ಹೈಡ್ ಅಂಡ್ ಸೀಕ್ ಫಸ್ಟ್ ಲುಕ್ ಬಿಡುಗಡೆ
ಲಕ್ಷ್ಮಣ ಖ್ಯಾತಿಯ ನಟ ಅನೂಪ್ ರೇವಣ್ಣ ನಟಿಸಿರುವ ಹೈಡ್ ಅಂಡ್ ಸೀಕ್ ಚಿತ್ರವು ಸದ್ದಿಲ್ಲದೆ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿದೆ. ಪುನೀತ್ ನಾಗರಾಜು ಅವರ ನಿರ್ದೇಶನದ ಈ ಚಿತ್ರದಲ್ಲಿ ಅನೂಪ್ ರೇವಣ್ಣ ಒಬ್ಬ ಕಿಡ್ನಾಪರ್ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೇಕಿಂಗ್ ವೀಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಿದರೆ, ಮಾಜಿಸಚಿವ ಹೆಚ್.ಎಂ.ರೇವಣ್ಣ ಅವರು ಮೇಕಿಂಗ್ ವೀಡಿಯೋ ಲಾಂಚ್ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಎಂ.ರೇವಣ್ಣ ಪುನೀತ್ ನನ್ನಬಳಿ ಬಂದು ಸಿನಿಮಾ ಮಾಡುತ್ತೇವೆ ಅಂದಾಗ ಸಂತೋಷವಾಯಿತು. ಚಿತ್ರದ ಸನ್ನಿವೇಶಗಳು ಕುತೂಹಲಕರವಾಗಿವೆ. ನಾಗರಾಜ್ ಅವರ ಪ್ರಯತ್ನ ಯಶಸ್ವಿಯಾಗಲಿ. ಇವತ್ತು ಕನ್ನಡ ಚಿತ್ರರಂಗ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಪಡೆದಿದೆ. ಈ ಸಿನಿಮಾ ಕೂಡ ಅಂಥಾ ಚಿತ್ರಗಳ ಸಾಲಿಗೆ ಸೇರಲಿ ಎಂದು ಹಾರೈಸಿದರು,
ನಂತರ ಮಾತನಾಡಿದ ಪುನೀತ್ ನಾಗರಾಜು ಯುವತಿಯ ಅಪಹರಣದ ಸುತ್ತ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ಬೆಂಗಳೂರು, ಮಾಗಡಿ, ಚಿಕ್ಕಮಗಳೂರು ಸುತ್ತಮುತ್ತ ೩೦ ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಚಿತ್ರದಲ್ಲಿ ನಾಯಕನೇ ಕಿಡ್ನಾಪರ್ ಆಗಿದ್ದು, ಧನ್ಯ ರಾಮ್‌ಕುಮಾರ್ ಒಬ್ಬ ಬ್ಯುಸಿನೆಸ್‌ಮ್ಯಾನ್ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಿವರ್ಸ್ ಸ್ಕ್ರೀನ್ ಪ್ಲೈ ಮೂಲಕ ಕಥೆ ಹೇಳಲು ಟ್ರೈ ಮಾಡಿದ್ದೇವೆ, ಫಸ್ಟ್ ಹಾಫ್ ಡೈರೆಕ್ಟರ್ ಪಾಯಿಂಟ್ ಆಫ್ ವ್ಯೂನಲ್ಲಿ ಚಿತ್ರ ಬಂದರೆ, ಸೆಕೆಂಡ್ ಹಾïನಲ್ಲಿ ಅದೇಸೀನ್ ಬೇರೆರೀತಿ ನಡೆಯುತ್ತೆ ಎಂದು ಹೇಳಿದರು, ಸಹ ನಿರ್ಮಾಪಕ ವಸಂತರಾವ್ ಕುಲಕರ್ಣಿ ಮಾತನಾಡಿ ಪುನೀತ್ ಈಕಥೆ ಹೇಳಿದಾಗ ತುಂಬಾ ಇಷ್ಟವಾಯಿತು. ನಾನು ಒಬ್ಬ ಕಲಾನಿರ್ದೇಶಕ. ