Nahi Jnanena Sadrushyam.Film News

Thursday, October 13, 2022

226

ಕೃಷ್ಣನ ಶ್ಲೋಕ ಚಿತ್ರದ ಹೆಸರು

        ಮಹಾಭಾರತದ ಭಗವದ್ಗಿತೆಯ ನಾಲ್ಕನೇ ಅಧ್ಯಾಯದಲ್ಲಿ ಬರುವ ‘ನಹಿ ಜ್ಞಾನೇನ ಸದೃಶಂ’ ಶ್ಲೋಕವನ್ನು ಕೃಷ್ಣನು ಅರ್ಜುನನಿಗೆ ಯುದ್ದ ಪ್ರಾರಂಭವಾಗುವ ಮುನ್ನ ಹೇಳುತ್ತಾರೆ. ಈಗ ಇದೇ ಹೆಸರಿನಲ್ಲಿ ಮಕ್ಕಳ ಚಿತ್ರವೊಂದು ಸದ್ದಿಲ್ಲದೆ ತನ್ನೆಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಪ್ರಚಾರದ ಹಂತವಾಗಿ ಪೋಸ್ಟರ್ ಬಿಡುಗಡೆ ಸಮಾರಂಭವನ್ನು  ಏರ್ಪಾಟು ಮಾಡಿಕೊಂಡಿದ್ದರು. ಶಿಕ್ಷಣ ಜತೆಗೆ ಮನರಂಜನೆ ಅಂತ ಇಂಗ್ಲೀಷ್ ಅಡಿಬರಹವಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಮತ್ತು ಪದಾಧಿಕಾರಿಗಳಾದ ಸುಂದರರಾಜ್, ಕುಶಾಲ್, ಟಿ.ಪಿ.ಸಿದ್ದರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಅಮೇರಿಕಾ ನಿವಾಸಿ ಟೆಕ್ಕಿ ಕನ್ನಡಿಗ ರಾಮ್ ಬಿಡುವು ಮಾಡಿಕೊಂಡು ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುವ ಜತೆಗೆ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ನಿರ್ಮಾಣವೆಂದು ಗೆಳಯರೇ ಸೇರಿಕೊಂಡು ಬಂಡವಾಳ ಹೂಡಿದ್ದಾರೆ. 

ಅದಕ್ಕಾಗಿ ಫ್ರೆಂಡ್ಸ್ ಫಂಡಡ್ ಫಿಲಿಂಸ್ ಎಂದು ಹೇಳಿಕೊಂಡಿದ್ದಾರೆ.

       ಸಿನಿಮಾದ ಕುರಿತು ಹೇಳುವುದಾದರೆ ಆಶ್ರಮ ಸೇರಲು ಅಮೇರಿಕಾದಿಂದ ಬಂದ ರೋಬೊಟಿಕ್ ಇಂಜಿನಿಯರ್ ರಾಮ್, ಕಾರಣಾಂತರಗಳಿಂದ ಬಳ್ಳಾರಿಯ ಬೆಸ್ಟ್ ಶಾಲೆಯಲ್ಲಿ ತಾತ್ಕಾಲಿಕ ಗಣಿತದ ಶಿಕ್ಷಕನಾಗಿ ಸೇರುತ್ತಾನೆ. ಶಾಲೆಯಲ್ಲಿ ತನ್ನದೆ ಆದ ವಿಭಿನ್ನ ರೀತಿಯ ಶಿಕ್ಷಣ ಕೊಡುವ ಶೈಲಿಯಿಂದ ಮಕ್ಕಳು, ಅವರ ಪೋಷಕರು ಹಾಗೂ ಇತರೆ ಶಿಕ್ಷಕರೊಂದಿಗೆ ಹಲವು ಘರ್ಷಣೆಗಳುಂಟಾಗಿ ಅಪವಾದಗಳನ್ನು ಎದುರಿಸುತ್ತಾನೆ. ಈ ಅಪಾರ್ಥಗಳನ್ನು ದೂರ ಮಾಡಲು ಮಕ್ಕಳಿಗೆ ನಿಧಿ ಸಂಗ್ರಹಿಸುವ ಆಟವನ್ನು ಆಡಿಸಿ ಅದರ ಮೂಲಕ ಜ್ಘಾನದ ಪ್ರಾಮುಖ್ಯತೆ ಹಾಗೂ ಅದರ ಉಪಯೋಗದ ಮಹತ್ವವನ್ನು ಎಲ್ಲರಿಗೂ ತಿಳಿಸುವ ತನ್ನ ಉದ್ದೇಶವನ್ನು ವ್ಯಕ್ತಪಡಿಸುತ್ತಾನೆ.

 

       ತಾರಗಣದಲ್ಲಿ ಚಿಣ್ಣರುಗಳಾದ ವೇದಿಕಾ, ಅಭಪಾಲಿ, ಮಹೇಶ್.ಎಸ್.ಪಿ, ಬೆಟ್ಟೇಶ್, ಶರತ್, ಗಗನ, ಶ್ರೀನಿಧಿ, ಲಿಂಗೇಶ್ ಇವರೊಂದಿಗೆ ಅರುಣಾಬಾಲರಾಜ್, ಎಸ್.ಪಿ.ಮಹೇಶ್ ರಾಘವೇಂದ್ರನಾಯಕ್, ವಾಸುದೇವಮೂರ್ತಿ ಮುಂತಾದವರು ನಟಿಸಿದ್ದಾರೆ. ಪ್ರಮೋದ್‌ಮರವಂತೆ ಸಾಹಿತ್ಯದ ಎರಡು ಗೀತೆಗಳಿಗೆ ಅರ್ಜುನ್‌ರಾಮು ಸಂಗೀತವಿದೆ. ಸಂಕಲನ ಶಿವಕುಮಾರ್, ಸಾಹಸ ಸುದರ್ಶನ್-ರಾಮ್, ನೃತ್ಯ ರಾಘವೇಂದ್ರ-ಶ್ವೇತಾ-ಜಗನ್-ರುತಿಕ್‌ರೋಷನ್ ಅವರದಾಗಿದೆ. ಸಂಪೂರ್ಣ ಚಿತ್ರೀಕರಣ ಬಳ್ಳಾರಿ ಸುತ್ತಮುತ್ತ ನಡೆಸಲಾಗಿದೆ. ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ಮಕ್ಕಳ ಚಿತ್ರವೆಂದು ಪರಿಗಣಿಸಿ ‘ಯು’ ಪ್ರಮಾಣಪತ್ರ ನೀಡಿದೆ. ಅಂದಹಾಗೆ ಸಿನಿಮಾವು ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.         

 

 

 

Copyright@2018 Chitralahari | All Rights Reserved. Photo Journalist K.S. Mokshendra,