ಐದು ಕಥೆಗಳ ಪೆಂಟಗನ್
ನಿರ್ದೇಶಕ ಮತ್ತು ನಿರ್ಮಾಪಕ ಗುರುದೇಶಪಾಂಡೆ ತಮ್ಮ ಜಿ ಸಿನಿಮಾಸ್ ಬ್ಯಾನರ್‌ನಡಿ ಸಿದ್ದಪಡಿಸಿರುವ ‘ಪೆಂಟಗನ್’ ಸಿನಿಮಾದಲ್ಲಿ ಐದು ಕಥೆಗಳು ಇರಲಿದ್ದು, ಐದು ನಿರ್ದೇಶಕರು ಆಕ್ಷನ್ ಕಟ್ ಹೇಳಿರುವುದು ವಿಶೇಷ. ಆ ಪೈಕಿ ಒಂದು ಕಥೆಯು ಕಿಶೋರ್ ಸುತ್ತ ಸಾಗುತ್ತದೆ. ಕನ್ನಡ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದು, ಇದರಲ್ಲಿ ಬರುವ ಸಂಭಾಷಣೆಗಳು ಚರ್ಚೆಗೆ ಗ್ರಾಸವಾಗಿದೆ. ಕನ್ನಡಪರ ಸಂಘಟನೆಯ ಮುಖ್ಯಸ್ಥನೊಬ್ಬನ ಭ್ರಷ್ಟಚಾರದ ಬಗ್ಗೆ ಟೀಸರ್‌ನಲ್ಲಿ ಹೇಳಿರುವುದು ಕುತೂಹಲ ಹೆಚ್ಚಿಸಿದೆ.
ಇದರ ಕುರಿತಂತೆ ಮಾತನಾಡಿರುವ ನಿರ್ಮಾಪಕರು ಕೆಲವು ವರ್ಷಗಳ ಹಿಂದೆ ಅಂದುಕೊಂಡ ಏಳೆಯನ್ನು ಇಟ್ಟುಕೊಂಡು ಕಥೆ ಮಾಡಲಾಗಿದೆ. ಕಿಶೋರ್ ಅವರು ರೌಡಿಯೊಬ್ಬ ಕನ್ನಡಪರ ಹೋರಾಟಗಾರನಾಗುವ ಪಾತ್ರ ಮಾಡಿದ್ದಾರೆ. ಡೆತ್ ಥೀಮ್ ಹೊಂದಿದ್ದು ಐದು ಕಥೆಗಳಿಗೂ ಒಂದೇ ಆಗಿದೆ. ಕೊನೆಯಲ್ಲಿ ಎಲ್ಲವು ಒಂದು ಕಥೆಗೆ ಲಿಂಕ್ ಆಗುತ್ತದೆ. ಚರ್ಚೆಯಾಗಬೇಕೆಂಬ ಉದ್ದೇಶದಿಂದಲೇ ಟೀಸರ್ ಬಿಡುಗಡೆ ಮಾಡಿದ್ದೇವೆ. ಇದು ಆರೋಗ್ಯಕರ ಚರ್ಚೆ. ಅಂತಿಮವಾಗಿ ಎಲ್ಲಾ ಕುತೂಹಲಗಳಿಗೆ ಚಿತ್ರವು ಉತ್ತರ ನೀಡಲಿದೆ ಎನ್ನುತ್ತಾರೆ.
ಕಿಶೋರ್ ಹೇಳುವಂತೆ ಒಂದು ಸಿನಿಮಾ ಅಂದಾಗ ಅದು ಚರ್ಚೆ ಆಗಬೇಕು. ಇವತ್ತು ಅದೇ ರೀತಿಯಾಗುತ್ತಿದೆ. ನನಗೆ ತುಂಬ ಖುಷಿಕೊಟ್ಟ ರೋಲ್ ಆಗಿದೆ ಎಂದರು. ಉಳಿದಂತೆ ಕೃತಿಕಾದೇಶಪಾಂಡೆ, ನಿರ್ದೇಶಕ ಆಕಾಶ್‌ಶ್ರೀವತ್ಸ ಅನುಭವಗಳನ್ನು ಹಂಚಿಕೊಂಡರು. ತುಣುಕುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ರೂಪೇಶ್‌ರಾಜಣ್ಣ, ಅಶ್ವಿನಿ ಅವರಿಗೆ ಸಿನಿಮಾ ತೋರಿಸಿ ಸ್ಪಷ್ಟನೆ ಕೊಡುವುದಾಗಿ ನಿರ್ಮಾಪಕರು ಹೇಳುವುದರೊಂದಿಗೆ ಪ್ರಕರಣಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿತು.