*ಏಪ್ರಿಲ್ 1 ರ ಬದಲು ಏಪ್ರಿಲ್ 8ಕ್ಕೆ ಬರಲಿದೆ "ತ್ರಿಕೋನ"* .
ಏ.1ರಂದು ಬಿಡುಗಡೆಯಾಗಬೇಕಿದ್ದ ತ್ರಿಕೋನ ಚಿತ್ರವು ಈಗ ಏ.8ಕ್ಕೆ ಮುಂದೂಡಲ್ಪಟ್ಟಿದೆ. ಈ ಸಂಬಂಧ ನಿರ್ಮಾಪಕ ರಾಜಶೇಖರ್, ರಾಯಭಾರಿ ಸುಚೇಂದ್ರ ಪ್ರಸಾದ್ ಮತ್ತು ನಿರ್ದೇಶಕ ಚಂದ್ರಕಾಂತ್ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯವನ್ನು ಹಂಚಿಕೊಂಡರು.
ಪುನೀತ್ ರಾಜಕುಮಾರ್ ಅಭಿನಯದ "ಜೇಮ್ಸ್" ಚಿತ್ರವು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ವಿತರಕರ ಜತೆಗೆ ಮಾತನಾಡುವಾಗ, "ಜೇಮ್ಸ್' ಚಿತ್ರವು ಎಲ್ಲೆಲ್ಲಿ
ಪ್ರದರ್ಶನವಾಗುತ್ತಿದೆ, ಆ ಕೆಲವು ಚಿತ್ರಮಂದಿರಗಳನ್ನು ಕೊಡಿಸುವುದಾಗಿ ಹೇಳಿದರು. ನಾನು ಪುನೀತ್ ಅಭಿಮಾನಿಯಾಗಿ, ಅವರ ಚಿತ್ರ ಓಡುತ್ತಿರುವ ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾ ಪ್ರದರ್ಶನ ಮಾಡುವುದಕ್ಕೆ ಮನಸ್ಸು ಒಪ್ಪುತ್ತಲ್ಲ. ಇದು ಮೊದಲ ಕಾರಣ. ನಾವು ಏಪ್ರಿಲ್ 01ಕ್ಕೆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದಾಗ ಒಂದು ಚಿತ್ರ ಸಹ ಘೋಷಣೆಯಾಗಿರಲಿಲ್ಲ. ಒಂದು ಅಥವಾ ಎರಡು ಸಿನಿಮಾಗಳು ಬಿಡುಗಡೆ ಆಗಬಹುದು ಎಂದು ಊಹಿಸಿದ್ದೆವು. ಅದರಂತೆ ಪ್ರಚಾರ ಶುರು ಮಾಡಿದ್ದೆವು. ಆದರೆ, ಒಂದೊಂದೇ ಸಿನಿಮಾಗಳು ಘೋಷಣೆಯಾದವು. ಆರರಿಂದ ಏಳು ಸಿನಿಮಾಗಳು ಅಂದು ಬಿಡುಗಡೆಯಾಗುವ ಘೋಷಣೆಯಾಗಿವೆ. ನಾವು ಕನ್ನಡ ಸಿನಿಮಾದವರೇ ಚಿತ್ರಮಂದಿರಗಳಿಗಾಗಿ ಪರಸ್ಪರ ಕಿತ್ತಾಡುವ ಪರಿಸ್ಥಿತಿ ಇದೆ. ನಾವು ಮುಂಚೆಯೇ ಘೋಷಣೆ ಮಾಡಿದ್ದೇವೆ,
