ಹೊಸ ಯುದ್ದಕಾಂಡ
೮೦ರ ದಶಕದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಯುದ್ದಕಾಂಡ’ ಚಿತ್ರವೊಂದು ಹಿಟ್ ಆಗಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರುತ್ತಿದೆ. ಟೈಟಲ್ ಒಂದೇಯಾದರೂ ಕಥೆ ಬೇರೆಯದೆ ಆಗಿರುತ್ತದಂತೆ. ನಾಯಕ ಅಜಯ್‌ರಾವ್ ತಮ್ಮದೆ ಅಜಯ್‌ರಾವ್ ಪ್ರೊಡಕ್ಷನ್‌ದಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಈ ಹಿಂದೆ ‘ಕಟ್ಟಿಂಗ್‌ಶಾಪ್’ ನಿರ್ದೇಶಿಸಿದ್ದ ಪವನ್‌ಭಟ್ ರಚಿಸಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಶೀರ್ಷಿಕೆ ಟೀಸರ್ ಅನಾವರಣ ಕಾರ್ಯಕ್ರಮ ನಡೆಯಿತು. ಚಿತ್ರದಲ್ಲಿ ಅವರು ವಕೀಲರಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಸಿನಿಮಾ ಶೀರ್ಷಿಕೆಯನ್ನು ವಕೀಲರಿಂದಲೇ ಲಾಂಚ್ ಮಾಡಿಸಿದ್ದು ವಿಶೇಷವಾಗಿತ್ತು.
ನಂತರ ಮಾತನಾಡಿದ ಅಜಯ್‌ರಾವ್ ನಾನು ಚಿತ್ರರಂಗಕ್ಕೆ ಎಂಟ್ರಿಕೊಟ್ಟು ೨೦ ವರ್ಷ ಆಯ್ತು. ಒಬ್ಬ ನಟನಾಗಿ ಯಶಸ್ಸು, ಸೋಲು ಎರಡನ್ನು ಕಂಡಿದ್ದೇನೆ. ಕೇವಲನಾಗಿ ಆರ್ಟಿಸ್ಟ್‌ಆಗಿ ಉಳಿಯದೇ ಸಿನಿಮಾದ ಎಲ್ಲಾ ಕ್ಷೇತ್ರದಲ್ಲಿ ಪ್ರಯೋಗ ಮಾಡಬೇಕು ಎಂದುಕೊಂಡು ಬೆಂಗಳೂರಿಗೆ ಬಂದೆ. ಹೀರೋ ಆಗಿದ್ದವನು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿಯೂ ಗುರುತಿಸಿಕೊಂಡಿದ್ದೇನೆ. ‘ಕೃಷ್ಣಲೀಲಾ’ ಚಿತ್ರದ ಮೂಲಕ ನಿರ್ಮಾಪಕನಾಗಿ ಬಡ್ತಿ ಹೊಂದಿದೆ. ಇದೀಗ ಏಳು ವರ್ಷಗಳ ತರುವಾಯ ನನ್ನ ಎರಡನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದೇನೆ ಎಂದು ಹಳೆಯ ಸುಂದರ ನೆನಪುಗಳನ್ನು ಹಂಚಿಕೊಂಡರು.
ಸಂಗೀತ ಕೆ.ಬಿ.ಪ್ರವೀಣ್, ಛಾಯಾಗ್ರಹಣ ಕಾರ್ತಿಕ್‌ಶರ್ಮ ಅವರದಾಗಿದೆ. ಸದ್ಯದಲ್ಲೆ ನಾಯಕಿ ಇನ್ನಿತರ ತಾರಗಣ, ತಂತ್ರಜ್ಘರ ವಿವರಗಳನ್ನು ನೀಡುವುದಾಗಿ ತಂಡವು ಹೇಳಿಕೊಂಡಿದೆ.