ಸಾಯಿಪ್ರಕಾಶ್ ನೂರನೇ ಚಿತ್ರ
ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ನೂರನೇ ನಿರ್ದೇಶನದ ಚಿತ್ರ ‘ಶ್ರೀ ಸತ್ಯಸಾಯಿ ಅವತಾರ’ ಸಿನಿಮಾದ ಪೋಸ್ಟರ್ ಅನಾವರಣ ಕಾರ್ಯಕ್ರಮವು ಕಲಾವಿದರ ಸಂಘದಲ್ಲಿ ನಡೆಯಿತು. ಮಾಜಿ ಮುಖ್ಯಮಂತ್ರಿ, ಎಸ್.ಎಂ.ಕೃಷ್ಣ ಸಮಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ ನಾನು ಅಧಿಕಾರದಲ್ಲಿದ್ದಾಗ ಶ್ರಿ ಸಾಯಿಬಾಬರನ್ನು ಕಂಡಿದ್ದೆ. ಅವರು ನನಗೆ ಧೈರ್ಯ ತುಂಬಿದ್ದರು. ಸಾಯಿಪ್ರಕಾಶ್ ಶಿರಡಿ ಸಾಯಿಬಾಬಾ ಕುರಿತು ಚಿತ್ರ ಮಾಡುವ ಜೊತೆಗೆ ಬಾಬಾನಾಗಿಯೂ ಕಾಣಿಸಿಕೊಂಡಿದ್ದಾರೆ. ಈಗ ಪುಟ್ಟಪರ್ತಿ ಸಾಯಿಬಾಬಾ ಅವರ ಬಗ್ಗೆ ಚಿತ್ರ ಮಾಡಲು ಸಿದ್ದರಾಗಿದ್ದಾರೆ. ಅವರಿಗೆ ಬಾಬಾನ ಆರ್ಶಿರ್ವಾದವಿದೆ ಒಳ್ಳೆಯದಾಗಲಿ ಎಂದರು.
ಮಹರ್ಷಿ ಆನಂದ ಗುರೂಜಿ ಹೇಳುವಂತೆ ಸತ್ಯ ಸಾಯಿಬಾಬಾ ಅವರು ದೈವಾಂಶ ಸಂಭೂತರು. ಜನಸೇವಾ ಕಾರ್ಯಗಳನ್ನು ಮಾಡಿದ್ದಾರೆ. ಬಾಬಾ ಬೆಳೆದು ಬಂದ ಹಾದಿಯನ್ನು ಬೆಳ್ಳಿ ತೆರೆಯ ಮೇಲೆ ತರಲು ಹೊರಟಿರುವ ಈ ನಿರ್ಮಾಪಕರಿಗೆ ಬಾಬಾ ಒಳ್ಳೆಯದನ್ನೆ ಮಾಡುತ್ತಾನೆ ಎಂದು ಹೇಳಿದರು. ಸಾಹಿತಿ ದೊಡ್ಡರಂಗೇಗೌಡ ಅವರ ಪ್ರಕಾರ ಸಾಯಿಪ್ರಕಾಶ್ ಅವರಲ್ಲಿ ಒಳ್ಳೆಯ ಕವಿಯೂ ಇದ್ದಾರೆ. ಭಕ್ತಿಪ್ರದಾನ ಚಿತ್ರಗಳನ್ನು ತುಂಬಾ ಚೆನ್ನಾಗಿ ತೆಗೆಯುವ ಕಲೆ ಅವರಲ್ಲಿದೆ. ಅವರಿಗೆ ಮಂಗಳವಾಗಲಿ ಎಂದರು. ಗಣೇಶ್‌ನಾರಾಯಣ್ ಸಂಗೀತ, ಜೆಜೆಕೃಷ್ಣ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನವಿದೆ. ಕಲಾವಿದರ ಆಯ್ಕೆ ಪ್ರಕ್ರಿಯೆ ಮುಗಿದ ನಂತರ ಚಿತ್ರೀಕರಣ ಶುರುಮಾಡಲು ಯೋಜನೆ ರೂಪಿಸಲಾಗಿದೆ.