬೇಕು. ಎಲ್ಲರೂ ಗಂಡಿಗೆ ಹೆಣ್ಣು ಹುಡುಕಲು ಹೋಗುತ್ತಾರೆ. ನಾವು ಇದರಲ್ಲಿ ನಮ್ಮ ರಾಕಿಗೆ ಕನ್ಯಾನ್ವೇಷಣೆ ಮಾಡುತ್ತೇವೆ. ಉತ್ತಮ ಕಥೆಯ ಈ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ತಬಲನಾಣಿ‌.

 

ತುಂಬಾ ದಿನಗಳ ನಂತರ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಹಿಂದೆ ನಟಿಸಿರುವ ಚಿತ್ರಗಳಿಗಿಂತ ಭಿನ್ನ ಪಾತ್ರ ಎನ್ನಬಹುದು ಎನ್ನುತ್ತಾರೆ ನಟಿ ಶಕೀಲ.

 

ನಾನು ನಿರ್ದೇಶಕ ಆರ್ಯ ಬಹು ದಿನಗಳ ಸ್ನೇಹಿತರು. ಅವರು ಬಂದು ಈ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಲು ಹೇಳಿದರು. ನನಗೆ ಡ್ಯಾನ್ಸ್ ತುಂಬಾ ಕಷ್ಟ ಅಂದೆ. ಇಲ್ಲ ನೀವೇ ಮಾಡಬೇಕು ಅಂದರು. ಈ ಚಿತ್ರದ ಹಾಡೊಂದಕ್ಕೆ ನೃತ್ಯ ಮಾಡುತ್ತಿದ್ದೇನೆ ಎಂದರು ಕಾಕ್ರೋಜ್ ಸುಧೀ‌.

 

ಸುಂದರ್, ನವೀನ್ ಪಡೀಲ್, ಗಿರೀಶ್ ಜತ್ತಿ, ಗೋವಿಂದೇ ಗೌಡ, ಸ್ವಪ್ನ ಮುಂತಾದ ಕಲಾವಿದರು ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಸಂಗೀತ ನಿರ್ದೇಶಕ ಶಕೀಲ್ ಅಹ್ಮದ್ ಹಾಡುಗಳ ಬಗ್ಗೆ, ಕಿರಣ್ ಛಾಯಾಗ್ರಹಣದ ಕುರಿತು ಹಾಗೂ ರಾಕಿ(ಡಾಗ್) ಟ್ರೈನರ್ ಸ್ವಾಮಿ ತಮ್ಮ ಕಾರ್ಯದ ಕುರಿತು ಮಾಹಿತಿ ನೀಡಿದರು.

Copyright@2018 Chitralahari | All Rights Reserved. Photo Journalist K.S. Mokshendra,