ನೀವು ತಡವಾಗಿ ಬಿಡುಗಡೆ ಮಾಡಿ ಎಂದು ಹೇಳುವುದು ಎಷ್ಟು ಸೂಕ್ತ? ಎಂದು ಪ್ರಶ್ನೆ ಹಾಕಿಕೊಂಡಾಗ, ನಾವೇ ಮುಂದಕ್ಕೆ ಹೋಗುವ ಎಂದು ಚರ್ಚಿಸಿ, ಏಪ್ರಿಲ್ 08ಕ್ಕೆ ಬಿಡುಗಡೆ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದೇವೆ. ಮೂರನೇ ಕಾರಣ ಎಂದರೆ, ಈ ಚಿತ್ರದ ಮೂಲಕ ನಾವು ತಾಳ್ಮೆಯ ಬಗ್ಗೆ ಹೇಳುವುದಕ್ಕೆ ಹೊರಟಿದ್ದೇವೆ. ಈಗಾಗಲೇ ಟೀಸರ್ ಮತ್ತು ಟ್ರೇಲರ್ನಲ್ಲಿ ಅಹಂ, ಶಕ್ತಿ ಮತ್ತು ತಾಳ್ಮೆಯ ನಡುವೆ ಯಾರಿಗೆ ಜಯ ಸಿಗುತ್ತದೆ ಎಂದು ಹೇಳುವುದಕ್ಕೆ ಹೊರಟಿದ್ದೇವೆ. ನಾವು ಪ್ರಚಾರ ಮಾಡಿದ್ದೀವಿ, ಇನ್ನೂ ಮಾಡುತ್ತೇವೆ ಎನ್ನುವ ಶಕ್ತಿ ಪ್ರದರ್ಶನವಾಗಲೀ ಅಥವಾ ಚಿತ್ರ ಚೆನ್ನಾಗಿ ಬಂದಿದ್ದು ನೋಡಿದವರು ಒಪ್ಪಿಕೊಳ್ಳುತ್ತಾರೆ ಎಂಬ ಅಹಂಕಾರವಾಗಲೀ ಇಲ್ಲ. ನಾವು ತಾಳ್ಮೆಯಿಂದ ಒಂದು ವಾರ ಮುಂದಕ್ಕೆ ಹೋದರೂ ಪರವಾಗಿಲ್ಲ ಎಂದು ಏಪ್ರಿಲ್ 8 ರಂದು ಬಿಡುಗಡೆ ಮಾಡುತ್ತಿದ್ದೇವೆ ಎಂದು ನಿರ್ಮಾಪಕ ಹಾಗೂ ಕಥೆಗಾರ ರಾಜಶೇಖರ್ ತಿಳಿಸಿದರು.
ಚಿತ್ರದ ರಾಯಭಾರಿ
ಸುಚೇಂದ್ರ ಪ್ರಸಾದ್ ಮಾತನಾಡುತ್ತಾ, ನಿರ್ಮಾಪಕರ ಕಷ್ಟಗಳನ್ನು ಅರ್ಥ ಮಾಡಿಕೊಂಡಿರುವವರು ನೀವು. ಆಗುಹೋಗುಗಳ ಜತೆಗೆ ನಿರ್ಮಾಪಕರ ಚಡಪಡಿಕೆ ನಿಮಗೆ ಗೊತ್ತಿರುತ್ತದೆ. ತ್ರಿಕೋನದ ಗುರಿ ಹೆಚ್ಚಿನ ಜನರಿಗೆ ಹೇಗೆ ತಲುಪುವುದು ಎಂಬ ಕಡೆ ಇದೆ. ಈ ಚಿತ್ರವನ್ನು ಸಿದ್ಧಸೂತ್ರಗಳ ಜಾಡಿನಿಂದ ಹೊರತಪ್ಪಿಸಿ ಮಾಡಿದ್ದಾರೆ. ಸಿನಿಮಾ ಹೆಸರಿನಲ್ಲಿ ಇನ್ನೂ ಏನೇನೋ ಮಾಡುವುದಕ್ಕೆ ಸಾಧ್ಯವಿದೆ ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ. ತ್ರಿಕೋನವನ್ನು ಹಲವರಿಗೆ ತಲುಪಿಸುವ ಪ್ರಯತ್ನ ಮಾಡಿದ್ದೀರಿ. ಎಂಟರಂದು ಅದು ಇನ್ನಷ್ಟು ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕೈಜೋಡಿಸಿ. ಮಿಕ್ಕಂತೆ ಈ ಚಿತ್ರ ಚರ್ವಿತಚರ್ವಣವಾಗಿರದೆ, ಅಭಿರುಚಿಯನ್ನು ಬಿತ್ತುವ ಕೆಲಸ ಮಾಡಲಿ ಎಂಬುದು ನನ್ನ ಹಾರೈಕೆ ಎಂದರು.
ನಿರ್ದೇಶಕ ಚಂದ್ರಕಾಂತ್ ಸಹ ತಮ್ಮ ಸಿನಮಾ ಬಿಡುಗಡೆ ಮುಂದಕ್ಕೆ ಹೋಗಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದರು.