ಶ್ರೀಮಂತ ಚಿತ್ರದಲ್ಲಿ ಕಿಚ್ಚ ಸುದೀಪ್
ವಿಭಿನ್ನ ಶೈಲಿಯ ಪ್ರಚಾರದಿಂದಲೇ ಸುದ್ದಿಯಾಗಿರುವ ಹಾಸನ್ ರಮೇಶ್ ನಿರ್ದೇಶನದ ಚಿತ್ರ ಶ್ರೀಮಂತ. ಬಾಲಿವುಡ್ ನಟ ಸೋನು ಸೂದ್ ಚಿತ್ರದಲ್ಲಿ ನಟಿಸಿರುವುದು ಈವರೆಗೆ ಬಿಗ್ ಸಪೋರ್ಟ್ ಆಗಿತ್ತು, ಇದೀಗ ಮತ್ತೊಂದು ಬಿಗ್ ಬ್ರೇಕಿಂಗ್ ನ್ಯೂಸನ್ನು ಚಿತ್ರತಂಡ ಹೊರಹಾಕಿದೆ. ಅದೇನೆಂದರೆ ಕನ್ನಡ ಚಿತ್ರರಂಗದ ಬಾದ್‌ಶಾ ಕಿಚ್ಚ ಸುದೀಪ್ ಅವರು ಶ್ರೀಮಂತನ ಜೊತೆಯಾಗಿರುವುದು, ಹೌದು, ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡ ಇದ್ದಾರೆ. ಇಡೀ ಚಿತ್ರದಲ್ಲಿ ಅವರ ಪಾತ್ರ ಇರುತ್ತದೆ. ಅದು ಹೇಗೆಂದು ಪ್ರೇಕ್ಷಕರು ಚಿತ್ರಮಂದಿರದಲ್ಲೇ ನೋಡಬೇಕು ಎಂದು ಚಿತ್ರದ ನಿರ್ದೇಶಕ ಹಾಸನ ರಮೇಶ್ ಬಹಳ ದಿನಗಳಿಂದ ಮುಚ್ಚಿಟ್ಟಿದ್ದ ಸಿಕ್ರೇಟ್‌ವೊಂದನ್ನು ಬಹಿರಂಗಪಡಿಸಿದರು.
ಚಿತ್ರದ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶ್ರೀಮಂತ ಶುಕ್ರವಾರ ಬಿಡುಗಡೆಯಾಗಲಿದೆ, ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರ, ರಾಜ್ಯದ ಎಲ್ಲ ಜನರಿಗೆ ನಮ್ಮ ಚಿತ್ರ ತಲುಪಿದೆ. ಪ್ರತಿಯೊಬ್ಬರೂ ಇಂಥ ಚಿತ್ರ ಬರಬೇಕು ಅಂತ ಹೇಳ್ತಿದಾರೆ, ಇದುವರೆಗೆ ರೈತನ ಬದುಕು ಬವಣೆಗಳನ್ನೇ ನೋಡುತ್ತಿದ್ದೆವು. ಈ ಚಿತ್ರದ ಮೂಲಕ ಆತನ ಬದುಕಿನ ಸಂಭ್ರಮಗಳನ್ನು ಕಾಣಬದುದು. ಸಿನಿಮಾ ನೋಡುವ ಮೂಲಕ ಆ ಸಂಭ್ರಮದಲ್ಲಿ ನಾವು ಕೂಡ ಭಾಗಿಯಾಗೋಣ, ಸೋನುಸೂದ್ ಅವರು ಹಿಮಾಚಲದಲ್ಲಿ ಶೂಟಿಂಗ್‌ನಲ್ಲಿರುವುದರಿಂದ ಬರಲು ಸಾಧ್ಯವಾಗಿಲ್ಲ, ನಾಯಕಿ ಮುಂಬೈನಲ್ಲಿದ್ದು ರಿಲೀಸ್ ದಿನ ಬರುತ್ತಾರೆ, ಇನ್ನೊಬ್ಬರು ವಿದೇಶದಲ್ಲಿದ್ದಾರೆ. ೫೦ ರಿಂದ ೬೦ ಜನ ಕಲಾವಿದರ ದೊಡ್ಡ ಬಳಗವೇ ಈ ಚಿತ್ರದಲ್ಲಿದೆ. ಕಿಚ್ಚ ಸುದೀಪ್ ಅವರ ಪಾಲ್ಗೊಳ್ಳುವಿಕೆ ಈ ಚಿತ್ರದ ವಿಶೇಷ. ಯಾವುದೇ ದೊಡ್ಡ ಕಮರ್ಷಿಯಲ್ ಸಿನಿಮಾಗೂ ಕಮ್ಮಿಯಿಲ್ಲದಂತೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದರು.
