*ಇಬ್ಬರು ಹೆಣ್ಣುಮಕ್ಕಳ ಉಸ್ತುವಾರಿಯಲ್ಲಿ "ಅಂತು ಇಂತು" ಚಿತ್ರ ಬರಲಿದೆ.*
*ಕನ್ನಡದಿಂದ ಕೆನಡಾಕ್ಕೆ ಬಾಂಧವ್ಯ ಬೆಸೆಯುವ ಈ ಚಿತ್ರಕ್ಕೆ ದಿಗಂತ್ ನಾಯಕ.*
ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಕಡಿಮೆ ಎಂಬ ಮಾತು ದೂರವಾಗುವ ಸಮಯ ಬಂದಿದೆ. ಇತ್ತೀಚೆಗೆ ಕನ್ನಡ ಚಿತ್ರಗಳನ್ನು ನಿರ್ದೇಶಿಸುವ ನಿರ್ದೇಶಕಿಯರ ಸಂಖ್ಯೆ ಗಣನೀಯವಾಗಿ ಏರುತ್ತಿದೆ.
ಕೆನಡಾ ನಿವಾಸಿ ಬೃಂದಾ ಮುರಳೀಧರ್ "ಅಂತು ಇಂತು" ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಕಿರುತೆರೆ, ಹಿರಿತೆರೆ ನಟಿ ಹಾಗೂ ನಿರ್ಮಾಪಕಿ ಜಯಶ್ರೀ ರಾಜ್, ಬೃಂದಾ ಅವರಿಗೆ ನಿರ್ಮಾಣದಲ್ಲಿ ಸಾಥ್ ನೀಡಲಿದ್ದಾರೆ. ದಿಗಂತ್ ಈ ಚಿತ್ರದ ನಾಯಕನಾಗಿ ನಟಿಸಲಿದ್ದಾರೆ. ಈ ಕುರಿತು ಚಿತ್ರತಂಡ ಮಾಧ್ಯಮದ ಮುಂದೆ ಮಾತನಾಡಿತು.
ನಾನು ಮೂಲತಃ ಮೈಸೂರಿವಳು. ರಂಗ ಕಲಾವಿದೆ. ಇಪ್ಪತ್ತೈದು ವರ್ಷಗಳಿಂದ ಕೆನಡಾದಲ್ಲಿದ್ದೀನಿ. ಅಲ್ಲೇ ನಾನು ಹಾಗೂ ನನ್ನ ಪತಿ ಮುರಳಿಧರ್ ನಾಟಕ ಸೇರಿದಂತೆ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ನಾನು ಈ ಹಿಂದೆ ನಾಟ್ ನಾಟ್ ಎಂಬ ಇಂಗ್ಲಿಷ್ ಚಿತ್ರ ನಿರ್ದೇಶಿಸಿದ್ದೆ. ಕನ್ನಡದಲ್ಲಿ ಇದು ಮೊದಲ ಚಿತ್ರ. ಇದು ಸ್ವದೇಶದಿಂದ ವಿದೇಶಕ್ಕೆ ಹೋಗಿ ನೆಲೆಸಿರುವವರ ಕಥೆ. ನಾವು ಎಲ್ಲೇ ಇದ್ದರೂ ನಮ್ಮ ಹುಟ್ಟಿದ ಊರಿನ ಮಮತೆ ಸದಾ ಸೆಳೆಯುತ್ತಿರುತ್ತದೆ. ಈ ರೀತಿ ಭಾವನಾತ್ಮಕ ಕಥೆಯುಳ್ಳ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ದಿಗಂತ್ ನಾಯಕನಾಗಿ ನಟಿಸುತ್ತಿದ್ದಾರೆ . ಗಿರಿಜಾ ಲೋಕೇಶ್, ರವಿಶಂಕರ್ ಗೌಡ ಪ್ರಮುಖಪಾತ್ರದಲ್ಲಿರಲಿದ್ದಾರೆ. ಕೆನಡಾದ ಸ್ಥಳೀಯ ತಂತ್ರಜ್ಞರು ಇದರಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಜಯಶ್ರೀ ರಾಜ್ ನನ್ನೊಂದಿಗೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ ಎಂದು ಬೃಂದಾ ಮುರಳಿಧರ್ ಮಾಹಿತಿ ನೀಡಿದರು.
ನಾನು 25 ವರ್ಷಗಳಿಂದ ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ಮಾಣ ಕೂಡ ಮಾಡಿದ್ದೇನೆ. ಇದೇ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದೇನೆ. ನಿರ್ದೇಶಕಿ ಬೃಂದಾ ಅವರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು ಎಂದರು ನಿರ್ಮಾಪಕಿ ಜಯಶ್ರೀ ರಾಜ್.
ನಾನು ಭಾರತದಿಂದ ಕೆನಡಾಕ್ಕೆ ಬಂದ ಹುಡುಗನ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಕಥೆ ತುಂಬಾ ಚೆನ್ನಾಗಿದೆ. ಜಾಸ್ತಿ ಹೇಳುವ ಹಾಗಿಲ್ಲ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಾಯಕ ದಿಗಂತ್.
ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಗಿರಿಜಾ ಲೋಕೇಶ್ ಹಾಗೂ ರವಿಶಂಕರ್ ಗೌಡ ಸಹ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.
ಕರ್ನಾಟಕ ರಾಜ್ಯದ ಮಂತ್ರಿಗಳಾದ ಶ್ರೀ ಶಂಕರ್ ಪಾಟೀಲ್ ಅವರು ಪತ್ರಿಕಾಗೋಷ್ಠಿಗೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.