Film 13.Film News

Tuesday, January 10, 2023

164

 

13  ಶೂಟಿಂಗ್ ಮುಗಿಸಿದ     ಸಾಹಸಗಾಥೆ....!

   

 ಈ ಹಿಂದೆ  ಪಲ್ಲಕ್ಕಿ, ಅಮೃತವಾಹಿನಿಯಂಥ ಚಿತ್ರಗಳನ್ನು ನಿರ್ದೇಶಿಸಿದ ಕೆ.ನರೇಂದ್ರಬಾಬು ಅವರ ನಿರ್ದೇಶನದಲ್ಲಿ,  ರಾಘವೇಂದ್ರ ರಾಜ್‌ಕುಮಾರ್‌, ಶ್ರುತಿ, ಪ್ರಮೋದ್ ಶೆಟ್ಟಿ ಅಭಿನಯಿಸಿರುವ ಚಿತ್ರ ‘13’  ಯುವಿ ಪ್ರೊಡಕ್ಷನ್ ಅಡಿಯಲ್ಲಿ ಈ ಚಿತ್ರವನ್ನು ಸಂಪತ್‌ ಕುಮಾರ್‌, ಮಂಜುನಾಥ್‌, ಮಂಜುನಾಥಗೌಡ ಸೇರಿ ನಿರ್ಮಿಸುತ್ತಿದ್ದಾರೆ.  ರಾಘವೇಂದ್ರ ರಾಜ್‌ಕುಮಾರ್‌ ಗುಜರಿ ಅಂಗಡಿ ಮಾಲೀಕ ಮೋಹನ್ ಕುಮಾರ್ ಹಾಗೂ  ಟೀ ಅಂಗಡಿ ನಡೆಸುವ ಸಾಯಿರಾಬಾನು  ಎಂಬ ಮುಸ್ಲಿಂ  ಮಹಿಳೆಯ ಪಾತ್ರದಲ್ಲಿ ಶ್ರುತಿ ಅವರು ನಟಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ನಡದೆ ಒಂದು ನೈಜ ಘಟನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಈ  ಚಿತ್ರಕಥೆಯನ್ನು ನರೇಂದ್ರ ಬಾಬು ಹೆಣೆದಿದ್ದಾರೆ.

    ಈಗಾಗಲೇ  ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರತಂಡ, ಚಿತ್ರದ ಮೇಕಿಂಗ್ ವೀಡಿಯೋ ತೋರಿಸಿ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿತು.

ಅಂತರ್ಜಾತೀಯ ಪ್ರೇಮ ಕಥೆ  ಇದಾಗಿದ್ದು, ಗಂಡ- ಹೆಂಡತಿ ಅಂದರೆ ಹೀಗಿರಬೇಕು ಎನ್ನುವಂತಿದ್ದ ದಂಪತಿಗಳಿಬ್ಬರೂ ತಮ್ಮದಲ್ಲದ ತಪ್ಪಿಗೆ ಇಡೀ ಜೀವನ ಯಾವರೀತಿ ಕಷ್ಟಪಡುತ್ತಾರೆ ಎಂಬುದನ್ನು ಹೇಳುವ,  ಮನುಷ್ಯ ಸಂಬಂಧಗಳನ್ನು ಬೆಸೆಯುವ ಕಥೆಯಿದು.  ಮುಹೂರ್ತದ ಸಂದರ್ಭದಲ್ಲಿ  ೩ ತಿಂಗಳಲ್ಲಿ ಮೊದಲಪ್ರತಿ ಹೊರ ತರುತ್ತೇನೆ ಎಂದು ಹೇಳಿದ್ದೆ, ಆದರೆ ಸಾಕಷ್ಟು ಅಡೆತಡೆಗಳುಂಟಾಗಿ ೬ ತಿಂಗಳಾಯಿತು. ಒಬ್ಬರಿಗೆ ಹಾರ್ಟ್ ಅಟ್ಯಾಕ್ ಆಯ್ತು, ನನ್ನ ಕಾಲಿಗೂ ಪೆಟ್ಟಾಗಿ ಇನ್ನೂ ಸರಿಯಾಗಿಲ್ಲ, ಕೊಟ್ಟಿಗೆಹಾರದಲ್ಲಿ ಮಾಡಬೇಕೆಂದಿದ್ದ ಸೀನನ್ನು ಮಂಡ್ಯ ಹತ್ತಿರದ ಹಳ್ಳಿಯೊಂದರಲ್ಲಿ ಮಾಡಿದ್ದೇನೆ. ನನ್ನ ತಂಡ ಜೊತೆ ನಿಂತಿದ್ದರಿಂದ ಇಲ್ಲಿಯವರೆಗೆ ಬಂದಿದ್ದೇನೆ. ೪ ಜನ ಪ್ರೊಡ್ಯೂಸರ್ ಗಳು ೪ ಪಿಲ್ಲರ್ ಗಳಂತೆ ನಿಂತಿದ್ದಾರೆ. ರಾಗಣ್ಣಾವರನ್ನು ಈವರೆಗೆ ನೋಡಿದ್ದಕ್ಕಿಂತ ಬೇರೆಯದೇ ರೀತಿ ನೋಡಬಹುದು  ಎಂದು ನಿರ್ದೇಶಕ ನರೇಂದ್ರ ಬಾಬು ಹೇಳಿದರು.

