ಕಾಳಿದಾಸನಾಗಿ ಧ್ರುವಸರ್ಜಾ
ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್ದಲ್ಲಿ ಹೊಸ ಪ್ರಾಜೆಕ್ಟ್ ಬಂದಿತ್ತು. ಇದೀಗ ಸಿನಿಮಾದ ಟೈಟಲ್ ಘೋಷಣೆಯಾಗಿದ್ದು ಅದ್ದೂರಿಯಾಗಿ ನಿರ್ಮಾಣವಾಗಲಿರುವ ಚಿತ್ರಕ್ಕೆ ‘ಕೆಡಿ’ (ಕಾಳಿದಾಸ) ಎಂಬ ಹೆಸರನ್ನು ಇಡಲಾಗಿದೆ. ಕೆಜಿಎಫ್ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಬಾಲಿವುಡ್ನ ಸಂಜಯ್ದತ್ ಇದರಲ್ಲೂ ಪಾತ್ರ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಟೈಟಲ್ ಟೀಸರ್ ಕಾರ್ಯಕ್ರಮಕ್ಕೆ ಭೇಟಿ ನೀಡಿದ ದತ್ ತಂಡಕ್ಕೆ ಶುಭಕೋರಿದರು. ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯ ನಿರ್ಮಾಣದ ನಾಲ್ಕನೇ ಚಿತ್ರವಾಗಿದೆ.
‘ಪೊಗರು’ ನಂತರ ಧ್ರುವಸರ್ಜಾ, ನಿರ್ದೇಶಕ ಎ.ಪಿ.ಅರ್ಜುನ್ರವರ ‘ಮಾರ್ಟಿನ್’ದಲ್ಲಿ ತೊಡಗಿಸಿಕೊಂಡಿದ್ದು, ಅದರ ಕೆಲಸವು ಮುಗಿದಿರುವುದರಿಂದ, ಈಗ ಈ ಸಿನಿಮಾಕ್ಕೆ ಅಣಿಯಾಗುತ್ತಿದ್ದಾರೆ. ಕೆಡಿ ಇವರ ಆರನೇ ಸಿನಿಮಾ ಆಗಿರಲಿದೆ. ಕಥೆಯು ೧೯೭೦ರಲ್ಲಿ ನಡೆದ ನೈಜ ಘಟನೆಗಳಿಂದ ಸ್ಪೂರ್ತಿ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ರೋಚಕ ಅಂಶಗಳನ್ನು ಸತ್ಯವಾಗಿ ತೆರೆ ಮೇಲೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗುತ್ತಿರುವುದರಿಂದ ಪರಭಾಷೆಯ ಕಲಾವಿದರು ಕೂಡ ಇರಲಿದ್ದಾರೆ. ಪಾತ್ರಕ್ಕೆ ಹೊಂದುವಂತೆ ಅವರುಗಳನ್ನು ಆಯ್ಕೆ ಮಾಡಲಾಗುತ್ತದೆ. ಯಾರು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎನ್ನುತ್ತಾರೆ ಪ್ರೇಮ್.
ರಕ್ತ ಅಂಟಿಕೊಂಡಿರುವ ಮಚ್ಚನ್ನು ಬಾಯಲ್ಲಿ ಹಿಡಿದುಕೊಂಡು, ಮೂಟೆಯಲ್ಲಿ ಒಬ್ಬನನ್ನು ಒಳಗೆ ಹಾಕಿ ಗಂಟು ಕಟ್ಟುತ್ತಿರುವ ಪೋಸ್ಟರ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮೊನ್ನೆ ಬಿಡುಗಡೆಯಾದ ತಮಿಳು ಟೈಟಲ್ ಟೀಸರ್ಗೆ ವಿಜಯ್ಸೇತುಪತಿ, ಮಲಯಾಳಂದಲ್ಲಿ ಮೋಹನ್ಲಾಲ್, ಹಿಂದಿಯಲ್ಲಿ ಸಂಜಯದತ್ ಧ್ವನಿ ನೀಡಿದ್ದಾರೆ. ಅರ್ಜುನ್ಜನ್ಯಾ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣ ಇರಲಿದೆ. ಬಹತೇಕ ಸೆಟ್ನಲ್ಲೆ ಸಿನಿಮಾದ ಚಿತ್ರೀಕರಣವಾಗಲಿದ್ದು, ಅದಕ್ಕಾಗಿ ಸೆಟ್ ನಿರ್ಮಾಣ ಕಾರ್ಯವು ಭರದಿಂದ ಆಗುತ್ತಿದೆ.