*ಟೀಸರ್ ಮೂಲಕ ಕುತೂಹಲ ಹುಟ್ಟಿಸಿರುವ ’ರಾಕ್ಷಸರು’*
ಹಿರಿಯ ನಟ ಸಾಯಿಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ’ರಾಕ್ಷಸರು’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ಇದೇ ಡಿಸೆಂಬರ್ 16 ರಂದು ತೆರೆ ಕಾಣುತ್ತಿದೆ. ಟೀಸರ್ ಸಹ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ’ಗಟ್ಟಿ ಗುಂಡಿಗೆ ಇರೋರ್ಗೆ ಮಾತ್ರ’ ಎಂಬ ಅಡಿಬರಹ ಈ ಚಿತ್ರಕ್ಕಿದೆ.
ಚಿತ್ರಕ್ಕೆ ಅಜಯ್ ಕುಮಾರ್ ಕಥೆ, ಚಿತ್ರಕಥೆ ಬರೆದಿದ್ದು ಸಂಭಾಷಣೆಗೆ ರಾಜಶೇಖರ್ ಪೆನ್ನು ಕೆಲಸ ಮಾಡಿದೆ.
ರಜತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಯಶಸ್ವಿ ನಿರ್ಮಾಪಕ ರಮೇಶ್ ಕಶ್ಯಪ್ ’ಗರುಡಾದ್ರಿ ಸಿನಿಮಾಸ್’ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ.
ನಾನು ನಟನೆ ಆರಂಭಿಸಿ, ಐವತ್ತು ವರ್ಷಗಳಾಗಿದೆ. ಅದರಲ್ಲೂ ಇಪ್ಪತ್ತೈದು ವರ್ಷಗಳ ಹಿಂದೆ ತೆರೆಕಂಡ "ಪೊಲೀಸ್ ಸ್ಟೋರಿ" ನನಗೆ ಹೆಸರು ತಂದುಕೊಟ್ಟ ಚಿತ್ರ. ಈ ಸಮಯದಲ್ಲಿ ನಾನು ನನ್ನ ತಂದೆ - ತಾಯಿಯನ್ನು ಸ್ಮರಿಸುತ್ತೇನೆ. "ಹೆತ್ತವರು" ಚಿತ್ರದ ನಂತರ ಅಜಯ್ ಕುಮಾರ್ ಅವರೊಂದಿಗೆ "ರಾಕ್ಷಸರು" ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ನಾನು ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲೇ ಕಾಣಿಸಿಕೊಂಡಿದ್ದೇನೆ ಎಂದರು ನಟ ಸಾಯಿಕುಮಾರ್.
ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕಥೆಗಾರ ಅಜಯ ಕುಮಾರ್, ’ಇಷ್ಟು ದಿನಗಳು ನಾನು ಸೆಂಟಿಮೆಂಟ್ ಕಥೆಗಳನ್ನು ಬರೆಯುತ್ತಿದ್ದೆ. ಈ ಭಾರಿ ಅದಕ್ಕೆ ವಿರುದ್ದವಾಗಿ ಮೊದಲ ಸಲ ಕ್ರೈಮ್, ಥ್ರಿಲ್ಲರ್, ಆ್ಯಕ್ಷನ್ ಕಥೆ ಮಾಡಿದ್ದೇನೆ. ಈ ಚಿತ್ರದಲ್ಲಿ ಹೆಚ್ಚು ಕ್ರೈಮ್ ತೋರಿಸಲಾಗಿದೆ. ಹಾಗಾಗಿ ಎಲ್ಲಾ ಭಾಷೆಗಳಲ್ಲೂ ಸೆನ್ಸಾರ್ ಮಂಡಳಿ ಕೆಲವು ದೃಶ್ಯಗಳನ್ನು ತೆಗೆಯಲು ಹೇಳಿದರು. ಅದರಿಂದ ಸ್ವಲ್ಪ ವಿಳಂಬವಾಯಿತು. ಈಗ ಬಿಡುಗಡೆ ಹಂತಕ್ಕೆ ಬಂದಿದೆ. ನಮ್ಮ ಸುತ್ತಮುತ್ತ ನಡೆವ ಘಟನೆಗಳನ್ನೇ ತೆಗೆದುಕೊಂಡು ಕಥೆ ಮಾಡಲಾಗಿದೆ.
