ಐದು ಭಾಷೆಗಳ ಗದಾಯುದ್ದ
ಈ ಹಿಂದೆ ‘ಮೃಗಶಿರ’ ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿದ್ದ ಶ್ರೀವತ್ಸ ಅವರು ‘ಗದಾಯುದ್ದ’ ಸಿನಿಮಾಕ್ಕೆ ಕಥೆ,ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪ್ರಪಂಚದಲ್ಲಿ ಭೂತಪ್ರೇತಗಳು ಇದೆಯೋ ಇಲ್ಲವೋ ತಿಳಿದಿಲ್ಲ. ಆದರೆ ವಾಮಾಚಾರ ಎನ್ನುವುದು ಮಾತ್ರ ಇಂದಿಗೂ ಜೀವಂತವಾಗಿದೆ. ಕೇವಲ ವೈಯಕ್ತಿಕ ದ್ವೇಷ, ಧನದಾಹದಿಂದ ಮನುಷ್ಯರ ಜೀವ ತೆಗೆಯುವುದಕ್ಕಾಗಿ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಇಂತಹುದೆ ವಿಷಯಗಳನ್ನು ಇಟ್ಟುಕೊಂಡು ಸಿನಿಮಾವನ್ನು ಮಾಡಲಾಗಿದೆ. ಬೆಳಗಾವಿ ಮೂಲದ ನಿತಿನ್‌ಶಿರಗುರ್‌ಕರ್ ನಿರ್ಮಾಣ ಮಾಡಿದ್ದು, ಇವರ ಪುತ್ರ ಸುಮಿತ್ ನಾಯಕನಾಗಿ ನಟಿಸಿದ್ದಾರೆ. ಧನ್ಯಪಾಟೀಲ್ ನಾಯಕಿ. ವಾಮಚಾರಿಯಾಗಿ ಡ್ಯಾನಿಕುಟ್ಟಪ್ಪ ಕಾಣಿಸಿಕೊಂಡಿದ್ದಾರೆ.
ಪ್ರಚಾರದ ಸಲುವಾಗಿ ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ನಿರ್ದೇಶಕರು ಮಾತನಾಡಿ, ಪ್ರತಿದಿನ ಹಲವಾರು ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ. ಅದರಲ್ಲಿ ಬಹುತೇಕ ಪ್ರಕರಣಗಳಲ್ಲಿ ಕೊಲೆ ಎನ್ನುವುದು ಪ್ರೂವ್ ಆಗಿದೆ. ಅದರ ಹಿಂದೆ ವಾಮಾಚಾರದ ಪ್ರೇರಣೆಯಿರುತ್ತದೆ. ಇಂತಹುದೇ ಅಂಶಗಳೊಂದಿಗೆ ಪೌರಾಣಿಕ ಘಟನೆ ಹಾಗೂ ಪ್ರಸಕ್ತ ಕಥೆಯನ್ನು ಸೈನ್ಸ್ ಫಿಕ್ಷನ್ ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಮೊದಲು ನಾಯಕನಾಗಿ ಚಿರಂಜೀವಿಸರ್ಜಾ ನಟಿಸಬೇಕಿತ್ತು. ಅವರಿಗೆ ರೋಲ್ ಹೇಳಿ ಒಪ್ಪಿಸಿಯೂ ಆಗಿತ್ತು. ಚೆಕ್ ನೀಡಲು ಅವರ ಮನೆಗೆ ಹೋದಾಗ ನಿರ್ಮಾಪಕರೆಲ್ಲಿ ಎಂದರು. ಮನೆಯಲ್ಲಿ ಪೂಜೆ ಇಟ್ಟುಕೊಂಡಿದ್ದರಿಂದ ಬಂದಿಲ್ಲವೆಂದು ತೋರಿಸಿದೆ. ಅವರ ಜೊತೆಗೆದ್ದ ಸುಮಿತ್ ಫೋಟೋ ನೋಡಿ ನಾಯಕನ ಪಾತ್ರವನ್ನು ಇವರ ಕೈಲೇ ಮಾಡಿಸಿ, ನಾನು ಆಂಜನೇಯನ ಪಾತ್ರವನ್ನು ಸಂಭಾವನೆ ತೆಗೆದುಕೊಳ್ಳದೆ ಮಾಡುತ್ತೇನೆಂದು ಚೆಕ್‌ನ್ನು ವಾಪಸ್ಸು ಮಾಡಿದ್ದರು. ಈ ಪಾತ್ರವನ್ನು ಗ್ರಾಫಿಕ್ಸ್‌ನಲ್ಲೆ ಮಾಡಲಾಗಿದೆ ಎಂಬುದಾಗಿ ಮಾಹಿತಿ ನೀಡಿದರು.
ಸಾಲೋಮನ್ ಸಂಗೀತ, ಸುರೇಶಬಾಬು ಛಾಯಾಗ್ರಹಣ ಚಿತ್ರಕ್ಕಿದೆ. ಐಶ್ವರ್ಯಸಿಂದೋಗಿ, ಸ್ಪರ್ಶಾರೇಖಾ, ಶರತ್‌ಲೋಹಿತಾಶ್ವ, ಯತಿರಾಜ್ ಅಲ್ಲದೆ ಸತ್ಯಜಿತ್ ಮತ್ತು ಶಿವರಾಂ ಅಭಿನಯಿಸಿದ ಕೊನೆಯ ಚಿತ್ರ ಇದಾಗಿದೆ. ಸದ್ಯ ಸೆನ್ಸಾರ್ ಹಂತದಲ್ಲಿದ್ದು, ನವೆಂಬರ್‌ದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.