ರಾಜ್.ಬಿ.ಶೆಟ್ಟಿಯ ಟೋಬಿ
‘ಒಂದು ಮೊಟ್ಟೆಯ ಕಥೆ’ ಚಿತ್ರದ ಮುಖಾಂತರ ನಿರ್ದೇಶಕ ಹಾಗೂ ನಟನಾಗಿ ಗುರುತಿಸಿಕೊಂಡಿರುವ ರಾಜ್.ಬಿ.ಶೆಟ್ಟಿ ಇಂದು ಸ್ಟಾರ್ ಆಗಿದ್ದಾರೆ. ಅವರ ಹೊಸ ಚಿತ್ರಗಳು ಎಂದರೆ ಕುತೂಹಲ ಹುಟ್ಟಿಸುತ್ತದೆ. ಅಂತಹುದೆ ‘ಟೋಬಿ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಲುಲು ಮಾಲ್‌ದಲ್ಲಿ ನಡೆಯಿತು. ಏಟು ಬಿದ್ದು ರಕ್ತಸಿಕ್ತವಾದ ಮುಖ, ಮೂಗಿಗೆ ಬಳೆಯಷ್ಟು ದೊಡ್ಡದಾದ ಮೂಗುತಿ, ಸಿಟ್ಟುಭರಿತ ಲುಕ್ ಕ್ರೋಧವನ್ನು ಎತ್ತಿ ತೋರಿಸುತ್ತಿದೆ. ಈಗಾಗಲೇ ದೊಡ್ಡ ಮೂಗುತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ‘ಮಾರಿ ಮಾರಿ ಮಾರಿಗೆ ದಾರಿ’ ಎಂಬ ಅಡಿಬರಹವಿದೆ.
ಇದರ ಕುರಿತಂತೆ ಮಾತನಾಡಿರುವ ರಾಜ್.ಬಿ.ಶೆಟ್ಟಿ ಮೂಗುತಿ ತೊಡಲು ಅದಕ್ಕೆ ಅದರದ್ದೇ ಆದ ಕಾರಣವಿದೆ. ಇದೊಂದು ರೀತಿಯಲ್ಲಿ ನನ್ನೊಳಗೆ ಮತ್ತು ಪಾತ್ರದಲ್ಲಿ ಆದಂತಹ ಬದಲಾವಣೆಯನ್ನು ತೋರಿಸುತ್ತದೆ. ಇದನ್ನು ನೋಡಿ ಜನರು ಅಚ್ಚರಿಪಡುತ್ತಿದ್ದು, ಸಿನಿಮಾದಲ್ಲಿ ಇಂತಹುವು ಸಾಕಷ್ಟು ಇದೆ. ಪೋಸ್ಟರ್‌ದಲ್ಲಿ ಕ್ರೋಧ ಎದ್ದು ಕಾಣುತ್ತದೆ. ಅದು ಬರೀ ಕ್ರೋಧವಲ್ಲ. ಅದರಲ್ಲಿ ಆಕ್ರಮಣಶೀಲತೆಯೂ ಇದೆ. ಇಡೀ ಸಿನಿಮಾದಲ್ಲಿ ಇದನ್ನು ತೊಟ್ಟಿರುವುದಿಲ್ಲ. ಯಾವುದೋ ಒಂದು ಸಂದರ್ಭದಲ್ಲಿ ಅನಿವಾರ್ಯತೆ ಸೃಷ್ಟಿಯಾಗಿ ಅದನ್ನು ತೊಡುತ್ತೇನೆ. ನನ್ನ ಸಿಟ್ಟು ಸಹ ಟೋಬಿಯ ರೋಲ್ ರೂಪಿಸಲು ಸಹಾಯವಾಗಿದ್ದು, ಯಾರಿಗೂ ತೊಂದರೆ ಕೊಡುವುದಿಲ್ಲ. ಬದಲಿಗೆ ಅದರಿಂದ ಪ್ರೊಡಕ್ಟಿವ್ ಮತ್ತು ಕ್ರಿಯೇಟಿವ್ ಕೆಲಸಗಳು ಆಗುತ್ತವೆ. ಮೂಲಕಥೆ ಟಿ.ಕೆ.ದಯಾನಂದ್ ಅವರದಾಗಿದ್ದರೂ, ಅದರಲ್ಲಿನ ಪಾತ್ರವನ್ನು ಹೊರತುಪಡಿಸಿ ಬೇರಲ್ಲವೂ ನನ್ನ ಬರವಣಿಗೆಯಲ್ಲಿ ಕಂಡಿದೆ ಎನ್ನುತ್ತಾರೆ.
ಬಾಸಿಲ್ ನಿರ್ದೇಶನ ಮಾಡಿದ್ದಾರೆ. ಲೈಟರ್ ಬುದ್ದ ಫಿಲಂಸ್, ಅಗಸ್ತ್ಯ ಫಿಲಂಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋ ಲಾಂಛನದಲ್ಲಿ ಚಿತ್ರವು ನಿರ್ಮಾಣವಾಗಿದೆ. ತಾರಗಣದಲ್ಲಿ ಸಂಯುಕ್ತಹೊರನಾಡು, ಚೈತ್ರಾಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್‌ರಾಜ್‌ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಮಿಥುನ್‌ಮುಕುಂದನ್ ಸಂಗೀತ, ಪ್ರವೀಣ್‌ಶ್ರೀಯನ್ ಛಾಯಾಗ್ರಹಣ-ಸಂಕಲನ, ಅರ್ಜುನ್‌ರಾಜ್-ರಾಜಶೇಖರ್ ಸಾಹಸವಿದೆ.