*ದಿಲೀಪ್ ರಾಜ್ ಈಗ "ಮಹಾನ್ ಕಲಾವಿದ".*
*ವಿಭಿನ್ನ ಕಥಾಹಂದರದ ಈ ಚಿತ್ರಕ್ಕೆ ಅಭಯ್ ಚಂದ್ರ ನಿರ್ದೇಶನ.*
ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ದಿಲೀಪ್ ರಾಜ್ ಈಗ ಕಿರುತೆರೆಯಲ್ಲೂ ಜನಪ್ರಿಯ. "ಹಿಟ್ಲರ್ ಕಲ್ಯಾಣ"ದ A J ಪಾತ್ರದ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ. ಪ್ರಸ್ತುತ ಇವರು "ಮಹಾನ್ ಕಲಾವಿದ" ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಹಿರಿಯ ಪತ್ರಕರ್ತರಾದ ದಿ.ಸುರೇಶ್ಚಂದ್ರ ಪುತ್ರ ಅಭಯ್ ಚಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಇವರ ಎರಡನೇ ನಿರ್ದೇಶನದ ಚಿತ್ರ. ಸಂಗೀತ ನಿರ್ದೇಶನ ಕೂಡ ಅಭಯ್ ಚಂದ್ರ ಅವರದೆ. ಈ ಚಿತ್ರದ ಕೆಲವು ವಿಷಯಗಳನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು.
ನಾನು ಪತ್ರಕರ್ತ ಸುರೇಶ್ಚಂದ್ರ ಅವರ ಪುತ್ರ. ಇದು ನನ್ನ ಎರಡನೇ ಚಿತ್ರ. ಈ ಕಥೆಯನ್ನು ಸಿದ್ದಪಡಿಸಿಕೊಂಡು "ಕಲಾವಿದ" ಅಂತ ಶೀರ್ಷಿಕೆಯಿಟ್ಟಿದೆ. ಈ ವಿಷಯವನ್ನು ರವಿಚಂದ್ರನ್ ಸರ್ ಗೆ ತಿಳಿಸಿದೆ. ಧಾರಾಳವಾಗಿ ಈ ಶೀರ್ಷಿಕೆ ಇಡು. ಆದರೆ ಬರೀ "ಕಲಾವಿದ" ಅಂತ ಬೇಡ. ಏನಾದರೂ ಸೇರಿಸು ಅಂದರು. ನಾನು "ಮಹಾನ್ ಕಲಾವಿದ" ಅಂತ ಇಟ್ಟೆ. ಕಲಾವಿದನೊಬ್ಬನ ಬದುಕು ಬವಣೆಗಳನ್ನು ತೋರಿಸುವ ಕಥಾಹಂದರ ಹೊಂದಿರುವ ಚಿತ್ರವಿದು. ನಾನು ಈ ಪಾತ್ರ ಬರೆಯಬೇಕಾದರೆ ದಿಲೀಪ್ ರಾಜ್ ಈ ಪಾತ್ರಕ್ಕೆ ಸೂಕ್ತ ಎಂದು ಕೊಂಡಿದ್ದೆ. ಅವರೆ ಈ ಚಿತ್ರದ ನಾಯಕರಾದರು. ಜಾಹ್ನವಿ ರಾಯಲ ಹಾಗೂ ಪಲ್ಲವಿ ರಾಜು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ನಲ್ಲಿ ಸಿಕ್ಕ ಗೆಳೆಯ ಭರತ್ ಬಿ ಗೌಡ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಿರಣ್ ಗಜ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ದೇಶಕ ಅಭಯ್ ಚಂದ್ರ ತಿಳಿಸಿದರು.
ಬಹಳ ದಿನಗಳ ನಂತರ ಮತ್ತೆ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ. ಅಭಯ್ ಚಂದ್ರ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ. ಕಲಾವಿದ ಮಾಡುವ ನಟನೆ ಮೊದಲು ನಿರ್ದೇಶಕರಿಗೆ ಮೆಚ್ಚುಗೆಯಾಗಬೇಕು. ನನ್ನ ನಟನೆ ಬಗ್ಗೆ ಮೊದಲು ಅಭಯ್ ಹೇಳಬೇಕು. ನಾನು ಸಹ ಈ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿರುವುದಾಗಿ ದಿಲೀಪ್ ರಾಜ್ ಹೇಳಿದರು.
ಈ ಚಿತ್ರದಲ್ಲಿ ದಿಲೀಪ್ ರಾಜ್ ಅವರ ಪತ್ನಿ ಪಾತ್ರ ಮಾಡುತ್ತಿರುವುದಾಗಿ ಜಾಹ್ನವಿ ರಾಯಲ ತಿಳಿಸಿದರು. ಲಾಕ್ ಡೌನ್ ನಂತರ ನನ್ನ ಮೊದಲ ಪತ್ರಿಕಾಗೋಷ್ಠಿ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ಪಲ್ಲವಿ ರಾಜು..
ನಾನು ಮೂಲತಃ ಹಾಸನದವನು. ಈಗ ಮಂಡ್ಯ ನಿವಾಸಿ. ಅಪ್ಪ-ಅಮ್ಮನ ಸಹಕಾರದಿಂದ ನಿರ್ಮಾಪಕನಾಗಿದ್ದೇನೆ.ನನ್ನ ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಪಕ ಭರತ್ ಬಿ ಗೌಡ.