ಭಾವೈಕ್ಯತೆ ಸಾರುವ ತೋತಾಪುರಿ
ಇಷ್ಟು ವರ್ಷದ ಸಿನಿಪಯಣದಲ್ಲಿ ‘ತೋತಾಪುರಿ’ ಚಿತ್ರವು ಬೇರೊಂದು ರೂಪದಲ್ಲಿದೆ ಎನ್ನಬಹುದು ಎಂದು ನಾಯಕ ಜಗ್ಗೇಶ್ ಒಂದೇ ಮಾತಿನಲ್ಲಿ ಹೇಳಿದರು. ಬಿಡುಗಡೆಪೂರ್ವ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ಅದೆಷ್ಟೋ ಚಿತ್ರಗಳು ಬಂದು ಹೋಗುತ್ತವೆ. ಕೆಲವು ಮಾತ್ರ ಅಪರೂಪದ ಚಿತ್ರವಾಗಿ ಉಳಿಯುತ್ತದೆ. ಅಂಥದ್ದೊಂದು ಅಪರೂಪದ ಸಿನಿಮಾ. ನಿರ್ದೇಶಕ ವಿಜಯಪ್ರಸಾದ್ ಬಯಸಿದರೂ ಮತ್ತೊಮ್ಮೆ ಇಂಥಾ ಚಿತ್ರ ಮಾಡೋಕೆ ಆಗ್ತಿರಲಿಲ್ಲ. ರಾಷ್ಟ್ರ ಮಟ್ಟದ ಸಂದೇಶ ನೀಡಿದ್ದಾರೆ. ನಿರ್ಮಾಪಕರು ಬಹಳ ತಾಳ್ಮೆಯಿಂದ ಮಾಡಿದ್ದಾರೆ. ಅವರಿಗೇನಾದರೂ ತೊಂದರೆ ಆದರೆ ನಾನು ವೃತ್ತಿಯೇ ಬಿಟ್ಟುಬಿಡುತ್ತೇನೆ ಎಂದು ಮಾತು ಕೊಟ್ಟಿದ್ದೇನೆ ಎಂದರು.
ವಿಜಯಪ್ರಸಾದ್ ಹೇಳುವಂತೆ ನಾನು ನಿರ್ದೇಶನ ಮಾಡಿರುವ ಎಲ್ಲ ಚಿತ್ರಗಳಿಗಿಂತ ಈ ಸಿನಿಮಾ ತುಂಬಾ ವಿಭಿನ್ನ ಅನ್ನಬಹುದು. ಕಲಾವಿದರೆಲ್ಲರೂ ನೀಡಿದ ಸಹಕಾರ, ನಿರ್ಮಾಪಕರ ಧೈರ್ಯ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ೧೫೦ಕ್ಕೂ ಹೆಚ್ಚು ಕಲಾವಿದರು, ತಂತ್ರಜ್ಘರಿಗೆ ಅನ್ನ ಹಾಕಿ ಬೆಳೆಸಿದ್ದಾರೆ. ಚಿತ್ರದಲ್ಲಿ ಏನಿದೆ ಅಂತ ನೋಡಿದರೆ ಉಪ್ಪು, ಹುಳಿ, ಖಾರ ಎಲ್ಲದರ ಸಮನಾದ ಮಿಶ್ರಣವಿದೆ ಅಂತ ಮಾಹಿತಿ ನೀಡಿದರು.
ಅದಿತಿಪ್ರಭುದೇವ ಅವರು ವಿಜಯಪ್ರಸಾದ್‌ರನ್ನು ತುಂಟ ನಿರ್ದೇಶಕ ಅಂತ ಬಣ್ಣನೆ ಮಾಡಿದರು. ಚಿತ್ರವು ತುಂಬಾ ಚೆನ್ನಾಗಿ ಬಂದಿದೆ. ನಾನಾ ಕಾರಣಗಳಿಂದ ಬಿಡುಗಡೆ ಮುಂದಕ್ಕೆ ಹೋಯಿತು. ಆದರೂ ಬೇಸರವಿಲ್ಲ. ಇದೇ ೩೦ರಂದು ಬರುತ್ತಿದ್ದೇವೆ. ಇಲ್ಲಿಂದ ಮತ್ತೋಂದು ಹಂತದ ಪ್ರಚಾರವನ್ನು ಆರಂಭಿಸುತ್ತಿದ್ದೇವೆ. ಎಲ್ಲಾ ಮಾಧ್ಯಮದವರ ಸಹಕಾರ ನಮ್ಮ ಚಿತ್ರಕ್ಕಿದೆ ಎಂಬುದು ನಿರ್ಮಾಪಕ ಕೆ.ಎ.ಸುರೇಶ್ ನುಡಿ.
ಮೈಕ್ ತೆಗೆದುಕೊಂಡ ಡಾಲಿಧನಂಜಯ್ ಈ ಸಿನಿಮಾದಲ್ಲಿ ಬೇರೆ ಥರದ ಪಾತ್ರ ಇದೆ ಎಂಬುದಾಗಿ ಹೇಳಿ ಇದು ಬೋಲ್ಡ್ ಆಗಿರುತ್ತದೆ ಮಾಡ್ತೀರಾ ಎಂದು ಕೇಳಿದರು, ಕಥೆ ಕೇಳಿ ಥ್ರಿಲ್ ಆಗಿ ಒಪ್ಪಿಕೊಂಡೆ. ಈ ಸಿನಿಮಾ ಅನೇಕ ಒಳ್ಳೆಯ ನೆನಪುಗಳನ್ನು ಕೊಟ್ಟಿದೆ ಅಂತಾರೆ. ಮಿಕ್ಕಂತೆ ಸುಮನ್‌ರಂಗನಾಥ್, ವೀಣಾಸುಂದರ್, ಹೇಮಾದತ್, ಶ್ರೀಕಾಂತ್‌ಹೆಬ್ಳೀಕರ್, ರಾಜೇಶ್, ಅನುಷಾ, ರಾಜೇಶ್ವರಿ, ವಿನಯ್ ಹಾಜರಿದ್ದು ಅನುಭವಗಳನ್ನು ಹಂಚಿಕೊಂಡರು.