*ವಿಶಿಷ್ಟ ಹಾಗು ವಿಭಿನ್ನವಾಗಿದೆ "ಕಾಣೆಯಾದವರ ಬಗ್ಗೆ ಪ್ರಕಟಣೆ" ಚಿತ್ರದ ಟ್ರೇಲರ್.*
*ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದ ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ.*
ಕನ್ನಡಿಗರು ಉತ್ತಮಕಥೆಯುಳ್ಳ ಚಿತ್ರಗಳನ್ನು ಮೆಚ್ಚಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂತಹದೊಂದು ವಿಶಿಷ್ಟ ಹಾಗೂ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ "ಕಾಣೆಯಾದವರ ಬಗ್ಗೆ ಪ್ರಕಟಣೆ".
ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.
ರಂಗಾಯಣ ರಘು, ರವಿಶಂಕರ್ ಹಾಗೂ ತಬಲನಾಣಿ ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶಿಸಿದ್ದಾರೆ.
ಮುಸುಕು ಧರಿಸಿದ ಮೂರು ಪ್ರಮುಖ ಪಾತ್ರಧಾರಿಗಳನ್ನು, ಪೊಲೀಸ್ ಪಾತ್ರಧಾರಿ ವೇದಿಕೆಗೆ ಕರೆತರುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ನಾನು ಹಾಗೂ ನಿರ್ದೇಶಕ ಅನಿಲ್ ಹಲವು ವರ್ಷಗಳ ಸ್ನೇಹಿತರು. ಆಗ ನಾವು ಕಳೆದ ದಿನಗಳು ಸುಂದರ. ಆಗಿನಿಂದ ಅನಿಲ್ ಗೆ ಬರವಣಿಗೆಯಲ್ಲಿ ಆಸಕ್ತಿ. ಮುಂದೆ ಆತನ ಸಂಭಾಷಣೆಯಲ್ಲಿ ಉತ್ತಮ ಚಿತ್ರಗಳು ಬಂದಿದೆ. ನಿರ್ದೇಶಕನಾಗೂ ಆತ ಚಿರಪರಿಚಿತ ಈಗ ತೀರ ಅಪರೂಪವೆಂಬ ಕಥಾವಸ್ತು ಆಯ್ಕೆಮಾಡಿಕೊಂಡು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ರಂಗಾಯಣ ರಘು, ರವಿಶಂಕರ್, ತಬಲನಾಣಿ ಹಾಗೂ ಚಿಕ್ಕಣ್ಣ ಅವರಂತಹ ಉತ್ತಮ ಕಲಾವಿದರ ಅಭಿನಯದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಒಳ್ಳೆಯದಾಗಲಿ. ನಾನು ಸಹ ಮೊದಲ ದಿನ ಈ ಚಿತ್ರ ನೋಡುತ್ತೇನೆ ಎಂದರು ದುನಿಯಾ ವಿಜಯ್.
ಒಬ್ಬ ನಾಯಕ ಎರಡೂವರೆ ಗಂಟೆಗಳ ಕಾಲ ಒಬ್ಬನೇ ತೆರೆಯ ಮೆಲೆ ಕಾಣಲು ಸಾಧ್ಯವಿಲ್ಲ. ನಾಯಕನಿಗೆ ಇಲ್ಲಿರುವ ಅದ್ಭುತ ಕಲಾವಿದರ ಸಹಕಾರಬೇಕು. ನಮ್ಮ ಚಿತ್ರದಲ್ಲಿ ರಘು ಅಣ್ಣ ಮಾಡಿರುವ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಕಲಾವಿದರ ಸಂಗಮದಲ್ಲಿ ಮೂಡಿಬಂದಿರುವ ಈ ಚಿತ್ರ ನೋಡಲು ನಾನು ಕಾತುರಾನಾಗಿದ್ದೀನಿ ಎಂದರು ಡಾಲಿ ಧನಂಜಯ.
ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ದುನಿಯಾ ವಿಜಯ್ ಹಾಗೂ ಡಾಲಿ ಅವರಿಗೆ ಧನ್ಯವಾದ. ವಿಜಯ್ ಅವರೊಂದಿಗೆ ಕಳೆದ ಆ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಆಗಿನಿಂದಲೂ ತನ್ನ ಹತ್ತಿರದವರನ್ನು ಬೆಳೆಸುವ ಗುಣ ವಿಜಿ ಅವರದು. ಇನ್ನೂ ಚಿತ್ರದ ಬಗ್ಗೆ ಹೇಳುವುದಾದರೆ ಇದೊಂದು ವಿಭಿನ್ನ ಕಥಾವಸ್ತು.
