*ಹೊರಬಂತು ‘ನಸಾಬ್’ ಶೀರ್ಷಿಕೆ*
*ಜೀವನಾಧಾರಿತ ಕೃತಿಗೆ ಸಿನಿಮಾ ರೂಪ*
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ‘ನಸಾಬ್’ ಸಿನಿಮಾದ ಶೀರ್ಷಿಕೆ ಇತ್ತೀಚೆಗೆ ಬಿಡುಗಡೆಯಾಯಿತು.
ಬೆಂಗಳೂರಿನ ಮಹಾರಾಣಿ ಕಾಲೇಜು ಆವರಣದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕೊಂಡಜ್ಜಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಜಂಬುನಾಥ ಸ್ವಾಮಿ ಎಸ್. ಮಳಿಮಠ, ಬಂಜಾರ ಶಕ್ತಿಪೀಠದ ಶ್ರೀ ಕುಮಾರ ಮಹಾರಾಜ ಸ್ವಾಮೀಜಿ, ಮಾಜಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ್, ಬೆಂಗಳೂರು ನಗರ ಜಿಲ್ಲ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಪ್ರಕಾಶ ಮೂರ್ತಿ ಸೇರಿದಂತೆ ವಿವಿಧ ಕ್ಷೇತ್ರಗಳ ಹಲವು ಗಣ್ಯರು ಹಾಜರಿದ್ದು ‘ನಸಾಬ್’ ಚಿತ್ರದ ಟೈಟಲ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಆಪ್ತ ಸಹಾಯಕರಾದ ಕೆ ಕಿಶೋರ್ ಕುಮಾರ್ ಅವರ ಆತ್ಮಕಥೆಯನ್ನು ಆಧರಿಸಿ ತಯಾರಾಗುತ್ತಿರುವ ‘ನಸಾಬ್’ ಸಿನಿಮಾದಲ್ಲಿ ಯುವನಟ ಕೀರ್ತಿ ಕುಮಾರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಬಂಜಾರ ಭಾಷೆಯಲ್ಲಿ ‘ನಸಾಬ್’ ಎಂದರೆ ಸರ್ವೋಚ್ಚ ನಾಯಕ ಎಂಬ ಅರ್ಥವಿದೆ. ಸಾಮಾನ್ಯ ಹುಡುಗನೊಬ್ಬ ಹೇಗೆ ‘ನಸಾಬ್’ ಆಗಿ ಬೆಳೆಯುತ್ತಾನೆ ಎಂಬುದರ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ.
‘ಕೀರ್ತಿ ಕ್ರಿಯೇಶನ್ಸ್’ ಬ್ಯಾನರಿನಲ್ಲಿ ಸುಜಾತ ಕೆ. ನಿರ್ಮಿಸುತ್ತಿರುವ ‘ನಸಾಬ್’ ಸಿನಿಮಾಕ್ಕೆ ಡಾ. ರಾಗಂ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಸಂಗೀತ ಸಂಯೋಜಿಸುತ್ತಿದ್ದಾರೆ. ‘ನಸಾಬ್’ ಸಿನಿಮಾದಲ್ಲಿ ಕೀರ್ತಿ ಕುಮಾರ್ ಅವರೊಂದಿಗೆ ಅಮೃತಾ, ಜಯಶ್ರೀ, ಹೇಮಂತ್, ಪದ್ಮವಾಸಂತಿ, ವಿಜಯಕಾಶಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಮಹಮ್ಮದ್ ಹಸೀಬ್ ಛಾಯಾಗ್ರಹಣವಿದ್ದು, ಶಿಜ ನಿರ್ದೇಶನವಿದೆ. ಪಟ್ಟದಕಲ್ಲು, ಐಹೊಳೆ, ಅಮಿನಘಡ ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.
ಸದ್ಯ ‘ನಸಾಬ್’ ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ.