Gowri.Film Pooja.News

Thursday, December 08, 2022

170

 

*ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ "ಗೌರಿ" ಚಿತ್ರಕ್ಕೆ ಚಾಲನೆ.*

 

ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ ಹಾಗೂ ಎನ್.ಎಸ್.ರಾಜಕುಮಾರ್ - ವಿ.ಎಸ್ ರಾಜಕುಮಾರ್ ನಿರ್ಮಾಣದ "ಗೌರಿ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಶೇಷಾದ್ರಿಪುರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನೆರವೇರಿತು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿ ಶುಭ ಕೋರಿದರು. ಮೂವತ್ತಕ್ಕೂ ಅಧಿಕ ವರ್ಷಗಳ ಕಾಲ ಡಾ||ರಾಜಕುಮಾರ್ ಅವರ ಬಳಿ ಸಹಾಯಕರಾಗಿ ಕಾರ್ಯ ನಿರ್ವಹಿಸಿರುವ ಚನ್ನ ಅವರು  ಕ್ಯಾಮೆರಾ ಚಾಲನೆ ಮಾಡಿದರು.

 

ಕನ್ನಡ ಚಿತ್ರರಂಗಕ್ಕೆ ಈಗ ಒಳ್ಳೆಯ ಕಾಲ. ವಿಶ್ವದಾದ್ಯಂತ ಕನ್ನಡ ಸಿನಿಮಾಗಳು ಹೆಸರು ಮಾಡುತ್ತಿದೆ. ಅದರಲ್ಲೂ ವಿಭಿನ್ನ ಕಥೆಯಿರುವ ಚಿತ್ರಗಳನ್ನು ಪ್ರೇಕ್ಷಕ ಮೆಚ್ಚಿಕೊಳ್ಳುತ್ತಿದ್ದಾನೆ. "ಗೌರಿ" ಸಹ ವಿಭಿನ್ನ ಕಥೆಯ ಚಿತ್ರ. ಇಡೀ ಸಿನಿಮಾ ಪೂರ್ತಿ ಕೇವಲ ಮೂರೇ ಪಾತ್ರಗಳಿರುತ್ತದೆ. ಕೆಲವು ಪ್ರಾಣಿಗಳನ್ನು ಸಹ ಬಳಸಿಕೊಳ್ಳುತ್ತಿರುವುದಾಗಿ ನಿರ್ದೇಶಕರು ಹೇಳಿದ್ದಾರೆ. ದಾಂಡೇಲಿಯಲ್ಲಿ ಬಹುಭಾಗದ ಚಿತ್ರೀಕರಣ ನಡೆಯಲಿದೆ. ಹೊಸವರ್ಷಕ್ಕೆ ಹೊಸತರಹದ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇನ್ನು  ರಾಜಕುಮಾರ್ ಎಂಬ ಹೆಸರು ಸದಾ ನನ್ನ ಜೊತೆ ಇರುತ್ತದೆ ಎಂಬುದಕ್ಕೆ ಈ ಚಿತ್ರದ ನಿರ್ಮಾಪಕರು ಸಹ ರಾಜಕುಮಾರ್ ಅವರೆ ಎಂದು ನಾಯಕ ರವಿಚಂದ್ರನ್ ಚಿತ್ರದ ಬಗ್ಗೆ ಮಾತನಾಡಿದರು.

ಇದು ನನ್ನ ಮೊದಲ ನಿರ್ದೇಶನದ ಚಿತ್ರ.  ಖ್ಯಾತ ನಟರಾದ ರವಿಚಂದ್ರನ್ ಅವರು ನನ್ನ ಮೊದಲ ನಿರ್ದೇಶನದ ಚಿತ್ರದಲ್ಲಿ ನಾಯಕರಾಗಿರುವುದು ಸಂತೋಷವಾಗಿದೆ. ಮುಂಬೈನ ಬರ್ಕಾ ಬಿಷ್ಟ್ ಈ ಚಿತ್ರದ ನಾಯಕಿ. ಗ್ರೀಷ್ಮಾ ಎಂಬ ಬಾಲ ಕಲಾವಿದೆ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಒಟ್ಟು ಮೂರೇ ಪಾತ್ರಗಳು.ಇದೊಂದು ಕೌಟುಂಬಿಕ ಚಿತ್ರ. ಇದುವರೆಗೂ ಸಾಕಷ್ಟು ಫ್ಯಾಮಿಲಿ ಚಿತ್ರಗಳು ಬಂದಿವೆ. ಈ ಚಿತ್ರದಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ಯಾಕೆ ಸಮಸ್ಯೆಗಳು ಬರುತ್ತವೆ ಎಂಬುದನ್ನು ತೋರಿಸುತ್ತಿದ್ದೇವೆ. ಅವರಿಬ್ಬರ ನಡುವಿನ ಪ್ರೀತಿಗೆ ಯಾಕೆ ಸಮಸ್ಯೆ ಎದುರಾಗುತ್ತವೆ ಮತ್ತು ಅವರು ಅದನ್ನು ಹೇಗೆ ಪರಿಹರಿಸಿಕೊಳ್ಳುತ್ತಾರೆ ಎಂದು ಹೇಳುವುದಕ್ಕೆ ಹೊರಟಿದ್ದೇವೆ. "ಗೌರಿ" ಚಿತ್ರಕ್ಕೆ "ಶಂಕರ B/H " ಎಂಬ ಅಡಿಬರಹವಿದೆ.  ಇದೊಂದು ವಿಭಿನ್ನವಾದ ಚಿತ್ರಕಥೆ ಎನ್ನಬಹುದು.  ಕೌಟುಂಬಿಕ ಚಿತ್ರವಾದರೂ, ಕಥೆ ಕಾಡಿನಲ್ಲಿ ನಡೆಯುತ್ತದೆ. ದಾಂಡೇಲಿ, ಯಲ್ಲಾಪುರದಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು ನಿರ್ದೇಶಕ ಅನೀಸ್.

 

ನನಗೆ ಕನ್ನಡದಲ್ಲಿ‌ ಇದು ಮೊದಲನೆಯ ಚಿತ್ರ. ಅದರಲ್ಲೂ ದಕ್ಷಿಣ ಭಾರತದಲ್ಲೇ ಮೊದಲು ಎನ್ನಬಹುದು. ರವಿಚಂದ್ರನ್ ಸರ್ ಜೊತೆ ನಟಿಸುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ನಾಯಕಿ ಬರ್ಕಾ ಬಿಷ್ಟ್.

 

ಇದು ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಹದಿನೈದನೇ ಚಿತ್ರ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಎನ್ ಎಸ್ ರಾಜಕುಮಾರ್.

 

ಛಾಯಾಗ್ರಾಹಕ ಸತೀಶ್ ಸಹ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Copyright@2018 Chitralahari | All Rights Reserved. Photo Journalist K.S. Mokshendra,