ಆ ರಹಸ್ಯ ಪತ್ತೆದಾರಿ ಸಿನಿಮಾ
ಚಿತ್ರರಂಗದಲ್ಲಿ ಮೂರು ದಶಕಗಳ ಕಾಲ ಅನುಭವ ಹೊಂದಿರುವ ಮಂಡ್ಯಾನಾಗರಾಜ್ ಅವರ ೧೭ನೇ ನಿರ್ದೇಶನದ ‘ಆ ರಹಸ್ಯ’ ಚಿತ್ರಕ್ಕೆ ಕಥೆ,ಚಿತ್ರಕಥೆ, ಒಂದು ಹಾಡಿಗೆ ಸಾಹಿತ್ಯ ಮತ್ತು ಕಂಠದಾನ ಮಾಡಿದ್ದು ಅಲ್ಲದೆ ಶ್ರೀ ಶಿವಶಂಕರ ಸಿನಿ ಪ್ರೊಡಕ್ಷನ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ಭೀಮಣ್ಣನಾಯಕ್ ಪ್ರಮುಖ ಪಾತ್ರದಲ್ಲಿ ನಟಿಸುವ ಜತೆಗೆ ನಿರ್ಮಾಣದಲ್ಲಿ ಪಾಲುದಾರರು. ಪ್ರಚಾರದ ಸಲುವಾಗಿ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಶಾಸಕ ರಾಜಾವೆಂಕಟಪ್ಪ ನಾಯಕ್, ಶ್ರೀ ಶ್ರೀ ವರ್ದಾನಂದ ಸ್ವಾಮಿಗಳು, ವಾಲ್ಮೀಕಿ ಗುರುಪೀಠ, ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್‌ಬಣಕಾರ್, ಮಾಜಿ ಅಧ್ಯಕ್ಷರಾದ ಎಸ್.ಎ.ಚಿನ್ನೆಗೌಡ ಮುಂತಾದವರು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.
ಸಿನಿಮಾ ಕುರಿತು ಹೇಳುವುದಾದರೆ ಊರಲ್ಲಿ ಒಬ್ಬ ವ್ಯಕ್ತಿ ಕಾಣೆಯಾಗುತ್ತಾನೆ. ಮತ್ತೋಂದು ಕಡೆ ಊರಿನ ಮುಖಂಡ ಹೆಣವನ್ನು ಅವರ ತೋಟದಲ್ಲಿ ಹೂತು ಹಾಕುತ್ತಾರೆ. ಕಾಣೆಯಾಗಿರುವವನು ಯಾರು? ಹೂತು ಹಾಕಿರುವ ಹೆಣ ಯಾವುದು? ಇಂತಹ ಗೊಂದಲದ ಸುತ್ತ ಕಥೆಯು ನಡೆಯುತ್ತದೆ. ಪೋಲೀಸರು ಬಂದು ನೋಡಿದಾಗ ಗುಂಡಿಯಲ್ಲಿ ಹೆಣ ಇರುವುದಿಲ್ಲ. ಅದು ಏನಾಯ್ತು. ಸತ್ತವನು ಯಾರು? ಇದು ಒಂದು ಏಳೆಯ ಸಾರಾಂಶವಾಗಿದೆ. ತಪ್ಪು ಮಾಡುವುದು ತಪ್ಪು, ತಪ್ಪು ಯಾವತ್ತಿದ್ದರೂ ತಪ್ಪು. ಒಳ್ಳೇದು ಯಾವತ್ತಿದ್ದರೂ ಒಳ್ಳೇದು. ಕೆಟ್ಟದ್ದು ಮಾಡಬಾರದು. ಯಾರೇ ತಪ್ಪು ಮಾಡಿದರೂ ಪ್ರಾಯಶ್ಚಿತ ಕಟ್ಟಿಟ್ಟ ಬುತ್ತಿ ಅಂತ ಸಂದೇಶದಲ್ಲಿ ಹೇಳಲಾಗಿದೆ.
ಮುಖ್ಯ ಪಾತ್ರದಲ್ಲಿ ಥ್ರಿಲ್ಲರ್‌ಮಂಜು, ಇವರಿಗೆ ಜೋಡಿಯಾಗಿ ಅನುಶೆಟ್ಟಿ, ಉಳಿದಂತೆ ಮಂಡ್ಯಸತ್ಯಾ, ಅರ್ಪಣಾ, ಜಗನ್ನಾಥಶೆಟ್ಟಿ, ಪ್ರಿಯಾಂಕ, ಶೇಖರ್‌ಗೌಡ ತಾರಗಣವಿದೆ. ಎರಡು ಹಾಡುಗಳಿಗೆ ಕುಮಾರ್‌ಈಶ್ವರ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವಿಮಲ್-ದಿಲೀಪ್, ಸಂಕಲನ ಪ್ರತ್ಯಕ್ ಸಾಗರ್, ನೃತ್ಯ ಗುಟ್ಟಳ್ಳಿಸುರೇಶ್ ಅವರದಾಗಿದೆ. ಮಂಡ್ಯ, ಶ್ರೀರಂಗಪಟ್ಟಣ, ಹೂಸಗೂರು, ಬನ್ನೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾವನ್ನು ಡಿಸೆಂಬರ್‌ದಲ್ಲಿ ತೆರೆಕಾಣಿಸಲು ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದಾರೆ.