*ತೆರೆಯಲ್ಲೂ ಜೋಡಿಯಾದರು ಅರವಿಂದ್-ದಿವ್ಯಾ ಉರುಡುಗ*
-ಇದು ಆರ್ಧಂಬರ್ಧ ಪ್ರೇಮಕಥೆಯ ವಿಚಾರ-
ಬಿಗ್‌ಬಾಸ್ ಖ್ಯಾತಿಯ ಯುವಜೋಡಿ ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಈಗ ತೆರೆಯಮೇಲೂ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಅರವಿಂದ್ ಕೌಶಿಕ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆ ಚಿತ್ರದ ಹೆಸರು ಅರ್ಧಂಬರ್ಧ ಪ್ರೇಮಕಥೆ. ಹುಲಿರಾಯ, ತುಘ್ಲಕ್, ನಮ್ ಏರಿಯಾಲ್ ಒಂದಿನ ಸಿನಿಮಾಗಳಿಂದ ಗುರುತಿಸಿಕೊಂಡ ಅರವಿಂದ್ ಕೌಶಿಕ್, ರಕ್ಷಿತ್‌ಶೆಟ್ಟಿ, ರಿಶಬ್‌ಶೆಟ್ಟಿ, ರಚಿತಾರಾಮ್, ಅನೀಶ್, ಬಾಲು ನಾಗೇಂದ್ರ
ಸೇರಿದಂತೆ ಅನೇಕ ಕಲಾವಿದರನ್ನು ಪರಿಚಯಿಸಿದ್ದರು. ಈಗ ಬೈಕ್ ರೇಸರ್ ಅರವಿಂದ್‌ರನ್ನು ನಾಯಕನಾಗಿ
ಇಂಟ್ರಡ್ಯೂಸ್ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಅವರು ಅರ್ದಂಬರ್ಧ ಪ್ರೇಮಕಥೆಗೆ ಚೆಂದದ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಪ್ರೀತಿ ಎನ್ನುವುದು ನಮ್ಮ ಕನಸುಗಳ ಜೊತೆಗೇ
ಬೆಳೆಯುತ್ತೆ, ಆದರೆ ಅದೇ ಪ್ರೀತಿ ಸಂಬಂಧವಾಗಿ ಬದಲಾದಾಗ ಅದು ಉಳಿಯೋದು ಕಷ್ಟ. ಏಕೆಂದರೆ ಅದು
ನಮ್ಮ ಸುತ್ತಲಿನ ಸಮಾಜದ ಚೌಕಟ್ಟಿನಲ್ಲಿ ಬದುಕಬೇಕಾಗಿರುತ್ತೆ, ಇಂಥ ಒಂದು ಲವ್‌ಸ್ಟೋರಿಯೇ ಅರ್ಧಂಬರ್ಧ ಪ್ರೇಮಕಥೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ನಾಯಕನ ಇಂಟ್ರಡಕ್ಷನ್ ಟೀಸರ್ ದಸರಾ ಹಬ್ಬದ ಶುಭದಿನ ಬಿಡುಗಡೆಯಾಯತು.
