Madhura Kavya.News

Monday, June 26, 2023

127

 

ಮಧುರಕಾವ್ಯ ಆಡಿಯೋ ಬಿಡುಗಡೆ

   

    ಆಯುರ್ವೇದ ಚಿಕಿತ್ಸಾ ಪದ್ದತಿಗೆ ಅದರದೇ ಆದ ಮಹತ್ವವಿದೆ.  ಇತ್ತೀಚಿನ ಕಾಲಮಾನದಲ್ಲಿ ಬಂದಿರುವ ಅಲೋಪತಿಗೆ ಈಗ ಹೆಚ್ಚು ಜನ ಮೊರೆ ಹೋಗುತ್ತಿದ್ದಾರೆ. ಹಾಗಾಗಿ  ಆಯುರ್ವೇದದ ಪ್ರಾಮುಖ್ಯತೆಯನ್ನು  ಜನರಿಗೆ ತಿಳಿಸಲೆಂದೇ, ಸ್ವತಃ  ಆಯುರ್ವೇದ ವೈದ್ಯರಾದ  ಮಧುಸೂದನ್ ಅವರು ಮಧುರಕಾವ್ಯ ಎಂಬ ಚಲನಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ, ಜೊತೆಗೆ ಪ್ರಮುಖ ಪಾತ್ರದಲ್ಲೂ ಸಹ ಅಭಿನಯಿಸಿದ್ದಾರೆ, ಈ ಚಿತ್ರದ ನಾಲ್ಕು ಹಾಡುಗಳ ಪ್ರದರ್ಶನ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಎಸ್‌ಆರ್‌ವಿ ಥಿಯೇಟರಿನಲ್ಲಿ ನೆರವೇರಿತು. ಸತೀಶ್ ಮೌರ್ಯ ಅವರ ಸಂಗೀತ ಸಂಯೋಜನೆಯ ೪ ಹಾಡುಗಳು ಚಿತ್ರದಲ್ಲಿದ್ದು, ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಕಾರ್ಯಕ್ರಮದಲ್ಲಿ  ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡದ ಕಾರ್ಯವನ್ನು ಪ್ರಶಂಸಿಸಿದರು.

  

  ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿದ  ಮಧುಸೂದನ್ ಕ್ಯಾತನಹಳ್ಳಿ ಅವರು  ಮೊದಲಬಾರಿಗೆ ಈ ಚಿತ್ರಕ್ಕೆ  ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಬಿಡುಗಡೆಯ ಹಂತ ತಲುಪಿರುವ ಈ ಚಿತ್ರದಲ್ಲಿ  ಆಯುರ್ವೇದ ವೈದ್ಯ ಮತ್ತು ಅಲೋಪಥಿ ವೈದ್ಯ ಪದ್ದತಿಯ ನಡುವೆ ನಡೆಯುವ ಸಂಘರ್ಷದ ಕಥಾವಸ್ತುವನ್ನಿಟ್ಟುಕೊಂಡು ಮಧುಸೂದನ್ ಕ್ಯಾತನಹಳ್ಳಿ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮಧುರಕಾವ್ಯ ಚಿತ್ರದಲ್ಲಿ ನಾಯಕಿಯ ಪಾತ್ರವಿಲ್ಲ.  ನಾಯಕನ ತಾಯಿಯಾಗಿ ರಂಗಭೂಮಿ ನಟಿ ಯಶೋಧ ಅವರು ಕಾಣಿಸಿಕೊಂಡಿದ್ದು, ಖಳನಾಯಕನಾಗಿ ರಾಜಕುಮಾರ್ ನಾಯಕ್ ನಟಿಸಿದ್ದಾರೆ.

