ಕ್ರೈಂ ಥ್ರಿಲ್ಲರ್ ಕುರಿತಾದ ಪ್ರಾಯಶ:
ಕಿರುತೆರೆಯಲ್ಲಿ ಕೆಲಸ ಮಾಡಿರುವ ಪ್ರತಿಭೆಗಳು ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿರುವುದು ಆರೋಗ್ಯಕರ ಬೆಳವಣಿಗೆ ಆಗಿದೆ. ಅದರಂತೆ ಹತ್ತು ವರ್ಷಗಳ ಕಾಲ ಧಾರವಾಹಿಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಕುಂದಾಪುರದ ರಂಜಿತ್‌ರಾವ್ ಮೊದಲಬಾರಿ ‘ಪ್ರಾಯಶ:’ ಎನ್ನುವ ಚಿತ್ರಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ, ಮೂರು ಹಾಡುಗಳಿಗೆ ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳುವ ಜತೆಗೆ ಅರ್ಹ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿರುವುದು ಹೊಸ ಅನುಭವ.
ಕ್ರೈಂ ಥ್ರಿಲ್ಲರ್ ಕಥೆಯಲ್ಲಿ ಪ್ರೀತಿಯ ಏಳೆಯೊಂದು ಸೇರಿಕೊಂಡಿರುತ್ತದೆ. ಚಿತ್ರದಲ್ಲಿ ರೇಪ್ ಅಂಡ್ ಮರ್ಡರ್ ನಡೆದಿದ್ದು, ಹೋಗ್ತಾ ಹೋಗ್ತಾ ಯಾರ‍್ಯಾರು ಭಾಗಿಯಾಗಿರಬಹುದು. ನೋಡ್ತಾ ಹೋದಾಗ ತನ್ನ ಸುತ್ತಮುತ್ತ ಇರುವವರು ಭಾಗಿಯಾಗಿದ್ದಾರೆಂಬ ಸಣ್ಣದೊಂದು ವಾಸನೆ ಅಂಟಿಕೊಂಡಿರುತ್ತದೆ. ಆದರೆ ನಿಜವಾಗಲೂ ಅವರೇ ಮಾಡಿದ್ದಾರಾ? ಅಥವಾ ಅಲ್ಲಿ ಏನಾಗಿರುತ್ತೆ? ಏನಾಗಿದೆ? ಅವತ್ತಿನ ದಿನ ನಡೆದ ಘಟನೆ ಏನು ಎಂಬುದು ಮುಖ್ಯ ಸಾರಾಂಶವಾಗಿದೆ. ‘ವಿಷಯಗಳನ್ನು ನಂಬುವ ಮುಂಚೆ ಒಮ್ಮೆ ನೋಡಿ ತಿಳಿದುಕೊಳ್ಳುವುದು ಸೂಕ್ತ’ ಅಂತ ಸಂದೇಶದಲ್ಲಿ ಹೇಳಲಾಗಿದೆ.
ತುಳು ಚಿತ್ರದಲ್ಲಿ ನಟಿಸಿರುವ ರಾಹುಲ್‌ಅಮೀನ್ ನಾಯಕ, ಹಿರಿಯ ನಟಿ ವಿನಯಪ್ರಸಾದ್ ಅಣ್ಣನ ಮಗಳು ಕೃಷ್ಣಭಟ್ ನಾಯಕಿ. ಉಳಿದಂತೆ ಮಧುಹೆಗಡೆ, ವಿಜಯ್‌ಶೋಭರಾಜ್ ಪಾವೂರು, ಶನಿಲ್‌ಗುರು ಹಾಗೂ ದಕ್ಷಿಣ ಕನ್ನಡದ ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಸಂಗೀತ ವಿಜಯ್‌ಕೃಷ್ಣ, ಛಾಯಾಗ್ರಹಣ ಪ್ರಶಾಂತ್‌ಪಾಟೀಲ್, ಸಂಕಲನ ಅಶೋಕ್.ಕೆ, ನೃತ್ಯ ವಿನಾಯಕ್ ಅವರದಾಗಿದೆ. ಬೆಂಗಳೂರು, ಮಂಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಸಿನಿಮಾದ ಪೋಸ್ಟ್ ಪ್ರೊಡಕ್ಷನ್‌ಗಳು ನಡೆಯುವ ಸಂದರ್ಭದಲ್ಲಿ ಸಿನಿಪಂಡಿತರೊಬ್ಬರು ಚಿತ್ರದ ದೃಶ್ಯಗಳನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದು ಅಲ್ಲದೆ, ಮಂಗಳೂರು ಮತ್ತು ಉಡುಪಿ ಪ್ರಾಂತ್ಯದ ಹಕ್ಕುಗಳಿಗೆ ಉತ್ತಮ ಬೆಲೆ ನೀಡಿ ಖರೀದಿಸಿದ್ದಾರೆ. ಇದರಿಂದ ಹೊಸಬರ ಸಿನಿಮಾಗೂ ವ್ಯವಹಾರ ನಡೆಯುತ್ತದೆಂದು ಸಾಬೀತು ಆಗಿರುತ್ತದೆ. ‘ಯುಎ’ ಪ್ರಮಾಣಪತ್ರ ಪಡೆದುಕೊಂಡಿರುವ ಚಿತ್ರವು ಡಿಸೆಂಬರ್‌ದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.