ರಂಗಾಯಣ ರಘು, ರವಿಶಂಕರ್, ತಬಲ ನಾಣಿ, ಚಿಕ್ಕಣ್ಣ, ತಿಲಕ್, ಆಶಿಕಾ ರಂಗನಾಥ್ ಮುಂತಾದ ಕಲಾವಿದರು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ನನ್ನ ಅಣ್ಣ ಜಿತೇಂದ್ರ ಮಂಜುನಾಥ್ ನಮ್ಮ ಚಿತ್ರಕ್ಕೆ ಹಣ ಹೂಡಿದ್ದಾರೆ. ಈ ಚಿತ್ರಕ್ಕೆ ನನ್ನ ಸ್ನೇಹಿತರ ಸಹಕಾರ ಅಪಾರ. ಈಗ ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಮೇನಲ್ಲಿ ಚಿತ್ರ ತೆರೆಗೆ ತರುತ್ತೇವೆ ಎಂದರು ನಿರ್ದೇಶಕ ಅನಿಲ್ ಕುಮಾರ್.
ನಮ್ಮನ್ನು ಹಾರೈಸಲು ಬಂದಿರುವ ವಿಜಿ ಹಾಗೂ ಡಾಲಿ ಅವರಿಗೆ ಧನ್ಯವಾದ. ಕನ್ನಡದಲ್ಲಿ ಕಾಲಕಾಲಕ್ಕೆ ತಕ್ಕ ಹಾಗೆ ಉತ್ತಮ ಕಥಾವಸ್ತುವುಳ್ಳ ಚಿತ್ರಗಳು ಬರುತ್ತದೆ. ಕನ್ನಡಿಗ ಉತ್ತಮ ಕಥೆಯುಳ್ಳ ಚಿತ್ರಕ್ಕೆ ಜೈ ಎನ್ನುತ್ತಾನೆ. ಅನಿಲ್ ಕುಮಾರ್ ಸಹ ಉತ್ತಮ ಕಥೆಯುಳ್ಳ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರ ಗೆಲ್ಲುವ ಭರವಸೆಯಿದೆ ಎಂದರು ರಂಗಾಯಣ ರಘು.
ನಾಯಕ, ನಾಯಕಿ ಅಂತ ಇಲ್ಲದೇ, ಕಥೆಯನ್ನೇ ಕೇಂದ್ರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ "ಕಾಣೆಯಾದವರ ಬಗ್ಗೆ ಪ್ರಕಟಣೆ". ಇಂತಹ ಪ್ರಯತ್ನ ಮಾಡಿರುವ ಅನಿಲ್ ಕುಮಾರ್ ಅವರಿಗೆ ಹಾಗೂ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು ರವಿಶಂಕರ್.
ಉತ್ತಮ ಕಥೆ ಆಯ್ಕೆ ಮಾಡಿಕೊಂಡಿರುವ ನಿರ್ಮಾಪಕ , ನಿರ್ದೇಶಕರಿಗೆ ಅಭಿನಂದನೆ. ಕಲಾವಿದನಿಗೆ ತಾನು ಮಾಡಿದ್ದ ಪಾತ್ರಗಳಲ್ಲಿ ಕೆಲವು ಪಾತ್ರಗಳು ಮನಸ್ಸಿಗೆ ಹತ್ತಿರವಾಗುತ್ತದೆ. ಅಂತಹ ಪಾತ್ರದಲ್ಲಿ ನನಗೆ ಈ ಚಿತ್ರದ ಪಾತ್ರ ಕೂಡ ಒಂದು ಎಂದರು ತಬಲಾ ನಾಣಿ.
ಇದು ಮಾಮೂಲಿ ಚಿತ್ರಗಳಂತೆ ಅಲ್ಲ. ಚಿತ್ರಗಳಲ್ಲಿ ಅಭಿನಯಿಸುವ ವಿಲನ್ ಗಳು ಹಾಗೂ ಕಾಮಿಡಿಯನ್ಸ್ ಗಳ ಸಮಾಗಮದಲ್ಲಿ ಮೂಡಿಬಂದಿರುವ ಚಿತ್ರವಿದು. ಈ ಚಿತ್ರದಲ್ಲಿ ಕಥೆಯೇ ನಾಯಕ. ಇಂತಹ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ಚಿಕ್ಕಣ್ಣ.
ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಿಲಕ್, ಕೆ ಜಿ ಎಫ್ ೨ ಚಿತ್ರದಲ್ಲಿ ನಟಿಸಿರುವ ವಿಜಯ್ ಹಾಗೂ ನಿರ್ಮಾಪಕ ಜಿತೇಂದ್ರ ಮಂಜುನಾಥ್ ಸಹ ಚಿತ್ರದ ಬಗ್ಗೆ ಮಾತನಾಡಿದರು.
ನಾಯಕ ಧೀರನ್ ರಾಮಕುಮಾರ್, ಕೆ.ಜಿ.ಎಫ್ ಖ್ಯಾತಿಯ ಗರುಡ ರಾಮ್, ಪೊಲೀಸ್ ಅಧಿಕಾರಿ ಯಶವಂತ್ ಹಾಗೂ ನಿರ್ಮಾಪಕ, ನಿರ್ದೇಶಕ ಡಾ||ಸೂರಿ " ಕಾಣೆಯಾದವರ ಬಗ್ಗೆ ಪ್ರಕಟಣೆ" ಚಿತ್ರಕ್ಕೆ ಶುಭ ಹಾರೈಸಿದರು.