ಮಂಡ್ಯ ಹೈದನಾದ ಅಭಯ್
ಯುವನಟ ಅಭಯ್ ಚಂದ್ರಶೇಖರ್ ವಿಭಿನ್ನ ಪ್ರೇಮಕಥೆಯುಳ್ಳ ಮನಸಾಗಿದೆ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ್ದರು. ಈಗವರು ಮತ್ತೊಂದು ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಮಂಗಳವಾರ ಅಭಯ್ ಹುಟ್ಟುಹಬ್ಬ. ಇದೇ ಸಂದರ್ಭದಲ್ಲಿ ಅವರ ಹೊಸ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಚಿತ್ರದ ಹೆಸರು ಮಂಡ್ಯಹೈದ. ಈ ಚಿತ್ರವನ್ನು ಅಭಯ್ ತಂದೆ ಚಂದ್ರಶೇಖರ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ, ಅಲ್ಲದೆ ಈ ಚಿತ್ರಕ್ಕೆ ವಿ. ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದೇ ತಿಂಗಳ ೧೮ರಂದು ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಬಂಡೆ ಮಾಂಕಾಳಮ್ಮ ದೇವಸ್ಥಾನದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಚಂದ್ರಶೇಖರ್, ಮಂಡ್ಯ ಹೈದ ನಮ್ಮ ಬ್ಯಾನರ್‌ನಿಂದ ಹೊರಬರುತ್ತಿರುವ ೫ನೇ ಚಿತ್ರ. ಅಲ್ಲದೆ ನನ್ನ ಮಗನನ್ನು ಹಾಕಿಕೊಂಡು ನಿರ್ಮಿಸುತ್ತಿರುವ ೨ನೇ ಚಿತ್ರವೂ ಹೌದು. ತೇಜಸ್ ಕ್ರಿಯೇಶನ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಇದೇ ತಿಂಗಳ ೧೮ರಂದು ಚಿತ್ರದ ಮುಹೂರ್ತ ನಡೆಸಿ, ಅಂದಿನಿಂದಲೇ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ, ಅದೇ ದಿನ ಚಿತ್ರದ ಟೈಟಲ್, ಕಥೆಯ ಕುರಿತಂತೆ ಹಾಗೂ ಚಿತ್ರೀಕರಣದ ಬಗ್ಗೆ ಎಲ್ಲಾ ವಿವರಗಳನ್ನು ತಿಳಿಸುತ್ತೇವೆ, ಇಂದು ಅಭಯ್ ಹುಟ್ಟುಹಬ್ಬ, ಹಾಗಾಗಿ ಚಿತ್ರದ ಟೈಟಲ್ ಲಾಂಚ್ ಮಾಡಿದ್ದೇವೆ, ಕಿರುತೆರೆ ನಟಿ ಭೂಮಿಕಾ ಅವರನ್ನು ಈ ಚಿತ್ರದ ಮೂಲಕ ನಾಯಕಿಯಾಗಿ ಪರಿಚಯಿಸುತ್ತಿದ್ದೇವೆ ಎಂದು ಹೇಳಿದರು.
ನಂತರ ನಿರ್ದೇಶನ ಶ್ರೀಕಾಂತ್ ಮಾತನಾಡಿ, ನಾನು ಈ ಹಿಂದೆ ರಾಗಣ್ಣ ಅಭಿನಯದ ವಾರ್ಡ್ ನಂ.೧೧ ಎಂಬ ಚಿತ್ರವನ್ನು ನಿರ್ದೇಶಿಸಿದ್ದೆ. ಇದು ನನ್ನ ನಿರ್ದೇಶನದ ೨ನೇ ಚಿತ್ರ. ಮಂಡ್ಯ ಹೈದನ ಲವ್ ಯಾವ ಥರ ಇರುತ್ತೆ ಅಂತ ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಈ ಚಿತ್ರದ ಶೇ.೮೦ ರಷ್ಟು ಚಿತ್ರೀಕರಣವನ್ನು ಮಂಡ್ಯ ಹಾಗೂ ಅದರ ಸುತ್ತಮುತ್ತಲ ಪ್ರದೇಶದಲ್ಲಿ ಉಳಿದ ೨೦ ಭಾಗವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸುತ್ತಿದ್ದೇವೆ. ಕೆಲವರು ಪ್ರೀತಿಗೋಸ್ಕರ ಪ್ರಾಣವನ್ನೇ ತೆಗೀತಾರೆ, ಇನ್ನೂ ಕೆಲವರು ಪ್ರಾಣವನ್ನು ಕೊಡುತ್ತಾರೆ, ನಾಯಕ ಪ್ರೀತಿಗಾಗಿ ಪ್ರಾಣ ಕೊಡ್ತಾನಾ, ಅಥವಾ ಪ್ರಾಣ ತೆಗೀತಾನಾ ಅನ್ನುವುದೇ ಮಂಡ್ಯಹೈದ ಚಿತ್ರದ ಒನ್‌ಲೈನ್ ಕಥೆ. ಚಿತ್ರದಲ್ಲಿ ೫ ಹಾಡುಗಳಿದ್ದು, ಸುರೇಂದ್ರನಾಥ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮನುಗೌಡ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ ಎಂದು ಹೇಳಿದರು.
ಚಿತ್ರದ ನಾಯಕ ಅಭಯ್ ಮಾತನಾಡಿ ಇಂದು ನನಗೆ ತುಂಬಾ ವಿಶೇಷವಾದ ದಿನ, ಈ ಸಿನಿಮಾದಲ್ಲಿ ನನ್ನ ತಂದೆ ತುಂಬಾ ಇನ್‌ವಾಲ್ ಆಗಿದ್ದಾರೆ. ನನ್ನ ಮೊದಲ ಚಿತ್ರದಲ್ಲೂ ಅಷ್ಟೇ. ಅಲ್ಲದೆ ಇದು ನನಗೆ ತುಂಬಾ ಇಷ್ಟವಾಗಿರುವಂಥ ಸಬ್ಜೆಕ್ಟ್. ಪಕ್ಕಾ ಮಂಡ್ಯ ಭಾಷೆ ಈ ಚಿತ್ರದಲ್ಲಿರುತ್ತದೆ. ನನ್ನ ಸಹೋದರ ತೇಜಸ್ ಚಿತ್ರದ ಪ್ರೊಡಕ್ಷನ್ ಕೆಲಸದಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಿದರು.
ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಭೂಮಿಕಾ ಮಾತನಾಡುತ್ತ ನಾನು ಈಗಾಗಲೇ ಗೀತಾ ಸೀರಿಯಲ್‌ನಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡಿದ್ದೆ. ಜೊತೆಗೆ ಪುಟ್ಟಕ್ಕನ ಮಕ್ಕಳು ನಲ್ಲೂ ಅಭಿನಯಿಸಿದ್ದೇನೆ. ಜೊತೆಗೆ ರಾಬರ್ಟ್, ಬ್ರಹ್ಮಚಾರಿ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳನ್ನು ಮಾಡಿದ್ದೆ, ಈ ಚಿತ್ರದ ಮೂಲಕ ನಾಯಕಿಯಾಗುತ್ತಿದ್ದೇನೆ ಎಂದು ಹೇಳಿದರು,