   ಚಿತ್ರದ ನಾಯಕ ರಾಘಣ್ಣ ಮಾತನಾಡುತ್ತಾ ನಿರ್ದೇಶಕರು ಬಂದು ಈ ಟೈಟಲ್ ಹೇಳಿದಾಗ ’13' ಇದೇನಿರಬಹುದು ಅನಿಸಿತ್ತು. ಶೃತಿ ಮಾಡುತ್ತಿದ್ದಾರೆ ಅಂದಾಗ ಇಷ್ಟವಾಯ್ತು. ನಮಗೂ ಆಕ್ಟ್ ಮಾಡುವಾಗ  ಕುತೂಹಲ ಮೂಡುತ್ತೆ. ಚಿತ್ರದಲ್ಲಿ 13 ಪದಕ್ಕೆ ಅರ್ಥ ಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ, ಈಗ ಶೂಟಿಂಗ್ ಮಾಡುವುದು ಮುಖ್ಯವಲ್ಲ, ನಂತರ ಅದನ್ನು ಹೇಗೆ ಪ್ರೊಮೋಟ್ ಮಾಡಬೇಕು ಅನ್ನೋದು ಮುಖ್ಯ. ಶಾಲೆಯ ಕಟ್ಟಡಗಳನ್ನು ಅಭಿವೃದ್ಧಿ ಪಡಿಸುವುದು,ಇಂಥ ಕೆಲಸಗಳನ್ನು ಮಾಡುವ ಮೂಲಕ ಪ್ರೊಮೋಟ್ ಮಾಡಬೇಕಿದೆ. ಎಲ್ಲೋ ಒಂದುಕಡೆ ಸಿನಿಮಾದವರು ಸೇವೆಯನ್ನೂ ಮಾಡ್ತಾರೆ ಅನ್ನೋದು ಜನರಿಗೆ ಗೊತ್ತಾಗಬೇಕು. ಶ್ರುತಿ  ಅದ್ಭುತ ನಟಿ. ಅವರ ಜೊತೆ 2ನೇ ಚಿತ್ರ ಎಂದರು.

     ನಟಿ ಶೃತಿ ಮಾತನಾಡಿ 13 ಹೆಸರು ಮಾತ್ರ ನೆಗೆಟಿವ್, ಸಿನಿಮಾಪೂರ್ತಿ ಪಾಸಿಟಿವ್ ಆಗಿದೆ. ಇದೇ ಮೊದಲ ಬಾರಿಗೆ ಮುಸ್ಲಿಂ ಹೆಣ್ಣು ಮಗಳ ಪಾತ್ರ ಮಾಡಿದ್ದೇನೆ. ನಿರ್ದೇಶಕರು ಈ ಪಾತ್ರದ ಬಗ್ಗೆ  ಹೇಳಿದಾಗ ತುಂಬಾ ಹೆದರಿದ್ದೆ. ಯಾಕೆಂದರೆ ನಾನು ಮಾಡುವ ಪಾತ್ರ ಯಾರಿಗೂ ನೋವುಂಟು ಮಾಡಬಾರದು ಅಲ್ಲದೆ ಎಲ್ಲೋ ಸ್ವಲ್ಪ ಲೋಪದೋಷ ಆದರೂ ತಂಡಕ್ಕೆ ಅಲ್ಲದೆ ವೈಯಕ್ತಿಕವಾಗಿ ನಮಗೂ ತೊಂದರೆ ಆಗುತ್ತದೆ.    ಗೆಲುವಿನ ಸರದಾರ ಚಿತ್ರದ ನಂತರ ರಾಘಣ್ಣ ಜೊತೆ ಅಭಿನಯಿಸಿದ್ದೇನೆ ಎಂದು ಹೇಳಿದರು.

   ನಿರ್ಮಾಪಕ ಕೆ. ಸಂಪತ್‍ ಕುಮಾರ್ ಮಾತನಾಡಿ ಏನೇ ನೋವು ಕೊಟ್ಟರೂ ಸಿನಿಮಾ ಆದ್ಭುತವಾಗಿ ಬಂದಿದೆ. ಗೋವಿಂದ ಗೋಪಾಲ, ಸಾಫ್ಟ್‌ವೇರ್ ಗಂಡ ಸೇರಿ ನನ್ನ ನಿರ್ಮಾಣದ 5ನೇ ಚಿತ್ರವಿದು. ಅಮೃತವಾಹಿನಿ ನಂತರ ಬಾಬು ಜೊತೆ ಎರಡನೇ ಚಿತ್ರ ಎಂದು ಹೇಳಿಕೊಂಡರು. ಇನ್ನು ಇವರ ಜತೆ ಕೈಜೋಡಿಸಿರುವ ಮಂಜುನಾಥ್‍ಗೌಡ ಹಾಗೂ ಮಂಜುನಾಥ್ ಚಿತ್ರದ ಕುರಿತಂತೆ ಮಾತನಾಡಿದರು.

   ಪ್ರಮೋದ್ ಶೆಟ್ಟಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಮಂಜುನಾಥ್‌ ನಾಯ್ಡು ಅವರ ಛಾಯಾಗ್ರಹಣ ಹಾಗೂ ಸೋಹನ್‌ ಬಾಬು ಅವರ  ಸಂಗೀತ ಈ ಚಿತ್ರಕ್ಕಿದೆ.

Copyright@2018 Chitralahari | All Rights Reserved. Photo Journalist K.S. Mokshendra,