ಪ್ರಜಾರಾಜ್ಯದಲ್ಲಿ ಅನ್ನದಾತನ ಹಾಡು
ವೃತ್ತಿಯಲ್ಲಿ ನ್ಯೂರೋ ಸರ್ಜನ್, ಪ್ರವೃತ್ತಿ ಸಿನಿಮಾ ನಿರ್ಮಾಪಕ ಆಗಿರುವ ಡಾ.ವರದರಾಜ್ ‘ಪ್ರಜಾರಾಜ್ಯ’ ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ ಬರೆಯುವ ಜೊತೆಗೆ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ತಾರಗಣದಲ್ಲಿ ಸುಧಾರಾಣಿ, ಸುಧಾಬೆಳವಾಡಿ, ತಬಲನಾಣಿ, ಸಂಪತ್, ಮೈತ್ರೇಯಾ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಉಪೇಂದ್ರ ಹಾಡಿರುವ ಜೈ ಎಲೆಕ್ಷನ್ ಗೀತೆ ಬಿಡುಗಡೆಯಾಗಿದ್ದು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದೆ.
ಇದೀಗ ಸಂಕ್ರಾಂತಿ ಹಬ್ಬದ ಸಲುವಾಗಿ ಡಾ.ವಿ.ನಾಗೇಂದ್ರಪ್ರಸಾದ್ ರಚಿಸಿರುವ ‘ಜಗದಲ್ಲಿ ರೈತನೆಂಬ ಬ್ರಹ್ಮ’ ಎನ್ನುವ ಹಾಡಿಗೆ ಶಂಕರ್‌ಮಹದೇವನ್ ಧ್ವನಿಯಾಗಿದ್ದಾರೆ. ಸಿನಿಮಾದಲ್ಲಿ ರೈತನಾಗಿ ಕಾಣಿಸಿಕೊಂಡಿರುವ ಟಿ.ಎಸ್.ನಾಗಭರಣ ಗೀತೆಯನ್ನು ಬಿಡುಗಡೆ ಮಾಡಿದರು. ಎಲ್ಲಾ ವರ್ಗದ ಮಂದಿಯನ್ನು ಪ್ರತಿನಿಧಿಸುವ ಪಾತ್ರಗಳು ಚಿತ್ರದಲ್ಲಿವೆ. ಆರೋಗ್ಯ, ಶಿಕ್ಷಣ, ವಸತಿ, ಆಹಾರ ಎಲ್ಲರಿಗೂ ಸಿಗಬೇಕು ಎನ್ನುವ ಕಲ್ಪನೆಯನ್ನು ಮುಂದಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಇದು ಸಿಗದಿದ್ದರೆ ಮುಂದೆ ಏನು ಮಾಡಬೇಕು ಎನ್ನುವುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.
ಸಂವಿಧಾನದಲ್ಲಿ ಶಿಕ್ಷಣದ ಹಕ್ಕು ಕಲ್ಪಿಸಲಾಗಿದೆ. ಆದರೆ ಆರೋಗ್ಯದ ಬಗ್ಗೆ ಕಾಳಜಿವಹಿಸಿಲ್ಲ. ಹೀಗಾಗಿ ಸಾವಿರಕ್ಕೆ ಮತ ಮಾರಿಕೊಳ್ಳದೆ, ಉಚಿತ ಆರೋಗ್ಯ ಕಲ್ಪಿಸಿ ಮತ ಹಾಕುತ್ತೇವೆ ಎನ್ನುವುದನ್ನು ಹೇಳಿ ಎನ್ನುವ ಜಾಗೃತಿ ಮೂಡಿಸಲಾಗಿದೆ. ಚಿತ್ರವು ಯಾವುದೇ ಪಕ್ಷ, ಸರ್ಕಾರದ ವಿರುದ್ದ ಅಲ್ಲ. ಬದಲಾಗಿ, ಜನರಿಗಾಗಿ ಮಾಡಿದ ಚಿತ್ರವೆಂದು ತಂಡವು ಸ್ಪಷ್ಟಪಡಿಸಿತು. ವಿಜಯ್‌ಭಾರ್ಗವ್ ನಿರ್ದೇಶನ ಮಾಡಿರುವುದು ಹೊಸ ಅನುಭವ.