ಎಲ್ಲರ ಜೀವನದ ಹೊಸ ದಿನಚರಿ
ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಹೊಸ ದಿನಚರಿ’ ಚಿತ್ರದ ಪೋಸ್ಟರ್ನ್ನು ಹಿರಿಯ ನಿರ್ದೇಶಕ ಟಿ.ಎಸ್.ನಾಗಭರಣ ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತಾ ಸಿನಿಮಾರಂಗದಲ್ಲಿ ಎರಡು ದಶಕಕ್ಕೊಮ್ಮೆ ಒಂದು ಬದಲಾವಣೆ ಆಗುತ್ತಿರುತ್ತದೆ. ಎಂಭತ್ತರಲ್ಲಿ, ಎರಡು ಸಾವಿರದಲ್ಲಿ. ಈಗ ಎರಡು ಸಾವಿರದ ಇಪ್ಪತ್ತರಲ್ಲಿ ಆಗಿರುವ ಬದಲಾವಣೆ ನಿಮಗೆಲ್ಲ ತಿಳಿದಿದೆ. ಟ್ರೇಲರ್ ನೋಡಿದರೆ ಇವರಿಂದ ಒಳ್ಳೆ ಚಿತ್ರ ಹೊರಬರುವ ನಿರೀಕ್ಷೆಯಿದೆ. ಇಂತಹ ಯುವ ಉತ್ಸಾಹಿ ಪ್ರತಿಭಾವಂತರ ತಂಡಗಳು ಹೆಚ್ಚು ಬಂದು ಎರಡು ದಶಕಗಳಿಗಾಗುತ್ತಿರುವ ಬದಲಾವಣೆ, ಮುಂದೆ ಒಂದೇ ದಶಕಕ್ಕೆ ಆಗುವಂತಾಗಲಿ ಎಂದು ತಂಡಕ್ಕೆ ಶುಭ ಹಾರೈಸಿದರು.
ಕಿರುಚಿತ್ರಗಳನ್ನು ಮಾಡಿದ ಅನುಭವ ಇರುವ ಕೀರ್ತಿಶೇಖರ್ ಹಾಗೂ ವೈಶಾಖ್ಪುಷ್ಪಲತಾ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಇವರ ಶ್ರಮಕ್ಕೆ ಮೃತ್ಯುಂಜಯಶುಕ್ಲ, ಅಲೋಕ್ಚೌರಾಸಿಯಾ ಮತ್ತು ಗಂಗಾಧರಸಾಲಿಮಠ ಒಟ್ಟಿಗೆ ಸೇರಿಕೊಂಡು ಬಂಡವಾಳ ಹೂಡಿದ್ದಾರೆ. ಎಲ್ಲರ ಜೀವನದಲ್ಲಿ ಪ್ರೀತಿ ಅನ್ನೋದು ಇದ್ದೇ ಇರುತ್ತದೆ. ಆದರೆ ಪ್ರೀತಿಸಿದ ವ್ಯಕ್ತಿ ಕೊನೆವರೆಗೂ ಇರುತ್ತಾರಾ? ಅವರಿಲ್ಲದೇ ಬೇರೊಬ್ಬರು ತಮ್ಮ ಜೀವನದಲ್ಲಿ ಬಂದಾಗ ಏನಾಗುತ್ತದೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ.
ತಾರಗಣದಲ್ಲಿ ದೀಪಕ್ಸುಬ್ರಮಣ್ಯ, ಚೇತನ್ವಿಕ್ಕಿ, ಮಂದಾರ, ವರ್ಷ, ಬಾಬು ಹಿರಣಯ್ಯ, ಅರುಣಾಬಾಲರಾಜ್, ವಿವೇಕ್ದೇವ್, ಶ್ರೀಪ್ರಿಯಾ, ಸುಪ್ರಿತ್ಗೌಡ, ಬೇಬಿ ಮಾನಿನಿ ಮುಂತಾದವರು ನಟಿಸಿದ್ದಾರೆ. ಸಾಹಿತ್ಯ-ಸಂಗೀತ ವೈಶಾಕ್ವರ್ಮ, ಛಾಯಾಗ್ರಹಣ ರಾವಿ, ಸಂಕಲನ ರಂಜಿತ್ಸೇತು ಅವರದಾಗಿದೆ. ಅಂದಹಾಗೆ ಸಿನಿಮಾವು ಡಿಸೆಂಬರ್ ೯ರಂದು ರಾಜ್ಯದ್ಯಂತ ತೆರೆಕಾಣುತ್ತಿದೆ.