ಒಂದೇ ಪಾತ್ರದಲ್ಲಿ ಬೊಂಬೆ ಹೇಳುತೈತೆ
ಸಿನಿಮಾ ಪತ್ರಕರ್ತ,ನಟ, ಸಾಹಿತಿ ಮತ್ತು ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಯತಿರಾಜ್ ಅವರು ಆಕ್ಷನ್ ಕಟ್ ಹೇಳಿರುವ ‘ಸೀತಮ್ಮನ ಮಗ’ ಚಿತ್ರವು ತೆರೆಕಂಡಿದ್ದು, ‘ಮಾಯಾಮೃಗ’ ಬಿಡುಗಡೆ ಹಂತಕ್ಕೆ ಬಂದಿದೆ. ಈಗ ಮೂರನೇ ಚಿತ್ರ ‘ಬೊಂಬೆ ಹೇಳುತೈತೆ’ ಸದ್ಯದಲ್ಲೆ ಆರಂಭಿಸಲಿದ್ದಾರೆ. ಇದರ ಕುರಿತಂತೆ ಮಾತನಾಡಿರುವ ಅವರು ಇದು ನನ್ನ ನಿರ್ದೇಶನದ ನಾಲ್ಕನೇ ಸಿನಿಮಾ. ಮಗ ಪೃಥ್ವಿರಾಜ್ ನೀಡಿದ ಏಳೆಯನ್ನಿಟ್ಟುಕೊಂಡು ಅದನ್ನು ವಿಸ್ತಾರ ಮಾಡಿ ಚಿತ್ರಕಥೆ ಸಿದ್ದಪಡಿಸಲಾಗಿದೆ. ಕೇವಲ ಹದಿನೈದು ದಿನಗಳಲ್ಲಿ ಚಾಲನೆ ಸಿಕ್ಕಿದೆ. ಸಂಪೂರ್ಣ ಚಿತ್ರೀಕರಣ ಚೆನ್ನಪಟ್ಟಣದಲ್ಲಿ ನಡೆಯಲಿದೆ. ಅದರಲ್ಲೂ ವಿಶೇಷವಾಗಿ ಕಾವೇರಿ ಆರ್ಟ್ಸ್ ಅಂಡ್ ಕ್ರಾಫ್ಟ್ ಎಂಪೋರಿಯಮ್‌ದಲ್ಲಿ ಶೂಟಿಂಗ್ ನಡೆಸಲು ಅನುಮತಿ ಸಿಕ್ಕಿದೆ. ಕಥೆಯಲ್ಲಿ ನಂಬಿಕೆಯ ಪ್ರಶ್ನೆಯಿದೆ. ಸರಿ ತಪ್ಪುಗಳ ಜಿಜ್ಘಾಸೆಯಿದೆ. ಮಮತೆ ವಾತ್ಸಲ್ಯಗಳ ವೈರುದ್ಯವಿದೆ. ಆಸೆ ದುರಾಸೆಗಳ ಆಳ ಅಗಲವಿದೆ. ವಾಸ್ತವ ಲೋಕದ ಪರಿಚಯವಿದೆ. ಅಳು-ನಗುವಿದೆ. ಹೀಗೆ ಎಲ್ಲರೊಂದಿಗೆ ಬೆರೆಯುವ ವ್ಯಕ್ತಿ ಹೇಗೆ ಏಕಾಂಗಿಯಾಗಿರುತ್ತಾನೆ ಎಂಬುದು ಕೇಂದ್ರ ವಸ್ತುವಾಗಿದೆ ಎನ್ನುತ್ತಾರೆ.
ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಅವರ ಬೊಂಬೆಯ ಮೂಲಕ ಸಮಾಜಕ್ಕೆ ಸಂದೇಶ ಸಾರುವ ಅಂಶ ಚಿತ್ರದಲ್ಲಿದೆ. ಸಿದ್ದರಾಜು ಎಂಬ ಹೆಸರಿನಲ್ಲಿ ಒಂದೇ ಪಾತ್ರ ಇರುವುದು ವಿಶೇಷ ಆ ಪಾತ್ರದಲ್ಲಿ ಯತಿರಾಜ್ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಒಂದೇ ಪಾತ್ರದ ಎರಡು ಮೂರು ಸಿನಿಮಾಗಳು ಬಂದಿದೆಯಾದರೂ, ಈ ಸಿನಿಮಾವು ಭಿನ್ನವಾಗಿರುತ್ತದೆ. ಚಿತ್ರಕಥೆ, ಸಂಭಾಷಣೆ ಶ್ರೀಕಾಂತ್, ಛಾಯಾಗ್ರಹಣ ವಿದ್ಯಾನಾಗೇಶ್ ಅವರದಾಗಿದೆ. ಮಾರುತಿ ಪ್ರೊಡಕ್ಷನ್ ಮಾಲೀಕ ಮಾರುತಿ ಪ್ರಸಾದ್ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ.