ಕಿರಿಕ್ ಹುಡುಗಿ ಗ್ಯಾರೇಜ್ ಹುಡುಗನ ಪ್ರೇಮಕಥೆ
ಕಿರಿಕ್ ಎಂದಕೂಡಲೇ ನಮಗೆಲ್ಲ ನೆನಪಾಗೋದು ರಕ್ಷಿತ್ ಶೆಟ್ಟಿ, ರಶ್ಮಿಕಾ ಅಭಿನಯದ ಕಿರಿಕ್ ಪಾರ್ಟಿ. ಈಗ ಕಿರಿಕ್ ಹೆಸರಿನಲ್ಲೇ ಹೊಸ ಚಿತ್ರವೊಂದು ನಿರ್ಮಾಣವಾಗುತ್ತಿದೆ. ರವಿ ಶೆಟ್ಟಿ, ಪೂಜಾ ರಾಮಚಂದ್ರ ನಾಯಕ, ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ನಾಗತಿಹಳ್ಳಿ ಗಂಗಾಧರ್ ಆಕ್ಷನ್ ಕಟ್ ಹೇಳಿದ್ದಾರೆ. ಶ್ರೀ ಮುಕ್ತಿನಾಗ ಫಿಲಂಸ್ ಲಾಂಛನದಲ್ಲಿ ನಾಗರಾಜ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಕೀರ್ತಿವರ್ಧನ್ ಅವರ ಛಾಯಾಗ್ರಹಣ ಹಾಗೂ ಕಾರ್ತೀಕ್ ವೆಂಕಟೇಶ್ ಅವರ ಸಂಗೀತ ಸಂಯೋಜನೆಯಿರುವ ಈ ಚಿತ್ರಕ್ಕೆ ಭಾರ್ಗವ ವಿಎಫ್‍ಎಕ್ಸ್ ಕಾರ್ಯ ನಿರ್ವಹಿಸಿದ್ದಾರೆ.
ಈ ಸಂದರ್ಭದಲ್ಲಿ ನಾಯಕ ರವಿ ಶೆಟ್ಟಿ ಮಾತನಾಡುತ್ತ ನಿರ್ದೇಶಕರು ನನ್ನ ಸ್ನೇಹಿತರು, ನಿರ್ಮಾಪಕ ನಾಗರಾಜು ಅವರು ನನ್ನ ಸಂಬಂಧಿಕರು, ಗ್ಯಾರೇಜ್ ಮೆಕ್ಯಾನಿಕ್ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಕರ್ತ ಚಿತ್ರದಲ್ಲಿ ನೆಗೆಟಿವ್ ರೋಲ್ ಮಾಡಿದ್ದ ನಾನು ಹೀರೋ ಆಗಿ ನಟಿಸಿರುವ ಮೊದಲ ಚಿತ್ರವಿದು, ಮಾತಿನಭಾಗ ಮುಗಿದು ಹಾಡುಗಳ ಚಿತ್ರೀಕರಣ ಮಾತ್ರವೇ ಬಾಕಿ ಇದೆ ಎಂದು ಹೇಳಿದರು.
