ಚಾರ್ಲಿಗೆ ಇಪ್ಪತ್ತೈದರ ಯಶಸ್ಸು
ರಜನಿಕಾಂತ್ ಸರ್ ನಮ್ಮ ಚಿತ್ರವನ್ನು ವೀಕ್ಷಿಸಿ ಶುಭಹಾರೈಸಿದ್ದಾರೆ. ಚೆನ್ನೈಗೆ ಬಂದಾಗ ನಮ್ಮ ಮನೆಗೆ ಬನ್ನಿರೆಂದು ಆಹ್ವಾನ ನೀಡಿದ್ದಾರೆ. ಅಂತಹ ಸೂಪರ್‌ಸ್ಟಾರ್ ಚಾರ್ಲಿಯನ್ನು ಹೊಗಳಿದ್ದು ತನ್ನ ಬದುಕಿನ ಬಹುದೊಡ್ಡ ನೆನಪಾಗಿ ಉಳಿದಿದೆ ಎಂದು ನಟ, ನಿರ್ಮಾಪಕ ರಕ್ಷಿತ್‌ಶೆಟ್ಟಿ ‘೭೭೭ ಚಾರ್ಲಿ’ ಚಿತ್ರದ ಸಂತೋಷಕೂಟದಲ್ಲಿ ಮಾತನಾಡುತ್ತಿದ್ದರು. ಅವರು ಹೇಳುವ ಪ್ರಕಾರ ಚಿತ್ರವು ಇಪ್ಪತ್ತೈದರ ಸಂಭ್ರಮದಲ್ಲಿದೆ. ಐವತ್ತು ದಿನ ಪ್ರದರ್ಶನ ಕಾಣುವ ಆಶಾದಾಯಕ ವಾತವರಣ ಸೃಷ್ಟಿಯಾಗಿದೆ. ಬಿಡುಗಡೆಯಾದ ೨೬ ದಿನಗಳಲ್ಲಿ ೧೫೦ ಕೋಟಿ ಗ್ರಾಸ್ ಗಳಿಕೆ ಬಂದಿದೆ. ಕಲೆಕ್ಷನ್ ಮತ್ತು ಎಲ್ಲಾ ಹಕ್ಕುಗಳಿಂದ ಸೇರಿಕೊಂಡರೆ ಒಟ್ಟಾರೆ ನೆಟ್ ಕಲೆಕ್ಷನ್ ೯೦ ರಿಂದ ೧೦೦ ಕೋಟಿವರೆಗೂ ಲಾಭ ಬರುತ್ತದೆ ಎನ್ನುವ ನಿರೀಕ್ಷೆ ಇದೆ.
ಅದರಲ್ಲಿ ಶೇಕಡ ೫ರಷ್ಟು ಚಾರ್ಲಿಗೆ ಸಲ್ಲುವಂತದ್ದು. ಅವಳ ಹೆಸರಿನಲ್ಲಿ ಭಾರತದಾದ್ಯಂತ ಶ್ವಾನಗಳ ಇನ್‌ಬ್ರೀಡಿಂಗ್ ವಿರುದ್ದ ಹೋರಾಡುತ್ತಿರುವ, ಅದನ್ನು ದತ್ತು ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಎನ್‌ಜಿಓಗಳಿಗೆ ಸಹಾಯ ಮಾಡುವ ಕುರಿತಂತೆ ಯೋಜೆನ ರೂಪಿಸಲಾಗಿದೆ.
ಇದರ ಜೊತೆಗೆ ಚಿತ್ರಕ್ಕೆ ದುಡಿದ ಕಲಾವಿದರು ಮತ್ತು ತಂತ್ರಜ್ಘರಿಗೆ ಒಟ್ಟಾರೆ ಲಾಭದಲ್ಲಿ (ಡಿಜಿಟಲ್, ಸ್ಯಾಟಲೈಟ್ ಹಕ್ಕುಗಳು ಮತ್ತು ಕಲೆಕ್ಷನ್ ಸೇರಿಸಿ) ಶೇಕಡ ೧೦ರಷ್ಟು ಹಂಚಿಕೆ ಮಾಡಲಿದ್ದೇವೆ. ಆ ಮೊತ್ತವೇ ಏಳರಿಂದ ೧೦ ಕೋಟಿ ಆಗುತ್ತದೆ. ವ್ಯಾಪಾರದ ದೃಷ್ಟಿಯಿಂದ ಚಿತ್ರದಿಂದ ಸಾಕಷ್ಟು ಕಲಿತಿದ್ದೇನೆ ಎನ್ನುತ್ತಾರೆ.
ನಾಯಕಿ ಇಲ್ಲದಿದ್ದರೂ ನನ್ನ ಪಾತ್ರವನ್ನು ಕಥೆಯಲ್ಲಿ ವಿಜೃಂಭಿಸಲಾಗಿದೆ. ರೋಲ್‌ನ್ನು ಜನರು ಇಷ್ಟಪಟ್ಟಿದ್ದಾರೆ. ಎಲ್ಲೇ ಹೋದರೂ ಗುರುತು ಹಿಡಿದು ಮಾತನಾಡಿಸುತ್ತಾರೆ. ಅದಕ್ಕಾಗಿ ನಿರ್ದೇಶಕರು, ನಿರ್ಮಾಪಕರಿಗೆ ಋಣಿ ಎಂದು ಸಂಗೀತಶೃಂಗೇತಿ ಹೇಳಿದರು.