South Indian Hero.News

Monday, February 13, 2023

158

 

ಸೌತ್ ಇಂಡಿಯನ್ ಹೀರೋಗೆ ಉಪ್ಪಿ ಸಾಥ್

   

      ಈ ಹಿಂದೆ ಫಸ್ಟ್ ರ‍್ಯಾಂಕ್ ರಾಜು, ರಾಜು ಕನ್ನಡ ಮೀಡಿಯಂ ನಂಥ ಯಶಸ್ವೀ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ನರೇಶ್‌ಕುಮಾರ್ ಹೆಚ್.ಎನ್. ಹೊಸಳ್ಳಿ ಈಗ ಮತ್ತೊಂದು ಚಿತ್ರವನ್ನು ತೆರೆಗೆ ತರಲು ಅಣಿಯಾಗಿದ್ದಾರೆ. ಆ ಚಿತ್ರದ  ಹೆಸರು ಸೌತ್ ಇಂಡಿಯನ್ ಹೀರೋ. ನಿರ್ದೇಶನದ  ಜೊತೆಗೆ ಪತ್ನಿ ಶಿಲ್ಪಾ ಅವರ ಜೊತೆಗೂಡಿ  ಚಿತ್ರಕ್ಕೆ ಬಂಡವಾಳವನ್ನೂ ಸಹ ಹಾಕಿದ್ದಾರೆ. ಈ ಚಿತ್ರದಲ್ಲಿ ಕಿರುತೆರೆ ನಟ  ಸಾರ್ಥಕ್ ನಾಯಕನಾಗಿದ್ದು, ನಾಯಕಿಯರಾಗಿ ಕಾಶಿಮಾ ಹಾಗೂ ಮುಂಬೈ ಮೂಲದ ಊರ್ವಶಿ ನಟಿಸಿದ್ದಾರೆ. ಇದೇ ತಿಂಗಳ ೨೪ರಂದು ಈ ಚಿತ್ರ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ  ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಚಿತ್ರತಂಡ  ಹಮ್ಮಿಕೊಂಡಿತ್ತು. ನಟ ಉಪೇಂದ್ರ ಟ್ರೈಲರ್ ರಿಲೀಸ್ ಮಾಡಿ ಶುಭ ಹಾರೈಸಿದರು.

  ತಮ್ಮ ನಿರ್ಮಾಣ ಹಾಗೂ ನಿರ್ದೇಶನದ ಸೌತ್ ಇಂಡಿಯನ್ ಹೀರೋ ಚಿತ್ರದ ಕುರಿತಂತೆ ಮಾಹಿತಿ ಹಂಚಿಕೊಂಡ  ನರೇಶಕುಮಾರ್, ನನ್ನ ನಿರ್ದೇಶನದ ೪ನೇ ಚಿತ್ರವಿದು. ಒಂದು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಚಿತ್ರವನ್ನು ಉಪೇಂದ್ರ ಅವರಿಗೆ ತೋರಿಸಿದಾಗ ಅವರು ತುಂಬಾ ಇಷ್ಟಪಟ್ಟರು. ಚಿತ್ರದ ನಾಯಕ  ಭೌತಶಾಸ್ತ್ರದ ಶಿಕ್ಷಕ ಲಾಜಿಕ್ ಲಕ್ಷ್ಮಣರಾವ್, ಚಿತ್ರರಂಗದ ಯಾವುದೇ ಸಂಪರ್ಕವಿಲ್ಲದ ಆತ ಹೇಗೆ ಚಿತ್ರರಂಗಕ್ಕೆ ಬರುತ್ತಾನೆ, ಬಂದಮೇಲೆ ಏನೆಲ್ಲ ಸಂಕಷ್ಟ ಎದುರಿಸುತ್ತಾನೆ ಎನ್ನುವುದೇ ಚಿತ್ರದ ತಿರುಳು. ನಾಯಕನ ಪಾತ್ರಕ್ಕೆ ಮೂರು ಶೇಡುಗಳಿವೆ. ಒಂದರಲ್ಲಿ ಹಳ್ಳಿಯ ಬ್ಯಾಕ್‌ಡ್ರಾಪ್ ಇದ್ದರೆ, ಮತ್ತೊಂದು ಸಿಟಿಯ ಹಿನ್ನೆಲೆಯಲ್ಲಿರುತ್ತದೆ. ಟ್ರೈಲರ್ ಬಿಟ್ಟು ಇನ್ನೊಂದು ಸ್ಪೆಷಲ್ ಕ್ಯಾರೆಕ್ಟರ್  ಕೂಡ ಚಿತ್ರದಲ್ಲಿದೆ. ಇಮೇಜ್ ಇಲ್ಲದ ಒಬ್ಬ ಯುವಕ ಮುಂದೆ ದೊಡ್ಡ ನಾಯಕನಾಗಿ ಏನೆಲ್ಲಾ   ಸಮಸ್ಯೆಗಳನ್ನು ಎದುರಿಸುತ್ತಾನೆಂದು ಚಿತ್ರದ ಮೂಲಕ ಹೇಳಿದ್ದೇನೆ ಎಂದು ಹೇಳಿದರು.

