Garadi.Shooting News

Saturday, January 07, 2023

221

ಕೊನೆ ಹಂತದಲ್ಲಿ ಗರಡಿ

       ಸೌಮ್ಯ ಫಿಲಿಂಸ್ ಹಾಗೂ ಕೌರವ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ವನಜಾಪಾಟೀಲ್ ನಿರ್ಮಾಣ ಮಾಡುತ್ತಿರುವ ‘ಗರಡಿ’ ಸಿನಿಮಾದ ಕೊನೆ ದಿನದ ಚಿತ್ರೀಕರಣವು ಜಿ.ವಿ.ಅಯ್ಯರ್ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಮಾಧ್ಯಮದವರು ಸೆಟ್‌ಗೆ ಭೇಟಿ ನೀಡಿದಾಗ ತಂಡವು ಅನುಭವಗಳನ್ನು ಹಂಚಿಕೊಂಡಿತು.

       ನಿರ್ದೇಶಕ ಯೋಗರಾಜಭಟ್ಟರು ಮಾತನಾಡಿ ಇಲ್ಲಿಯವರೆಗೂ ೭೦ ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಕಳೆದ ವರ್ಷ ಶುರುಮಾಡಿದ್ದು ಹೊಸ ವರ್ಷದಲ್ಲಿ ಮುಗಿಯುತ್ತಿದೆ. ಬಹುದೊಡ್ಡ ತಾರಗಣವಿದೆ. ವಿಕಾಸ್ ಚೆನ್ನಾಗಿ ಕಥೆ ಮಾಡಿಕೊಟ್ಟಿದ್ದಾರೆ. ದರ್ಶನ್ ಆರಂಭದಿಂದಲೂ ನಮಗೆ ಪ್ರೋತ್ಸಾಹ ಕೊಡುತ್ತಿದ್ದಾರೆ. ವಿ.ಹರಿಕೃಷ್ಣ ೫ ಹಾಡುಗಳನ್ನು ಸುಂದರವಾಗಿ ಸಂಯೋಜಿಸಿದ್ದಾರೆ. ಬಾದಾಮಿಯಿಂದ ಹಿಡಿದು ಬೆಂಗಳೂರು, ದೇವನಹಳ್ಳಿವರೆಗೆ ಸಾಕಷ್ಟು ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಶಾಸಕ ಬೆಳ್ಳಿಪ್ರಕಾಶ್ ನಾಯಕನ ತಂದೆ ಪಾತ್ರ ಮಾಡಿದ್ದಾರೆ. ಆಕ್ಷನ್ ತೆಗೆಯಲು ಬಲವಾದ ಡ್ರಾಮಾ ಬೇಕು. ಅದು ಇದರಲ್ಲಿದೆ. ಮೈಸೂರು, ಧಾರವಾಡದಲ್ಲಿ ನಡೆಯುವ ಕಥೆ. ಸೂರ್ಯ ಒಳ್ಳೆ ಹುಡುಗ. ಸುಜಯ್ ಮೊದಲ ಚಿತ್ರದಲ್ಲೆ ರೊಚ್ಚಿಗೆದ್ದು ಆಕ್ಟ್ ಮಾಡಿದ್ದಾರೆ. ಪಾಟೀಲರ ಬಗ್ಗೆ ಹೇಳುವಂತಿಲ್ಲ. ಅವರು ತಮ್ಮ ಹಿಂದಿನ ಕೌರವ, ನಿಷ್ಕರ್ಷ ಚಿತ್ರಗಳನ್ನು ನೆನಪಿಸುತ್ತಾರೆ. ರವಿಶಂಕರ್ ಜತೆ ಪ್ರಥಮ ಅನುಭವ. ಧರ್ಮಣ್ಣಕಡೂರು ಮುಗುಳುನಗೆಯಿಂದ ನಮ್ಮೊಂದಿಗೆ ಇದ್ದಾರೆಂದು ಹೇಳಿದರು.

      ಮೈಕ್ ತೆಗೆದುಕೊಂಡ ಬಿ.ಸಿ.ಪಾಟೀಲರು ಇದು ನಮ್ಮ ಸಂಸ್ಥೆಯ ೧೬ನೇ ಸಿನಿಮಾ. ಬಹಳ ಸಮಯ ತೆಗೆದುಕೊಂಡು ಮಾಡಿದ ಚಿತ್ರ ಇದಾಗಿದೆ. ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದರಿಂದ ತಡವಾಗಿದೆ. ನಿರ್ದೇಶಕರು ನಾನು ಒಂದೇ ಭಾಗದವರು. ಯಶಸ್ ನಾವು ಕರೆದಾಗಲೆಲ್ಲ ಬಂದು ನಟನೆ ಮಾಡಿದ್ದಾರೆ. ಆಡಿಯೋ ಹಕ್ಕುಗಳು ಸರಿಗಮ ಕಂಪನಿಗೆ ಒಂದು ಕೋಟಿಗೆ ಸೇಲ್ ಆಗಿದೆ. ಹಿಂದಿ ಡಬ್ಬಿಂಗ್, ಸ್ಯಾಟಲೈಟ್ ರೈಟ್ಸ್ ಕೇಳ್ತಿದ್ದಾರೆ. ನಾವಿನ್ನೂ ಕೊಟ್ಟಿಲ್ಲ. ಮುಂದಿನ ತಿಂಗಳು ತೆರೆಗೆ ತರಲು ಯೋಜನೆ ರೂಪಿಸಲಾಗಿದೆ. ದರ್ಶನ್ ಒಂದು ವಾರ ಕೆಲಸ ಮಾಡಿದ್ದಾರೆ. ಅವರ ಎಂಟ್ರಿಯೇ ವಿಭಿನ್ನವಾಗಿದೆ. ಅವರು ಬರುವಾಗ ನೋಡುಗರ ಎದೆ ಝಲ್ಲೆನಿಸುತ್ತದೆ. ಚಿತ್ರಕಥೆ ಸಿದ್ದಪಡಿಸುವ ದಿನದಿಂದಲೂ ನಮ್ಮ ಜತೆ ಇದ್ದಾರೆ. ಚಿತ್ರಮಂದಿರದಿಂದ ಹೊರಬರುವಾಗ ಯಾವುದೋ ಹೊಸ ಲೋಕದಿಂದ ಬಂದಂತೆ ಆಗುತ್ತದೆ ಅಂತ ಮಾಹಿತಿಯನ್ನು ಬಿಚ್ಚಿಟ್ಟರು.

     ನಾಯಕಿ ಸೋನಾಲ್‌ಮಾಂತೆರೋ, ರವಿಶಂಕರ್, ನಾಯಕ ಯಶಸ್‌ಸೂರ್ಯ, ಸುಜಯ್, ರಘು,ಚೆಲುವರಾಜ್, ಪೃಥ್ವಿಶಾಮನೂರು, ಎಲ್ಲರೂ ಸಿನಿಮಾದ ಕುರಿತಂತೆ ಸಂತಸ ವ್ಯಕ್ತಪಡಿಸಿದರು.

 

Copyright@2018 Chitralahari | All Rights Reserved. Photo Journalist K.S. Mokshendra,