ಕಲಾವಿದರಾದ ನಟಿ ಕಲ್ಯಾಣಿ, ಗಿರಿ, ಕುರಿರಂಗ ಮುಂತಾದವರು ಚಿತ್ರದ ಬಗ್ಗೆ ಮಾತನಾಡಿದರು, ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ ಆರವ್ ರಿಶಿಕ್ ಮಾತನಾಡಿ, ಈ ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಮಾಡಿದ್ದು ನಾನು ಹಿನ್ನೆಲೆ ಸಂಗೀತ ಒದಗಿಸಿದ್ದೇನೆ ಎಂದರು. ನಿರ್ಮಾಪಕ ಸಂಜಯಬಾಬು ಮಾತನಾಡುತ್ತ ಪ್ರತಿಯೊಬ್ಬರ ಮನಸಿಗೂ ಮುಟ್ಟುವ ಸಿನಿಮಾ. ಎಲ್ಲರ ಮನೆಗೂ ಇದು ತಲುಪಬೇಕು ಎಂದು ಹೇಳಿದರು, ನಟಿ ಕಲ್ಯಾಣಿ ಮಾತನಾಡಿ ಚಿತ್ರದಲ್ಲಿ ಶಾಂತವ್ವ ಎಂಬ ಪಾತ್ರ ಮಾಡಿದ್ದೇನೆ. ಹಾಸನದ ಭಾಷೆಯನ್ನು ಮಾತನಾಡಲು ಪ್ರಯತ್ನಿಸಿದ್ದೇನೆ. ರೈತನ ನೋವು, ನಲಿವು ಇದೆಲ್ಲದರ ಬಗ್ಗೆ ಹೇಳುವಂಥ ಚಿತ್ರ ಎಂದು ಹೇಳಿದರು,
ಈ ಚಿತ್ರದಲ್ಲಿ ಸೋನುಸೂದ್ ಅವರು ರೈತನಾಗಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರದ ಮೂಲಕ ಸಾಮಾಜಿಕ ಕಳಕಳಿ ಹಾಗೂ ಜನರಿಗೆ ಒಂದೊಳ್ಳೆ ಸಂದೇಶ ಹೇಳಿಸಲಾಗಿದೆ, ಯುವನಟ ಕ್ರಾಂತಿ ಚಿತ್ರದ ನಾಯಕನಾಗಿದ್ದು, ನಾಯಕಿಯರಾಗಿ ವೈಷ್ಣವಿ ಪಟುವರ್ಧನ್ ಹಾಗೂ ವೈಷ್ಣವಿ ಚಂದ್ರನ್ ಮೆನನ್ ಅಭಿನಯಿಸಿದ್ದಾರೆ, ಗೋಲ್ಡನ್‌ರೈನ್ ಮೂವೀಸ್ ಲಾಂಛನದಲ್ಲಿ ಜಿ.ನಾರಾಯಣಪ್ಪ, ವಿ.ಸಂಜಯಬಾಬು ಹಾಗೂ ಟಿ.ಕೆ.ರಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಂಸಲೇಖ ಅವರ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನ ಚಿತ್ರಕ್ಕಿದ್ದು, ಎಸ್.ಪಿ. ಬಾಲಸುಬ್ರಮಣ್ಯಂ ಹಾಡಿರುವ ರೈತಗೀತೆ ಚಿತ್ರದ ಹೈಲೈಟ್. ಕೆ.ಎಂ. ವಿಷ್ಣುವರ್ಧನ್ ಹಾಗೂ ರವಿಕುಮಾರ್ ಸನಾ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಚರಣರಾಜ್, ಸಾಧುಕೋಕಿಲ, ರಮೇಶ್ ಭಟ್, ರಾಜು ತಾಳೀಕೋಟೆ, ರವಿಶಂಕರ್‌ಗೌಡ ಮುಂತಾದವರ ತಾರಾಗಣ ಜೊತೆಗೆ ಕೆ.ಎಂ.ಪ್ರಕಾಶ್ ಅವರ ಸಂಕಲನ, ಮದನ್ ಹರಿಣಿ, ಮೋಹನ್ ಅವರ ನೃತ್ಯನಿರ್ದೇಶನ, ಮಾಸ್ ಮಾದ ಅವರ ಸಾಹಸ ಸಂಯೋಜನೆ ಚಿತ್ರಕ್ಕಿದೆ.