   ನಾಯಕನಟ ಸಾರ್ಥಕ್ ಮಾತನಾಡುತ್ತ ಅವನು ಮತ್ತು ಶ್ರಾವಣಿ ಸೇರಿದಂತೆ ಕೆಲ  ಧಾರಾವಾಹಿಗಳಲ್ಲಿ ಅಭಿನಯಿಸಿದ್ದೆ, ಇದೊಂದು ವಿಭಿನ್ನವಾದ ಪಾತ್ರ, ಒಬ್ಬ ಸ್ಟಾರ್ ನಟನ ಪರ್ಸನಲ್ ಲೈಫ್ ಹೇಗಿರುತ್ತೆ,  ಲಾಜಿಕ್ ಲಕ್ಷ್ಮಣರಾವ್ ಎಲ್ಲಾ  ವಿಷಯಗಳನ್ನು ಲಾಜಿಕ್‌ನಲ್ಲಿ ನೋಡುವಾತ, ಅವನು ಸಿನಿಮಾಗೆ ಬಂದನಂತರ ಮುಂದೇನಾಗುತ್ತದೆ ಎನ್ನುವುದು ಕಥೆಯ ತಿರುಳು ಎಂದರು.

ನಾಯಕಿ ಕಾಶಿಮಾ ಮಾತನಾಡುತ್ತ ಈ ಚಿತ್ರದಲ್ಲಿ ನಾನು ಹಳ್ಳಿಯ ಶಿಕ್ಷಕಿ ಮಾನಸಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,  ಉತ್ತರ ಕರ್ನಾಟಕ  ಬಾಷೆಯನ್ನು ಮಾತನಾಡಿದ್ದೇನೆ ಎಂದು ಹೇಳಿದರು. ನಿರ್ಮಾಪಕಿ ಶಿಲ್ಪಾ ಮಾತನಾಡುತ್ತ  ಮನರಂಜನೆಯ ಉದ್ದೇಶ ಇಟ್ಟುಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ ಎಂದರು. ಚಿತ್ರದಲ್ಲಿ ಒಬ್ಬ ನಿರ್ದೇಶಕನಾಗಿ  ವಿಜಯ್ ಚೆಂಡೂರು ಕಾಣಿಸಿಕೊಂಡಿದ್ದಾರೆ. ಅಮಿತ್, ಅಶ್ವಿನ್ ಕೊಡಂಗಿ, ಅಶ್ವಿನ್‌ರಾವ್ ಪಲ್ಲಕ್ಕಿ ಎಲ್ಲರೂ ತಂತಮ್ಮ ಪಾತ್ರಗಳ ಬಗ್ಗೆ  ಹೇಳಿಕೊಂಡರು. ಸಂಗೀತ ನಿರ್ದೇಶಕ ಹರ್ಷವರ್ಧನ್ ಮಾತನಾಡಿ ಚಿತ್ರದಲ್ಲಿ ಒಟ್ಟು  ೫

ಹಾಡುಗಳಿದ್ದು, ತುಂಬಾ ಚೆನ್ನಾಗಿ ಮೂಡಿಬಂದಿವೆ ಎಂದರು. ಘಮಘಮ ಎಂಬ ಉತ್ತರ ಕರ್ನಾಟಕ ಶೈಲಿಯ ಹಾಡಿಗೆ ಸಂಗೀತ ನೀಡಿದ್ದಾರೆ. ರಾಜಶೇಖರ್ ಹಾಗೂ ಪ್ರವೀಣ್ ಎಸ್. ಅವರ ಛಾಯಾಗ್ರಹಣ, ನರೇಶಕುಮಾರ್ ಅವರ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಈ ಚಿತ್ರಕ್ಕಿದೆ.

Copyright@2018 Chitralahari | All Rights Reserved. Photo Journalist K.S. Mokshendra,