ಚಿತ್ರದಲ್ಲಿ ಕ್ರೈಮ್ ಹೆಚ್ಚಾಗಿದ್ದರು, ಎಲ್ಲರೂ ನೋಡಲೇ ಬೇಕಾದ ಸಿನಿಮಾ ಇದು ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು.
ನಂತರ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿರುವ ಥ್ರಿಲ್ಲರ್ ಮಂಜು ಮಾತನಾಡಿ ’ಈ ಚಿತ್ರದಲ್ಲಿ ಅದ್ಭುತವಾದ ಆ್ಯಕ್ಷನ್ ದೃಶ್ಯಗಳನ್ನು ಸೆರೆ ಹಿಡಿಯಲಾಗಿದ್ದು, 8 ಆ್ಯಕ್ಷನ್ ಗಳು ಇವೆ. ಇದರಲ್ಲಿ ಒಂದು ಗೀತೆಯನ್ನು ನಾನೇ ಕೊರಿಯೋಕ್ರಾಫಿ ಕೂಡ ಮಾಡಿದ್ದೇನೆ. ಇದೊಂದು ಮೆಸೇಜ್ ಇರುವಂತಹ ಸುಂದರ ಸಿನಿಮಾ. ನಾನು ಸಿನಿಮಾ ನೋಡಿದ್ದೇನೆ. ಗೆದ್ದೆ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ’ ಎಂದರು.
ಚಿತ್ರದಲ್ಲಿ ನಟಿಸಿರುವ ಕಲಾವಿದರಾದ ಪುನೀತ್, ಅಂಜಿ, ಜಿತಿನ್ ಅವಿ, ಕಿರಣ್, ಸುನೀಲ್ ಹಾಗೂ ರುಶಿಕಾ ರಾಜ್ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು.
ಚಿತ್ರದ ಬಗ್ಗೆ ಒನ್ ಲೈನ್ ನಲ್ಲಿ ಹೇಳುವುದಾರೆ, ಐದು ಜನ ಕ್ರಿಮಿನಲ್ ಗಳು ಮಾಡಬಾರದ ದುಷ್ಕೃತ್ಯಗಳನ್ನು ಮಾಡಿ ತಲೆ ಮರಸಿಕೊಂಡಿರುತ್ತಾರೆ. ಇವರನ್ನು ಪೊಲೀಸರು ಹೇಗೆ ಹುಡುಕುತ್ತಾರೆ? ಎಂಬುದೇ ಕಥಾಹಂದರ. ಈ ಚಿತ್ರವನ್ನು ಆರಕ್ಷಕರಿಗೆ ಅರ್ಪಿಸಲು ನಿರ್ಧರಿಸಿರುವುದಾಗಿ ನಿರ್ಮಾಪಕ ರಮೇಶ್ ಕಶ್ಯಪ್ ತಿಳಿಸಿದರು.
ಎರಡು ಹಾಡುಗಳಿರುವ ಈ ಚಿತ್ರಕ್ಕೆ ಎಮಿಲ್ ಸಂಗೀತ ನೀಡಿದ್ದಾರೆ. ಜನಾರ್ದನ ಬಾಬು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಮನು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಡೈಲಾಗ್ ಕಿಂಗ್ ಸಾಯಿಕುಮಾರ್, ರಾಜಶೇಖರ್, ನಾಜರ್, ಸುಮನ್, ಕಿರಣ್ ಸುನೀಲ್, ರುಶಿಕಾ ರಾಜ್, ಅವಿನಾಶ್ ನೀರಜ್ ಯಾದವ್, ಹರ್ಷಿತ್, ಚೈತ್ರ, ಮಾನಸ, ಆಶಾ, ಮಂಜುಳ, ಸುರೇಖ, ರಚನ, ಕಮಲ, ಚಂದ್ರಕಲಾ, ರಾಧ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.