ಬನಾರಸ್ ಟ್ರೇಲರ್ ಲೋಕಾರ್ಪಣೆ
ಶಾಸಕ ಜಮೀರ್ಅಹ್ಮದ್ಖಾನ್ ಪುತ್ರ ಝೈದ್ಖಾನ್ ಪ್ರಪ್ರಥಮ ಬಾರಿ ನಟಿಸಿರುವ ‘ಬನಾರಸ್’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸಲ್ಮಾನ್ಖಾನ್ ಸಹೋದರ ಅರ್ಬಾಜ್ಖಾನ್ ಹಿಂದಿ ಭಾಷೆ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಭಾಷೆಯ ಟ್ರೇಲರ್ನ್ನು ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಅರ್ಬಾಜ್ಖಾನ್ ಚಿತ್ರವು ಅದ್ಬುತವಾಗಿ ಮೂಡಿಬಂದಿದೆ ಎಂಬುದು ತುಣುಕುಗಳನ್ನು ನೋಡಿದರೆ ತಿಳಿಯುತ್ತದೆ. ಕನ್ನಡ ಸಿನಿಮಾಗಳನ್ನು ನೋಡುತ್ತೇನೆ. ಇಲ್ಲಿನ ಚಿತ್ರರಂಗವು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಒಳ್ಳೆಯ ಕಥೆಗಳನ್ನು ಜನ ಖಂಡಿತಾ ಮೆಚ್ಚುತ್ತಾರೆ. ಅದರಲ್ಲೂ ದಕ್ಷಿಣ ಭಾರತದ ಚಿತ್ರಗಳಿಗೆ ಮಾರುಕಟ್ಟೆ ವಿಸ್ತಾರವಾಗಿದೆ. ಭಾರತದಾಚೆಗೂ ಸಿನಮಾಗಳು ಗಮನ ಸೆಳಯುತ್ತಿವೆ ಎಂದರು.
ಬನಾರಸ್ ಎಂಬ ಶೀರ್ಷಿಕೆಯೇ ಮನಸೆಳೆಯುತ್ತದೆ. ಝೈದ್ಖಾನ್ಗೆ ಇದು ಮೊದಲ ಚಿತ್ರವಾದರೂ, ಎಲ್ಲಿಯೂ ಹೊಸಬರು ಎಂದು ಕಾಣಿಸುವುದೇ ಇಲ್ಲ ಅಂತ ರವಿಚಂದ್ರನ್ ಹೇಳಿದರು. ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ. ಸಿನಿಮಾವೇ ಎಲ್ಲಾ. ಒಳ್ಳೆಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದೇನೆ ಎನ್ನುವ ಸಂತಸವಿದೆ. ಭಾರತೀಯ ಶ್ರೀಮಂತಿಕೆಯ ಸಂಸ್ಕ್ರತಿಯ ಕಥೆ ಇದರಲ್ಲಿದೆ ಎಂಬ ಮಾಹಿತಿಯನ್ನು ನಾಯಕ ಝೈದ್ಖಾನ್ ನೀಡಿದರು.
‘ಶಾಂತಿ ಕ್ರಾಂತಿ’ ಚಿತ್ರವೇ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಅದೇ ನನಗೆ ಬನಾರಸ್ ಚಿತ್ರವನ್ನು ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಗೆ ತರಲು ಸ್ಪೂರ್ತಿಯಾಗಿದೆ ಎನ್ನುತ್ತಾರೆ ನಿರ್ದೇಶಕ ಜಯತೀರ್ಥ. ನಾಯಕಿ ಸೋನಲ್ಮಂತೇರೋ, ಅಚ್ಯುತಕುಮಾರ್ ಖುಷಿಯನ್ನು ಹಂಚಿಕೊಂಡರು. ತಿಲಕ್ರಾಜ್ ಬಲ್ಲಾಳ್ ನಿರ್ಮಾಣ ಮಾಡಿರುವ ಸಿನಿಮಾವು ನವೆಂಬರ್ ೪ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.