   ನಾಯಕ ಕಂ ನಿರ್ದೇಶಕ ಮಧುಸೂದನ್ ಮಾತನಾಡುತ್ತ  ಈ ಸಿನಿಮಾ ನನ್ನ ಕನಸು, ಬಿಜಿನೆಸ್‌ಗಾಗಿ ನಾವು ಈ ಸಿನಿಮಾ ಮಾಡಿಲ್ಲ. ಸಮಾಜಕ್ಕೊಂದು ಸಂದೇಶ ಕೊಡಬೇಕೆಂದು ಚಿತ್ರ ನಿರ್ಮಿಸಿದ್ದೇವೆ. ಹಣ ಗಳಿಸಬೇಕೆಂದರೆ ನಾನು ಸಿನಿಮಾನೇ ಮಾಡಬೇಕಾಗಿಲ್ಲ. ಈವರೆಗೆ  ಸಾವಿರಾರು ಜನ ರೋಗಿಗಳನ್ನು ನೋಡಿದ್ದೇನೆ. ನಾನು ಆ ರೋಗಿಗಳಿಗೆ ಮಾಡ್ತಿರುವ ಸೇವೆಯೇ ನಾನೀ ಸಿನಿಮಾ ಮಾಡಲು ಸ್ಪೂರ್ತಿ. ಬಹುತೇಕ ಖಾಯುಲೆಗಳಿಗೆ ನಮ್ಮ ಹಿತ್ತಲಲ್ಲೇ ಔಷಧಿಯಿದೆ.  ಹಿತ್ತಲ ಗಿಡವನ್ನು ಹೇಗೆ ಬಳಸಿಕೊಳ್ಳಬೇಕು. ಅಲ್ಲದೆ ಒತ್ತಡದಿಂದಲೇ ರೋಗಗಳು ಹೇಗೆ ಹೆಚ್ಚಾಗುತ್ತವೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ.  ಅಲೋಪಥಿ ವೈದ್ಯರು ಹಣದಾಸೆಗಾಗಿ ನಾಟಿ ವೈದ್ಯ ಪದ್ದತಿಯನ್ನು ಹೇಗೆಲ್ಲಾ ಹತ್ತಿಕ್ಕುತ್ತಿದ್ದಾರೆ, ಪಾರಂಪರಿಕವಾಗಿ ಜನಸೇವೆ ಮಾಡಿಕೊಂಡು ಬಂದಿರುವ ನಾಟಿ ವೈದ್ಯರನ್ನು ಯಾವರೀತಿ  ತುಳಿಯುತ್ತಿದ್ದಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಅನಾದಿಕಾಲದಿಂದ ಜನರ ಆರೋಗ್ಯವನ್ನು  ಸಂರಕ್ಷಿಸುತ್ತ ಬಂದಿರುವ ಆಯುರ್ವೇದವನ್ನು ಉಳಿಸಬೇಕು ಎನ್ನುವುದೇ ನಮ್ಮ ಮೂಲ ಉದ್ದೇಶ. ಒಂದು ಚಿತ್ರ ಮಾಡುವಾಗ ಕಥೆಯೇ ಅದರ ನಾಯಕನಾಗಿರುತ್ತಾನೆ. ಜನರಿಗೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಒಬ್ಬ ನಾಟಿ ವೈದ್ಯನಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ, ಲಾಭಿ ನಡೆಸುವವರ ವಿರುದ್ದ ಹೋರಾಟ ನಡೆಸಿ ನಾಟಿ ವೈದ್ಯ ಪದ್ದತಿಯನ್ನು ರಕ್ಷಿಸುವಂಥ ಪಾತ್ರವದು.  ಚಿತ್ರದಲ್ಲಿ  ತಾಯಿ, ಮಗನ ನಡುವಿನ ಪ್ರೀತಿ ವಾತ್ಸಲ್ಯವಿದೆ, ಸಮಾಜಕ್ಕೆ ಒಂದು ಉತ್ತಮ ಮೆಸೇಜ್ ಕೂಡ ಚಿತ್ರದಲ್ಲಿದೆ.   ಈ ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಸಹ ನಾನೇ ವಹಿಸಿಕೊಂಡಿದ್ದೇನೆ. ಉಡುಪಿ, ಮಂಗಳೂರು, ಶಿರಸಿ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಹಳ್ಲಿಯ ನಾಟಿವೈದ್ಯರ ಕುಟುಂಬವೊಂದು ಮೆಡಿಕಲ್ ಲಾಭಿಯ ವಿರುದ್ದ ಹೋರಾಡುವ ಕಥೆಯಿದು. ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ  ಮಾಡುವ ಯೋಜನೆಯಿದೆ  ಎಂದು ಹೇಳಿದರು.

  ಸಂಗೀತ ನಿರ್ದೇಶಕ  ಸತೀಶ್ ಮೌರ್ಯ ಮಾತನಾಡಿ ನಾನು ಹಂಸಲೇಖ ದೇಸಿ ಕಾಲೇಜಿನಲ್ಲಿ ಮನೋಹರ್ ಅವರನ್ನು ಹಲವುಬಾರಿ ಭೇಟಿ ಮಾಡಿದ್ದೇನೆ. ಈ ಚಿತ್ರದಲ್ಲಿ ೩ ಹಾಡುಗಳು ಹಾಗೂ ೪ ಬಿಟ್ ಸಾಂಗ್ ಇದ್ದು, ದೇಸೀ ಶೈಲಿಯ ವಾದ್ಯಗಳನ್ನೇ ಬಳಸಿ ಮ್ಯೂಸಿಕ್ ಮಾಡಿದ್ದೇನೆ, ರಾಜೇಶ್ ಕೃಷ್ಣನ್, ಮಧು ಬಾಲಕೃಷ್ಣನ್, ಚಿತ್ರಾ ಅವರು ಹಾಡಿದ್ದಾರೆ ಎಂದು ಹೇಳಿದರು, ನಂತರ ರಾಜಕುಮಾರ್ ನಾಯಕ್, ನಾಚಪ್ಪ, ಹಾಗೂ  ಬಸವರಾಜ ಮಗಳಖೋಡ ಅವರುಗಳು  ಚಿತ್ರದ ಕುರಿತಂತೆ ಮಾತನಾಡಿದರು.

Copyright@2018 Chitralahari | All Rights Reserved. Photo Journalist K.S. Mokshendra,