ಅನೇಕ ಗಣ್ಯರ ಉಪಸ್ಥಿತಿಯಲ್ಲಿ *"ಆ್ಯಂಗರ್"* ಹಾಡುಗಳ ಲೋಕಾರ್ಪಣೆ.
*ವಿಭಿನ್ನ ಕಥಾಹಂದರದ ಈ ಚಿತ್ರದ ನಾಯಕನಾಗಿ ಮೈಸೂರಿನ ಮನ್ವಿತ್ ಅಭಿನಯ*
ಮೈಸೂರಿನ ಹೊಸತಂಡದ ಹೊಸಪ್ರಯತ್ನ *"ಆ್ಯಂಗರ್". ಈ* ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಉಮೇಶ್ ಬಣಕಾರ್, ಕನ್ನಡಪರ ಹೋರಾಟಗಾರರಾದ ರೂಪೇಶ್ ರಾಜಣ್ಣ ಸೇರಿದಂತೆ ಅನೇಕ ಗಣ್ಯರು ಹಾಡುಗಳನ್ನು ಲೋಕಾರ್ಪಣೆ ಮಾಡಿ, ಶುಭ ಕೋರಿದರು.
ರೊಮ್ಯಾಂಟಿಕ್ ಕ್ರೈಂ ಥ್ರಿಲ್ಲರ್ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಚಿತ್ರದ ನಾಯಕ ಬಾಲ್ಯದ ಕೆಲವು ಘಟನೆಗಳಿಂದ ತುಂಬಾ ಮುಂಗೋಪಿಯಾಗಿರುತ್ತಾನೆ. ನಾಯಕಿಯ ಪ್ರವೇಶದ ನಂತರ ಆತನ ಜೀವನದಲ್ಲಿ ಏನಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು. ಮೈಸೂರು, ಮಂಡ್ಯ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಹಾಡುಗಳು ಸುಂದರವಾಗಿದೆ. ಅಷ್ಟೇ ಸುಂದರವಾಗಿ ಚಿತ್ರವೂ ಮೂಡಿಬಂದಿದೆ. ಸದ್ಯದಲ್ಲೇ ತೆರೆಗೆ ಬರಲಿದೆ ಎಂದರು ನಿರ್ದೇಶಕ ನಟರಾಜ್ ರಂಗಾಯಣ.
ರಂಗಾಯಣದಲ್ಲಿ ಅಭಿನಯ ತರಭೇತಿ ಪಡೆದಿದ್ದೇನೆ. ಇದೇ ಮೊದಲ ಚಿತ್ರ. ಮುಂಗೋಪಿಯಾದರೆ ಏನೆಲ್ಲಾ ಸಂಕಷ್ಟ ಎದರಾಗುತ್ತದೆ ಎಂಬುದನ್ನು ನನ್ನ ಪಾತ್ರದ ಮೂಲಕ ನಿರ್ದೇಶಕರು ಹೇಳಿದ್ದಾರೆ. ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಾಯಕ ಮನ್ವಿತ್.
ಚಿತ್ರದಲ್ಲಿ ಏಳು ಹಾಡುಗಳಿದೆ. ಅದರಲ್ಲಿ ಮೂರು ಬಿಟ್ ಸಾಂಗ್. ಶಶಾಂಕ್ ಶೇಷಗಿರಿ ಸೇರಿದಂತೆ ಎಲ್ಲಾ ಕನ್ನಡ ಗಾಯಕರ ಕಂಠಸಿರಿಯಲ್ಲಿ ಈ ಚಿತ್ರದ ಹಾಡುಗಳು ಮೂಡಿಬಂದಿದೆ ಎಂದು ಸಂಗೀತ ನಿರ್ದೇಶಕ ವಿಜಯ್ ಹರಿತಸ ಮಾಹಿತಿ ನೀಡಿದರು.
ನಾಯಕಿ ಪುಣ್ಯಗೌಡ, ಸಾಹಸ ನಿರ್ದೇಶಕ ಮಾಸ್ ಮಾದ, ಗಾಯಕ ಶಶಾಂಕ್ ಶೇಷಗಿರಿ ಮುಂತಾದ ಚಿತ್ರತಂಡದ ಸದಸ್ಯರು ಚಿತ್ರದ ಬಗ್ಗೆ ಮಾತನಾಡಿದರು.
ಚಿತ್ರದಲ್ಲಿ ಅಭಿನಯಿಸಿರುವ ಶಿವಾಜಿ ಕಾರ್ಯಕ್ರಮ ನಿರೂಪಣೆ ಮಾಡಿದರು