ಕೋರ್ಟ್ ಆವರಣದಲ್ಲಿ ವೀರಕಂಬಳ
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಜಾನಪದ ಕ್ರೀಡೆ ಅಂದರೆ ಕಂಬಳ. ಜಾನುವಾರುಗಳ ಜೊತೆ ಮನುಷ್ಯರು ಜೀವದ ಹಂಗು ತೊರೆದು ರೋಚಕವಾಗಿ ಆಡುವಂತ ಕ್ರೀಡೆ ಆಧರಿಸಿ ‘ವೀರ ಕಂಬಳ’ ಎನ್ನುವ ಚಿತ್ರವೊಂದನ್ನು ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್‌ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಹುತೇಕ ಭಾಗದ ಚಿತ್ರೀಕರಣ ಕರಾವಳಿ ಭಾಗದಲ್ಲಿ ನಡೆದಿದೆ. ಮೊನ್ನೆ ಕೋರ್ಟ್ ದೃಶ್ಯಗಳನ್ನು ಕಂಠೀರವ ಸ್ಟುಡಿಯೋದಲ್ಲಿ ಹಾಕಲಾದ ಸೆಟ್‌ದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಪ್ರಬಲ ನ್ಯಾಯವಾದಿಗಳಾಗಿ ಪ್ರಕಾಶ್‌ರೈ ಕಂಬಳ ಕ್ರೀಡೆಯ ಪರವಾಗಿ ವಾದವನ್ನು ಮಂಡಿಸುತ್ತಿದ್ದರೆ, ಖ್ಯಾತ ಖಳನಟ ರವಿಶಂಕರ್ ವಿರೋದವಾಗಿ ವಾದ ಮಂಡಿಸುತ್ತಿದ್ದರು. ಮೂಡಬಿದರೆಯ ಅರುಣ್‌ರೈ ತೋಡಾರ್ ಅದ್ದೂರಿ ವೆಚ್ಚದೊಂದಿಗೆ ನಿರ್ಮಾಣ ಮಾಡುತ್ತಿದ್ದಾರೆ. ಕೋಣಗಳನ್ನು ಓಡಿಸುವುದರಲ್ಲಿ ಪರಿಣಿತರಾಗಿರುವ ಶ್ರೀನಿವಾಸಗೌಡ ಹಾಗೂ ರಂಗಭೂಮಿಯ ಸ್ವರಾಜ್‌ಶೆಟ್ಟಿ ಕಂಬಳ ಓಡಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಾಯಕನಾಗಿ ಆದಿತ್ಯ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪೋಲೀಸ್ ಆಯುಕ್ತರಾಗಿ ರಾಧಿಕಾಚೇತನ್ ಉಳಿದಂತೆ ನವೀನ್‌ಪಡೀಲ್, ಗೋಪಿನಾಥ್‌ಭಟ್, ಭೋಜರಾಜ್‌ವಾಮಾಂಜುರು, ಮೈಮ್‌ರಮೇಶ್, ರಾಜಶೇಖರಕೋಟ್ಯಾನ್, ಉಷಾಭಂಡಾರಿ, ವೀಣಾಪೊನ್ನಪ್ಪ ಇವರೊಂದಿಗೆ ತುಳು ಕಲಾವಿದರು ಅಭಿನಯಿಸಿದ್ದಾರೆ. ಇನ್ನು ಸ್ವಲ್ಪ ಭಾಗದ ದೃಶ್ಯಗಳನ್ನು ಮಂಗಳೂರು ಹಾಗೂ ದುಬೈದಲ್ಲಿ ನಡೆಸಲಾಗುವುದೆಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ. ನಿರ್ದೇಶಕರೊಂದಿಗೆ ಸೇರಿಕೊಂಡು ವಿಜಯ್‌ಕುರ್ಮಾಕಿಡಿಯಾರ್‌ಬೈಲ್ ಚಿತ್ರಕಥೆ,ಸಂಭಾಷಣೆ ಬರೆದಿದ್ದಾರೆ. ತುಳು ಹಾಗೂ ಕನ್ನಡ ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿರುವ ಚಿತ್ರವನ್ನು ತೆಲುಗು, ತಮಿಳು,ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಿಗೆ ಡಬ್ ಮಾಡಲಾಗುತ್ತದಂತೆ.