ಈ ಸಂದರ್ಭದಲ್ಲಿ ಹಿರಿಯನಟ ದ್ವಾರಕೀಶ್, ಬಿಗ್‌ಬಾಸ್ ತಂಡದ ಶುಭಾ ಪುಂಜಾ, ರಾಜೀವ್, ಅರವಿಂದ್ ಕೂಡ ಹಾಜರಿದ್ದು ಗೆಳೆಯನಿಗೆ ಶುಭ ಹಾರೈಸಿದರು. ಈ ಚಿತ್ರದಲ್ಲಿ ಹಿರಿಯ ಕಲಾವಿದ ದ್ವಾರಕೀಶ್ ಅವರ ಪುತ್ರ ಅಭಿಲಾಷ್ ದ್ವಾರಕೀಶ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ೨೫ ವರ್ಷಗಳ ನಂತರ ನಟನೆಗೆ ಹಿಂದಿರುಗಿದ್ದಾರೆ. ಬೈಕ್
ರೇಸರ್ ಆಗಿದ್ದ ಅರವಿಂದ್ ಅವರ ಗುರುಗಳು ಕೂಡ ಈ ಸಮಾರಂಭದಲ್ಲಿ ಹಾಜರಿದ್ದರು. ನಿರ್ದೇಶಕ ಅರವಿಂದ್ ಕೌಶಿಕ್ ಮಾತನಾಡಿ ಚಿತ್ರದಲ್ಲಿ ಅರವಿಂದ್ ಅವರ ಬೈಕ್ ರೇಸಿಂಗ್ ಸಾಧನೆಗಳ ಬಗ್ಗೆ ಹೇಳಿಲ್ಲ, ನಾನು
ಮಾಡಿಕೊಂಡ ಕಥೆಗೆ ಒಬ್ಬ ಹೊಸ ಹೀರೋ ಬೇಕಿತ್ತು. ಆತ ಜನ ಗುರುತಿಸುವಂಥ ಹೀರೋನೂ ಆಗಿರಬೇಕು ಅಂದುಕಡಾಗ ನೆನಪಿಗೆ ಬಂದದ್ದೇ ಕೆ.ಪಿ.ಅರವಿಂದ್. ಇದೊಂದು ಅಪ್ಪಟ ಪ್ರೇಮಕಥೆಯಾಗಿದ್ದು ಶೂಟಿಂಗ್ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದೆ ನವೆಂಬರ್ ವೇಳೆಗೆ ರಿಲೀಸ್ ಮಾಡೋ ಯೋಜನೆಯಿದೆ ಎಂದು ಹೇಳಿದರು.
ನಂತರ ದ್ವಾರಕೀಶ್ ಮಾತನಾಡುತ್ತ ನಮ್ಮ ಕಾಲದಲ್ಲಿ ಈ ಥರದ ನೆಗೆಟಿವ್ ಟೈಟಲ್ ಇಡುತ್ತಲೇ ಇರಲಿಲ್ಲ, ಈಗ ಅರವಿಂದ್ ಅಂಥಾ ಸಾಹಸ ಮಾಡಿದ್ದಾರೆ. ನಾಯಕ ಸೌತ್ ಕೆನರಾದವನು, ಈಗ ಅಲ್ಲಿನವರೇ ಜಾಸ್ತಿ ಹೆಸರು ಮಾಡುತ್ತಿದ್ದಾರೆ. ಹಿಂದೆ ಪುಟ್ಟಣ್ಣ ಕಣಗಾಲರು ನೀಡಿದ ಒಂದು ಸಲಹೆ, ನಾನು ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡುವಂತೆ ಮಾಡಿತು ಎಂದು ಹಿಂದಿನ ಘಟನೆಗಳನ್ನು ನೆನಪಿಸಿಕೊಂಡರು.
ಬಕ್ಸಸ್ ಮೀಡಿಯಾ, ಲೈಟ್‌ಹೌಸ್ ಮೀಡಿಯಾ ಮತ್ತು ಆರ್‌ಎಸಿ ವಿಷುವಲ್ಸ್ ಸೇರಿ ಅರ್ದಂಬರ್ಧ ಪ್ರೇಮ ಕಥೆ ಚಿತ್ರವನ್ನು ನಿರ್ಮಿಸಿದ್ದಾರೆ. ಸೂರ್ಯ ಅವರ ಛಾಯಾಗ್ರಹಣ, ಸಂತೋಷ್ ರಾಧಾಕೃಷ್ಣನ್ ಅವರ ಶೀರ್ಷಿಕೆ ವಿನ್ಯಾಸದ ಜೊತೆಗೆ ಗ್ರಾಫಿಕ್ಸ್ ಕೆಲಸವನ್ನೂ ನಿಭಾಯಿಸಿದ್ದಾರೆ. ರ‍್ಯಾಪರ್ ಆಲ್‌ಓಕೆ ಅಲೋಕ್, ಶ್ರೇಯಾ, ವೆಂಕಟ್‌ಶಾಸ್ತ್ರಿ, ಪ್ರದೀಪ್‌ರೋಷನ್, ಸೂರಜ್ ಹೂಗಾರ್, ಸುಜಿತ್‌ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶಿವರಾಜ್ ಮೇಹು ಅವರ ಸಂಕಲನ, ಸತೀಶ್ ಬ್ರಹ್ಮಾವರ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.