ನೈಜ ಘಟನೆಯ ಮಿ. ಆಂಡ್ ಮಿಸಸ್ ರಾಜಾಹುಲಿ
‘ರಾಜಾಹುಲಿ’ ‘ಹೆಬ್ಬುಲಿ’ ಚಿತ್ರಗಳ ನಂತರ ಇದೀಗ ‘ಮಿ ಆಂಡ್ ಮಿಸಸ್ ರಾಜಾಹುಲಿ’ ಸೇರ್ಪಡೆಯಾಗಿದೆ. ‘ರಾಜಾಹುಲಿ’ ಸಿನಿಮಾದಲ್ಲಿ ಸಹನಿರ್ದೇಶಕನಾಗಿದ್ದ ಹೊನ್ನರಾಜ್ ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಚಿತ್ರದ ಕುರಿತಂತೆ ಮಾತನಾಡಿರುವ ನಿರ್ದೇಶಕರು ಕಳೆದ ನವೆಂಬರ್‌ದಲ್ಲಿ ಹೊಸ ಸಿನಿಮಾ ಆರಂಭಿಸಬೇಕಿತ್ತು. ಅದೇ ಸಮಯದಲ್ಲಿ ಪರಿಚಿತರೊಬ್ಬರು ಮಂಡ್ಯದಲ್ಲಿ ನಡೆದ ಸತ್ಯ ಘಟನೆಯ ಬಗ್ಗೆ ಹೇಳಿದರು. ಅದೇ ತುಂಬ ಆಸಕ್ತಿಕರವಾಗಿದ್ದರಿಂದ ಫೆಬ್ರವರಿಯಲ್ಲಿ ಶುರು ಮಾಡಲಾಯಿತು. ಇದೇ ಟೈಟಲ್ ಕೊಟ್ಟಿದ್ದಕ್ಕೆ ಮಂಜು ಸರ್‌ಗೆ ಥ್ಯಾಂಕ್ಸ್. ನಾಯಕನ ಹೆಸರು ಬಸವರಾಜ್. ಆದರೆ ಆತ ಯಶ್ ಅಭಿಮಾನಿಯಾಗಿ ಎದೆ ಮತ್ತು ಕೈ ಮೇಲೆ ಅವರ ರಾಜಾಹುಲಿ ಅಂತ ಹಚ್ಚೆ ಹಾಕಿಸಿರುತ್ತಾನೆ. ಮುಂದೇನು ಎಂಬುದಕ್ಕೆ ಚಿತ್ರಮಂದಿರಕ್ಕೆ ಬನ್ನಿರೆಂದು ಆಹ್ವಾನ ನೀಡಿದರು.
ಅತಿಥಿಯಾಗಿ ಆಗಮಿಸಿದ್ದ ರಾಜಾಹುಲಿ ನಿರ್ಮಾಪಕ ಕೆ.ಮಂಜು ಚಿತ್ರರಂಗದ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಹೇಳಿದರು. ಎಷ್ಟೇ ಒಳ್ಳೆ ಅಂಶಗಳು,ಎಂಥಾ ಸ್ಟಾರ್ ಇದ್ದರೂ ಸಿನಿಮಾಗಳು ಓಡಲ್ಲ. ನಿರ್ಮಾಪಕರು ಸಾಲಗಾರರಾಗಿದ್ದಾರೆ. ಥಿಯೇಟರ್‌ಗಳು ಅಲ್ಲದೆ ಮಲ್ಟಿಫ್ಲೆಕ್ಸ್‌ಗಳು ಮುಚ್ಚುತ್ತಿವೆ. ಈಗ ಚಿತ್ರ ಮಾಡಿ ಗೆಲ್ತೀನಿ ಅಂದರೆ ತುಂಬಾ ಕಷ್ಟ. ಸಿನಿಪಂಡಿತರಿಗೆ ಮಂಕುಬಡಿದಂತಾಗಿದೆ ಎಂದರು.
ಮಾಡರ್ನ್ ಬಜಾರಿಯಾಗಿ ನಾಯಕಿ ಶ್ರುತಿರಾಜ್ ಈಗ ಶ್ರುತಿಬಬಿತಾ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದೇನೆ ಎನ್ನುತ್ತಾರೆ. ತಾರಗಣದಲ್ಲಿ ಮೈಸೂರುಮಂಜುಳಾ, ರೇಖಾದಾಸ್, ಅಮರ್, ಚಂದನಾ, ಪ್ರದೀಪ್‌ಶೆಟ್ಟಿ ಮುಂತಾದವರು ನಟಿಸಿದ್ದಾರೆ.