ಬಿಡುಗಡೆಗೆ ಸಿದ್ದ ಕುಳ್ಳನ ಹೆಂಡತಿ
ಸ್ಟಾರ್ ವೆಂಚರ್ಸ್ ಬ್ಯಾನರ್ ಅಡಿಯಲ್ಲಿ ಸಿದ್ದಗೊಂಡಿರುವ ವಿನೂತನ ಕಥೆಯನ್ನು ಹೊಂದಿರುವ ‘ಕುಳ್ಳನ ಹೆಂಡತಿ’ ಚಿತ್ರವು ತೆರೆಗೆ ಬರಲು ಸನ್ನಿಹಿತವಾಗಿದೆ. ಪ್ರಚಾರದ ಸಲುವಾಗಿ ಮೊನ್ನೆ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಶೀರ್ಷಿಕೆ ಕೇಳಿದೊಡನೆ ಕುಳ್ಳಗಿರುವ ಗಂಡನ ಕಥೆ ಇರಬಹುದು ಅನಿಸಬಹುದು. ಆದರೆ ಇದು ವಯಸ್ಸಿನ ಅಂತರದ ಸಿನಿಮಾ ಆಗಿದ್ದು ಒಂದು ಒಳ್ಳೆಯ ಸಂದೇಶವನ್ನು ಹೇಳಿದ್ದಾರೆ. ೨೬ರ ಹರೆಯದ ಹುಡುಗನಿಗೆ ೩೩ರ ವಯಸ್ಸಿನ ನರ್ಸ್ ಮೇಲೆ ಲವ್ ಆದರೆ ಹೇಗಿರುತ್ತದೆ ಎಂಬುದನ್ನು ತೋರಿಸಲಾಗಿದೆ. ರಚಿಸಿ ನಿರ್ದೇಶನ ಮಾಡಿರುವುದು ವಿಶಾಖ್.
ಕಿರುತೆರೆ ಧಾರವಾಹಿಗಳಲ್ಲಿ ಗುರುತಿಸಿಕೊಂಡಿದ್ದ ಆಶ್ರಿತ್ ವಿಶ್ವನಾಥ್ ಈ ಚಿತ್ರದ ಮೂಲಕ ಹಿರಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ರಾಸಿಕಾಬೀರೇಂದ್ರ ಜೋತಿರ್ಮಹಿಯಾಗಿ ನಾಯಕಿ. ಉಳಿದಂತೆ ದೀಪಿಕಾ, ಅರಸಿಕೆರೆರಾಜು, ಕೆಂಚಣ್ಣ, ಜಯಾ, ಬೇಬಿ ದರಿಯಾ ಮುಂತಾದವರು ನಟಿಸಿದ್ದಾರೆ. ೪೫ ದಿನಗಳ ಕಾಲ ಎರಡು ಹಂತದಲ್ಲಿ ಆರು ಲೋಕೇಶನ್ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಡಾಕ್ಟರ್ ಹಾಗೂ ರೋಗಿಯ ನಡುವಿನ ಅಂತರದ ಸಿನಿಮಾ ಇದಾಗಿದೆ. ಒಂದಷ್ಟು ವಿಚಾರಗಳನ್ನು ಯೂ ಟ್ಯೂಬ್ನಿಂದ ತಿಳಿದುಕೊಂಡು ಚಿತ್ರಕಥೆ ರಚಿಸಲಾಗಿದೆ. ಸ್ಟಾರ್ ವೆಂಚರ್ಸ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಸಂಗೀತ ಪರವ್ನಿರ್ವಿಕಾರ್, ಛಾಯಾಗ್ರಹಣ ಶಿನೂಬ್.ಬಿ.ಚಿಕೋ, ಸಂಕಲನ ಜೋಜಿಮರಂಬನ್ ಅವರದಾಗಿದೆ.