ಈವಾರ ಟೆಂಪರ್ ಹುಡುಗನ ಲವ್ ಸ್ಟೋರಿ
ಕನ್ನಡದಲ್ಲಿ ಇತ್ತೀಚೆಗೆ ವಿಭಿನ್ನ ಶೀರ್ಷಿಕೆಗಳನ್ನು ಹೊತ್ತ ಸಿನಿಮಾಗಳೇ ಹೆಚ್ಚು ಜನಪ್ರಿಯವಾಗುತ್ತಿವೆ. ಅಂಥಾ ಮತ್ತೊಂದು ಚಿತ್ರ ದಿ.೧೬ರ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಸಾಹಿತಿ, ಸಂಗೀತ ನಿರ್ದೇಶಕ ಮಂಜುಕವಿ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಆ ಚಿತ್ರದ ಹೆಸರು ಟೆಂಪರ್. ಸೋಮವಾರ ನಡೆದ ಬಿಡುಗಡೆಪೂರ್ವ ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದ ಚಿತ್ರತಂಡ ಮಾಹಿತಿ ಹಂಚಿಕೊಂಡಿತು. ಕನ್ನಡ ಹಾಗೂ ತೆಲುಗು ಸೇರಿದಂತೆ ೨ ಭಾಷೆಗಳಲ್ಲಿ ನಿರ್ಮಾಣವಾಗಿದೆ.
ತಮ್ಮ ಮಕ್ಕಳನ್ನು ಚಿಕ್ಕವರಿದ್ದಾಗಲೇ ಸುಸಂಸ್ಕೃತರನ್ನಾಗಿ ಬೆಳೆಸದೆ ಹೋದರೆ ಮುಂದೆ ಅವರು ಯಾವರೀತಿ ಬದಲಾಗ್ತಾರೆ ಅಲ್ಲದೆ ಮಕ್ಕಳ ಜೊತೆ ತಂದೆ-ತಾಯಿಯ ಬಾಂಧವ್ಯ ಹಾಗೂ ಸ್ನೇಹದ ಬಗ್ಗೆ ಉತ್ತಮ ಸಂದೇಶ ಕೂಡ ಚಿತ್ರದಲ್ಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಮಂಜುಕವಿ, ಟೆಂಪರ್ ಎಂದರೆ ಬರೀ ಕೋಪ ಎಂದಲ್ಲ, ಒಬ್ಬ ಮನುಷ್ಯ ಟೆಂಪರ್ ಆಗುವುದಕ್ಕೆ ನಾನಾ ಕಾರಣಗಳಿರುತ್ತವೆ. ಫ್ಯಾಮಿಲಿ ಎಂಟರ್ ಟೈನರ್ ಚಿತ್ರ ಇದಾಗಿದ್ದು, ನಮ್ಮ ಚಿತ್ರದ ಟ್ರೈಲರ್ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸಿನಿಮಾ ಜನರನ್ನು ಗೆಲ್ಲುವ ವಿಶ್ವಾಸವಿದೆ. ಮಾಸ್ ಸ್ಟೋರಿ ಜೊತೆಗೊಂದು ಪ್ರೇಮಕಥೆಯೂ ಇದೆ. ಬೆಂಗಳೂರು, ಮಂಡ್ಯ, ಮೈಸೂರು, ನಂಜನಗೂಡು, ಶ್ರೀರಂಗಪಟ್ಟಣ, ಚಿಕ್ಕಮಗಳೂರು ಹಾಗೂ ಕುಂದಾಪುರ ಸುತ್ತಮುತ್ತ ೫೦ ದಿನಗಳ ಕಾಲ ಚಿತ್ರದ ಚಿತ್ರೀಕರಿಸಿದ್ದೇವೆ. ಸಣ್ಣ ವಿಷಯಕ್ಕೂ ತಕ್ಷಣ ಕೋಪಗೊಳ್ಳುವ ಆತನ ಗುಣ ಕೊನೆಗೆ ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಯಿತು ಎನ್ನುವುದೇ ಟೆಂಪರ್ ಚಿತ್ರದ ಕಥೆ ಎಂದು ಹೇಳಿದರು. ಚಿತ್ರದ ಕಥೆ, ಚಿತ್ರಕಥೆ ಹಾಗೂ ೫ ಹಾಡುಗಳನ್ನು ಮಂಜುಕವಿ ಅವರೇ ಬರೆದಿದ್ದಾರೆ. ಈ ಚಿತ್ರದ ಮೂಲಕ ಆರ್ಯನ್ ಸೂರ್ಯ ಹಾಗೂ ಕಾಶಿಮಾ ರಫಿ ಮೊದಲಬಾರಿಗೆ ನಾಯಕ, ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.
