Film 45.Film Launch Event

Thursday, April 27, 2023

198

 

*ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ 45 ಚಿತ್ರ ಮೈಸೂರಿನಲ್ಲಿ ಆರಂಭ* .

 

ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘45’ ಚಿತ್ರದ ಮುಹೂರ್ತ ಇತ್ತೀಚೆಗೆ  ಮೈಸೂರಿನಲ್ಲಿ ನೆರವೇರಿತು. ದೇವರ ಮೇಲೆ ಚಿತ್ರೀಕರಿಸಲಾದ ಮೊದಲ ದೃಶ್ಯಕ್ಕೆ ಗೀತಾ ಶಿವರಾಜಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು, ಗಣ್ಯರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.

‘45’ ಚಿತ್ರವನ್ನು ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ. ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆ ಬರೆದು ಸಂಗೀತ ಸಂಯೋಜಿಸಿದ್ದು, ಸತ್ಯ ಹೆಗಡೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದು, ಕೆ. ಎಂ ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.

 

ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವರಾಜಕುಮಾರ್, ‘ಇದೊಂದು ಫಿಲಾಸಫಿಕಲ್ ಎಂಟರ್ ಟೈನರ್ ಎಂದು ಚಿತ್ರವನ್ನು ಬಣ್ಣಿಸುತ್ತಾರೆ. ಕಳೆದ ಒಂದು ವರ್ಷದಿಂದ ಈ ಚಿತ್ರದ  ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅರ್ಜುನ್ ಜನ್ಯ ಕಥೆ ಹೇಳಿದಾಗ ತುಂಬಾ ಇಷ್ಟವಾಗಿತ್ತು. ಆ ನಂತರ ಅನಿಮೇಶನ್ ರೂಪದಲ್ಲಿ ಚಿತ್ರವನ್ನು ತೋರಿಸಿದ್ದಾರೆ. ಅವರೊಬ್ಬ ಪ್ರತಿಭಾವಂತ. ಈ ಸಿನಿಮಾದ ನಂತರ ಭಾರತದ ಟಾಪ್ ನಿರ್ದೇಶಕರ ಸಾಲಿನಲ್ಲಿ ಅರ್ಜುನ್ ಜನ್ಯ ಕೂಡ ಒಬ್ಬರಾಗುತ್ತಾರೆ ಎಂಬ ನಂಬಿಕೆಯಿದೆ. ತುಂಬಾ ಪ್ರಬುದ್ಧವಾಗಿರುವ ಪಾತ್ರ ಈ ಚಿತ್ರದಲ್ಲಿದೆ’ ಎಂದರು.

 ‘ಸಾಮಾನ್ಯವಾಗಿ ನಟರಿಗೆ ನಿರ್ದೇಶಕರು ಚಿತ್ರದ ಕಥೆ ಹೇಳಿದರೆ, ಅರ್ಜುನ್ ಜನ್ಯ ನನಗೆ ಚಿತ್ರವನ್ನೇ ತೋರಿಸಿದರು. ಒಂದು ಚಿತ್ರಕ್ಕೆ ನಾವು ಸಹ ಸಾಕಷ್ಟು ತಯಾರಿ ಮಾಡಿಕೊಳ್ಳುವುದರಿಂದ, ಮೊದಲು ನನ್ನ ತಂಡದ ಬಗ್ಗೆ ನನಗೆ ಹೆಮ್ಮೆ ಇತ್ತು. ಆದರೆ ಅರ್ಜುನ್ ಜನ್ಯ ಮತ್ತು ಅವರ ತಂಡದ ಕೆಲಸ ನೋಡಿ ಆಶ್ಚರ್ಯವಾಯಿತು. ಅವರು ಈ ಚಿತ್ರಕ್ಕೆ ಮಾಡಿಕೊಂಡ ತಯಾರಿ ಅದ್ಭುತ. ಒಬ್ಬ ನಟನಾಗಿ, ಪ್ರೇಕ್ಷಕನಾಗಿ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಯಿದೆ’ ಎಂದು ರಾಜ್ ಬಿ ಶೆಟ್ಟಿ ಹೇಳಿದರು.

 

‘ಮೊದಲ ಬಾರಿಗೆ ಹೆಸರಾಂತ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ.  ಬೋಲ್ಡ್ ಆಗಿರುವಂತ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಕೌಸ್ತುಭ ಮಣಿ.

 

ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಅರ್ಜುನ್ ಜನ್ಯ ಹೇಳಿದ ಕಥೆ ಬಹಳ ಇಷ್ಟವಾಯಿತಂತೆ. ‘ಚಿತ್ರದ ಘೋಷಣೆಯಾಗಿ ಹಲವು ತಿಂಗಳಾದರೂ ನಿಧಾನಕ್ಕೆ ಸಾಗುತ್ತಿತ್ತು. ಈ ಬಗ್ಗೆ ಅರ್ಜುನ್ ಜನ್ಯ ಅವರನ್ನು ಕೇಳಿದಾಗ, ಅವರು ಅನಿಮೇಶನ್ ಮೂಲಕ ಸಿನಿಮಾ ತೋರಿಸಿದರು. ಚಿತ್ರೀಕರಣ ಶುರುವಾಗುವುದಕ್ಕಿಂತ ಮೊದಲೇ, ಚಿತ್ರ ತೋರಿಸಿದರು. ನಾವು ಅಂದುಕೊಂಡಿರುವುದಕ್ಕಿಂತ ಸಿನಿಮಾ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆಯಿದೆ’ ಎಂದರು ರಮೇಶ್ ರೆಡ್ಡಿ.

 

ಕೊನೆಗೆ ಮಾತನಾಡಿದ ಅರ್ಜುನ್ ಜನ್ಯ, ‘ಚಿತ್ರೀಕರಣ ಈಗ ಶುರುವಾಗುತ್ತಿದ್ದರೂ, ಸುಮಾರು 9 ತಿಂಗಳ ಕಾಲ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಮಾಡಿ ಈಗ ಚಿತ್ರೀಕರಣಕ್ಕೆ ಹೊರಡುತ್ತಿದ್ದೇವೆ. ಮೊದಲು ಶಿವಣ್ಣ ಅವರಿಗೆ ಕಥೆ ಹೇಳಿದಾಗ, ನೀವೇ ಈ ಸಿನಿಮಾ ಮಾಡಿ ಎಂದು ಹುರುದಿಂಬಿಸಿದರು. ಈ ಚಿತ್ರದ ಮೂಲಕ ಒಂದು ದೊಡ್ಡ ಫಿಲಾಸಫಿಯನ್ನು ಸರಳ ರೀತಿಯಲ್ಲಿ, ಕ್ಲಾಸ್ ಮತ್ತು ಮಾಸ್ ಆಗಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

 ‘45’ ಚಿತ್ರಕ್ಕೆ 80 ದಿನಗಳ ಕಾಲ ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಕನ್ನಡವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಮೂಡಿಬರುತ್ತಿರುವ ಈ ಚಿತ್ರವನ್ನು 2024ರಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Copyright@2018 Chitralahari | All Rights Reserved. Photo Journalist K.S. Mokshendra,