ಸಂಗೀತ ನಿರ್ದೇಶಕ ಕಾರ್ತೀಕ್ ವೆಂಕಟೇಶ್ ಮಾತನಾಡಿ ಈ ಚಿತ್ರದಲ್ಲಿ 4 ಹಾಡುಗಳಿದ್ದು, ಮುಂದಿನ ತಿಂಗಳು ಆಡಿಯೋ ರಿಲೀಸ್ ಮಾಡುವ ಯೋಜನೆಯಿದೆ. ನಾಯಕ ಮಿಡಲ್‍ಕ್ಲಾಸ್ ಹುಡುಗನಾದರೆ, ನಾಯಕಿ ಹೈಕ್ಲಾಸ್ ಹುಡುಗಿಯಾಗಿರುತ್ತಾಳೆ. ಅಂಡರ್ ವರ್ಲ್ಡ್ ಡಾನ್ ಮಗಳು ಹಾಗೂ ಗ್ಯಾರೇಜ್ ಮೆಕ್ಯಾನಿಕ್ ನಡುವೆ ನಡೆಯುವ ಪ್ರೇಮಕಥೆಯಿದು. ಅಹಂಕಾರಿ ನಾಯಕಿಯ ಹುಟ್ಟಡಗಿಸಲು ನಾಯಕ ಆಕೆಯನ್ನು ಕಿಡ್ನಾಪ್ ಮಾಡಿಕೊಂಡು ಹೋಗುವಾಗ ಇಬ್ಬರ ನಡುವೆ ದ್ವೇಶ ಕರಗಿ ಪ್ರೀತಿ ಮೂಡುತ್ತದೆ. ಕ್ಲೇ ಮ್ಯಾಕ್ಸ್ ನಲ್ಲಿ ಅವರಿಬ್ಬರೂ ಒಂದಾಗ್ತಾರಾ ಇಲ್ವಾ ಅನ್ನೋದೇ ಕಥೆ ಎಂದು ಹೇಳಿದರು. ನಾಯಕಿಯ ತಂದೆಯಾಗಿ ಬಲ ರಾಜವಾಡಿ, ತಾಯಿಯಾಗಿ ಜ್ಯೋತಿ ನಟಿಸಿದ್ದಾರೆ. ನಿರ್ಮಾಪಕ ನಾಗರಾಜ್ ಮಾತನಾಡಿ ನಿರ್ದೇಶಕರು ಬಂದು ಈ ಕಥೆ ಹೇಳಿದಾಗ ಕಂಟೆಂಟ್ ಇಷ್ಟವಾಯಿತು. ಹಾಗಾಗಿ ನಿರ್ಮಾಣ ಮಾಡಲು ಒಪ್ಪಿದೆ ಎಂದರು. ಹರೀಶ್ ಶೆಟ್ಟಿ ಚಿತ್ರದ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ನಾಯಕಿ ಪೂಜಾ ಮಾತನಾಡಿ ಕಾಲೇಜ್‍ಗೆ ಹೋಗುತ್ತಲೇ ನಾನು ಮಾಡುವಂಥ ಕಿರಿಕ್‍ಗಳಿಂದ ನನ್ನ ಲೈಫ್‍ನಲ್ಲಿ ಏನೇನಾಗುತ್ತೆ ಎನ್ನುವುದೇ ಚಿತ್ರದ ಕಥೆ ಎಂದರು.
ಛಾಯಾಗ್ರಾಹಕ ಕೀರ್ತಿವರ್ಧನ್ ಮಾತನಾಡುತ್ತ ನಿರ್ದೇಶಕ ಗಂಗಾಧರ್ ನನ್ಜೊತೆ ಅಸಿಸ್ಟೆಂಟ್ ಆಗಿದ್ದರು, 3 ವರ್ಷದ ಹಿಂದೆಯೇ ಮಾಡಿಕೊಂಡಿದ್ದ ಕಥೆಯಿದು, ಕಾರವಾರದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಭಾಗವನ್ನು ಚಿತ್ರೀಕರಿಸಿದ್ದೇವೆ. ಸದ್ಯ ಚಿತ್ರದ ಡಬ್ಬಿಂಗ್ ನಡೆಯುತ್ತಿದೆ ಎಂದು ಹೇಳಿದರು. ಹಿರಿಯ ಕಲಾವಿದರಾದ ಹೊನ್ನವಳ್ಳಿ ಕೃಷ್ಣ ಗ್ಯಾರೇಜ್ ಮಾಲೀಕನಾಗಿ ನಟಿಸಿದ್ದರೆ, ಮತ್ತೊಬ್ಬನಟ ಟೆನ್ನಿಸ್‍ಕೃಷ್ಣ ಅವರು ತರಕಾರಿ ಏಜೆಂಟ್ ಪಾತ್ರವನ್ನು ನಿರ್ವಹಿಸಿದ್ದಾರೆ. ಕಾರವಾರ, ಮೈಸೂರು, ನಾಗಮಂಗಲದಲ್ಲಿ ಕಿರಿಕ್ ಚಿತ್ರಕ್ಕೆ 30 ದಿನಗಳಕಾಲ ಚಿತ್ರೀಕರಣ ನಡೆಸಲಾಗಿದೆ.