*ಸಾಮಾಜಿಕ ಸಮಸ್ಯೆಗಳ ವಿರುದ್ಧ ನಡೆಸುವ ಹೋರಾಟದ ಕಥಾಹಂದರವೇ "ಕೈಲಾಸ ಕಾಸಿದ್ರೆ"*
*ತಾರಕಾಸುರ ಖ್ಯಾತಿಯ ವೈಭವ್ ನಾಯಕ.*
ಅನಂತಪುರದ ವಾಸಿಕ್ ಅನ್ಸಾದ್ ಅವರು ನಿರ್ಮಿಸಿರುವ, ನಾಗ್ ವೆಂಕಟ್ ನಿರ್ದೇಶನದಲ್ಲಿ "ತಾರಕಾಸುರ" ಖ್ಯಾತಿಯ ವೈಭವ್ ನಾಯಕನಾಗಿ ನಟಿಸಿರುವ "ಕೈಲಾಸ ಕಾಸಿದ್ರೆ" ಚಿತ್ರ ಟೀಸರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಮಾಧ್ಯಮದ ಮುಂದೆ ಚಿತ್ರತಂಡ ಚಿತ್ರದ ಕುರಿತು ಮಾಹಿತಿ ನೀಡಿತು.
ನಮ್ಮ ಈ ಸಮಾಜದಲ್ಲಿ ಯುವಜನತೆ ಡ್ರಗ್ ಮಾಫಿಯಾ ಸೇರಿದಂತೆ ಅನೇಕ ದುಷ್ಟ ಚಟುವಟಿಕೆಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನೇ ಕೇಂದ್ರವಾಗಿಟ್ಟುಕೊಂಡು ಈ ಚಿತ್ರವನ್ನು ನಿರ್ದೇಶಿಸಿದ್ದೇನೆ. ಬರೀ ಇಷ್ಟೇ ಅಲ್ಲದೇ ಇದೊಂದು ಪ್ರೇಮ ಕಾವ್ಯ. ನಗುವಿಗೂ ನಮ್ಮ ಸಿನಿಮಾದಲ್ಲಿ ಭರವಿಲ್ಲ. ನಾನು ಮೂಲತಃ ಬಳ್ಳಾರಿಯವನು. ಇದು ನನ್ನ ಮೊದಲ ಚಿತ್ರ ಎಂದು ತಿಳಿಸಿದ ನಿರ್ದೇಶಕ ನಾಗ್ ವೆಂಕಟ್, ನಮ್ಮ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಆದರೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಪ್ರಮಾಣಪತ್ರ ನೀಡದೆ, ಆರ್ ಸಿಗೆ ಕಳುಹಿಸಿದೆ. ಕಾರಣ ಗೊತ್ತಿಲ್ಲ. ಆರ್.ಸಿ ಯಲ್ಲಿ ನಮ್ಮ ಚಿತ್ರಕ್ಕೆ ಪ್ರಮಾಣ ಪತ್ರ ದೊರಕಿದ ಕೂಡಲೆ ಚಿತ್ರವನ್ನು ತೆರೆಗೆ ತರುತ್ತೇವೆ ಎಂದರು.
ಇದು ಕನ್ನಡದಲ್ಲಿ ಮಾತ್ರ ಅಲ್ಲ. ನನಗೆ ತಿಳಿದ ಹಾಗೆ ಇಡೀ ದಕ್ಷಿಣ ಭಾರತದಲ್ಲೇ ಹೊಸ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಿರುವ ಚಿತ್ರ ಅಂತ ಹೇಳಬಹುದು. ಎರಡು ವರ್ಷಗಳ ಹಿಂದೆ ಈ ಚಿತ್ರ ಶುರುವಾಯಿತು. ಸ್ವಲ್ಪ ದಿನಗಳ ನಂತರ ನಾಯಕಿ ಚಿತ್ರ ಬಿಟ್ಟು ಹೊರ ನಡೆದರು. ಈ ವಿಷಯದಲ್ಲಿ ನಿರ್ಮಾಪಕರ ಧೈರ್ಯ ಮೆಚ್ಚಬೇಕು. ದುಡ್ಡಿನ ಕಡೆ ನೋಡದೆ, ಹೊಸ ನಾಯಕಿ ಸುಕನ್ಯಾ ಅವರು ಬಂದ ಕೂಡಲೆ, ಮತ್ತೆ ಮರು ಚಿತ್ರೀಕರಣ ಆರಂಭಿಸಿದರು. ಆನಂತರ ಲಾಕ್ ಡೌನ್ ಸಮಸ್ಯೆ. ಹೀಗೆ ಅನೇಕ ಸಮಸ್ಯೆಗಳನ್ನು ದಾಟಿ ನಮ್ಮ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. "ತಾರಕಾಸುರ" ಚಿತ್ರದ ಬಳಿಕ ಎರಡು ವರ್ಷಗಳ ನಂತರ ಮತ್ತೊಂದು ವಿಭಿನ್ನ ಪಾತ್ರ ನಿರ್ವಹಣೆ ಮಾಡಿದ್ದೀನಿ ಎಂದರು ವೈಭವ್.
ಈ ಹಿಂದೆ "ಶಿವಾಜಿ ಸುರಕ್ಕಲ್" ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ನಾಯಕಿಯಾಗಿ ಮೊದಲ ಚಿತ್ರ. ಪಾತ್ರ ಚೆನ್ನಾಗಿದೆ ಎಂದರು ನಾಯಕಿ ಸುಕನ್ಯಾ.
ನೀನಾಸಂ ಅಶ್ವಥ್,
ಕಾಮಿಡಿ ಕಿಲಾಡಿ ಖ್ಯಾತಿಯ ಸೂರಜ್ , ಲೋಕೇಶ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸೆಕ್ರೆಟರಿ ನರಸಿಂಹಲು (ವೈಭವ್ ತಂದೆ) ಚಿತ್ರತಂಡಕ್ಕೆ ಶುಭ ಕೋರಿದರು.
ನಿರ್ದೇಶಕ ನಾಗ್ ವೆಂಕಟ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಆಶಿಕ್ ಅರುಣ್ ಸಂಗೀತ ನೀಡಿದ್ದಾರೆ. ತ್ಯಾಗರಾಜನ್ ಛಾಯಾಗ್ರಹಣ ಮಾಡಿದ್ದಾರೆ.