ಟೀನೇಜ್ ಹುಡುಗರ ಹುಡುಕಾಟ, ತುಂಟಾಟ
‘ಯೋಗರಾಜ ಸಿನಿಮಾಸ್’ ಹಾಗೂ ‘ರವಿ ಶಾಮನೂರು ಫಿಲಿಂಸ್’ ಜಂಟಿಯಾಗಿ ನಿರ್ಮಾಣ ಮಾಡಿರುವ ‘ಪದವಿ ಪೂರ್ವ’ ಚಿತ್ರವು ಡಿಸೆಂಬರ್ ೩೦ಕ್ಕೆ ತೆರೆಕಾಣುತ್ತಿದೆ. ಈಗಾಗಲೇ ಪ್ರಚಾರ ಕಾರ್ಯ ಶುರುವಾಗಿದೆ. ಅದರಂತೆ ಮೊನ್ನೆಯಷ್ಟೇ ಟೀಸರ್‌ನ್ನು ಜಗ್ಗೇಶ್ ಬಿಡುಗಡೆ ಮಾಡಿದರು. ನಂತರ ಮಾತನಾಡಿ ಬಹುತೇಕ ಹೊಸ ಹುಡುಗರೇ ಕಾಣಿಸಿಕೊಂಡಿದ್ದು, ತುಣುಕುಗಳು ಗಮನ ಸೆಳೆಯುವಂತಿದ್ದು, ನಮ್ಮ ಟೀನೇಜ್ ದಿನಗಳನ್ನು ನೆನಪಿಸುವಂತಿದೆ. ಇಬ್ಬರು ಮೂಗರು ಮದುವೆ ಆದರೆ ಬದುಕು ಸುಂದರ. ಮಾತೇ ಮರೆತಂತೆ ಕೆಲಸ ಮಾಡುವ ನಿರ್ದೇಶಕ, ಛಾಯಾಗ್ರಾಹಕ ಇವರಿಬ್ಬರ ಶ್ರಮ ನೋಡಿದಾಗ ಸಿನಿಮಾನೂ ಸೂಪರ್ ಅನಿಸುತ್ತದೆ. ಭಟ್ಟರಂಥಾ ಗುರುಗಳ ಮಾರ್ಗದರ್ಶನ ಸಿಕ್ಕ ಈ ತಂಡವೇ ಅದೃಷ್ಟವಂತರು ಎಂದರು.
ನ್ಯೂಯಾರ್ಕ್ ಫಿಲಂ ಅಕಾಡೆಮಿ ಪದವೀಧರ. ದೊಡ್ಡ ಹುದ್ದೆಯಲ್ಲಿದ್ದಾತ. ನನ್ನ ಅಸಿಸ್ಟೆಂಟ್ ಆಗ್ತೀನಿ ಅಂತ ಬಂದಾಗ ವಾಪಸ್ಸು ಹೋಗು ಅಂತ ಹೇಳಿದ್ದೆ. ಈತನ ಪ್ರತಿಭೆ ಕಂಡು ದಂಗಾದೆ. ಈಗ ನೋಡಿದರೆ ಇವ ಇಂಡಸ್ಟ್ರೀಗೆ ಕಾರ್ನರ್ ಸೈಟ್ ಆಗೋ ಭರವಸೆ ಕಾಣ್ತಿದೆ. ಹೊಸಬ್ರಿಗೆ ರಾಯಲ್ ಸೆಲ್ಯೂಟ್ ಮಾಡಿದ್ರಸ್ಟೇ ನಮಗೆ ಉಳಿಗಾಲ, ಇಲ್ಲಾಂದ್ರೆ ಯಾವುದೂ ಉದ್ದಾರ ಆಗೋಲ್ಲವೆಂದು ಯೋಗರಾಜಭಟ್ಟರು ಅಭಿಪ್ರಾಯಪಟ್ಟರು.
ಹೆಸರೇ ಹೇಳುವಂತೆ ಟೀನೇಜ್ ಹುಡುಗರ ಕಥೆಯನ್ನು ಇಟ್ಟುಕೊಂಡು ಮಾಡಲಾಗಿದೆ. ೯೦ರ ದಶಕದ ಜೀವನವನ್ನು ತೆರೆ ಮೇಲೆ ಹೇಳಿದ್ದೇವೆ. ಇದರಲ್ಲಿ ಹುಡುಕಾಟ, ತುಂಟಾಟ, ತರಲೆ ಎಮೋಶನ್ಸ್ ಎಲ್ಲವೂ ನೋಡುಗರನ್ನು ಆ ಕಾಲಕ್ಕೆ ಕರೆದುಕೊಂಡು ಹೋಗುತ್ತದೆ. ಭಟ್ಟರು, ಅದಿತಿಪ್ರಭುದೇವ, ಪ್ರಭುಮುಂಡ್ಕರ್, ಶ್ರೀಮಹದೇವ್ ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆಂದು ನಿರ್ದೇಶಕ ಹರಿಪ್ರಸಾದ್ ಮಾಹಿತಿ ನೀಡಿದರು.
ನಾಯಕ ಪೃಥ್ವಿಶಾಮನೂರು, ನಾಯಕಿಯರಾದ ಅಂಜಲಿಅನೀಶ್, ಯಶಾಶಿವಕುಮಾರ್, ನಟರಾಜ್ ಮೊದಲಾದವರು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. ಭಟ್ಟರ ಸಾಹಿತ್ಯಕ್ಕೆ ಅರ್ಜುನ್‌ಜನ್ಯಾ ಸಂಗೀತ, ಸಂತೋಷ್‌ರೈ ಪಾತಾಜೆ ಕ್ಯಾಮಾರ, ಮಧುತುಂಬಕೆರೆ ಸಂಕಲನ ಚಿತ್ರಕ್ಕಿದೆ.