ನಾಯಕ ಆರ್ಯನ್ ಸೂರ್ಯ ಮಾತನಾಡಿ, ಇದು ನನ್ನ ಮೊದಲ ಚಿತ್ರ. ಸಿನಿಮಾ ನೋಡಿದ ಎಲ್ಲರೂ ತುಂಬಾ ಚೆನ್ನಾಗಿ ಅಭಿನಯಿಸಿದ್ದೀಯ ಎಂದು ಮೆಚ್ಚಿಕೊಂಡಿದ್ದಾರೆ. ಮೆಕ್ಯಾನಿಕ್ ಆದ ನಾನು ಕೆಟ್ಟದ್ದನ್ನು ನೋಡಿದರೆ ತಕ್ಷಣ ಟೆಂಪರ್ ಆಗುತ್ತೇನೆ, ಅದರಿಂದ ಏನೇನೆಲ್ಲ ಆಯ್ತು ಅನ್ನೋದೆ ಕಥೆ ಎಂದು ಹೇಳಿದರು. ನಾಯಕಿ ಕಾಶಿಮಾ ಮಾತನಾಡಿ ಈ ಚಿತ್ರದಲ್ಲಿ ನಾನು ಮೆಡಿಕಲ್ ಸ್ಟೂಡೆಂಟ್ ಹಾಗೂ ಊರಗೌಡನ ಮಗಳಾಗಿ ಕಾಣಿಸಿಕೊಂಡಿದ್ದೇನೆ ಎಂದರು. ನಂತರ ಯತಿರಾಜ್ ಮಾತನಾಡಿ, ಈ ಚಿತ್ರದಲ್ಲಿ ನಾನು ನಾಯಕಿಯ ಚಿಕ್ಕಪ್ಪನಾಗಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರಕ್ಕೆ ತುಂಬಾ ಸ್ಕೋಪ್ ಇತ್ತು ಎಂದರು.
ಶ್ರೀಬಾಲಾಜಿ ಎಂಟರ್ ಪ್ರೈಸಸ್ ಮೂಲಕ ವಿ. ವಿನೋದ್‌ಕುಮಾರ್ ಹಾಗೂ ಮೋಹನಬಾಬು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪತ್ರಕರ್ತ ಧನು ಯಲಗಚ್ ಹಾಗೂ ಮಜಾಟಾಕೀಸ್ ಪವನ್‌ಕುಮಾರ್ ನಾಯಕನ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ತಬಲಾನಾಣಿ, ಸುಧಾ ಬೆಳವಾಡಿ ನಾಯಕನ ತಂದೆ, ತಾಯಿಯಾಗಿ ನಟಿಸಿದ್ದಾರೆ. ನಾಯಕನ ಬಾಲ್ಯದ ಪಾತ್ರವನ್ನು ಮಾಸ್ಟರ್ ಪವನ್ ಮೋರೆ ಮಾಡಿದ್ದಾರೆ. ಈ ಚಿತ್ರದಲ್ಲಿ ೫ ಹಾಡುಗಳಿದ್ದು ಆರ್.ಹರಿಬಾಬು ಸಂಗೀತ ಸಂಯೋಜನೆ ಮಾಡಿದ್ದಾರೆ. ಆರ್.ಕೆ.ಶಿವಕುಮಾರ್ ಅವರ ಕ್ಯಾಮರಾವರ್ಕ್ ಚಿತ್ರಕ್ಕಿದೆ.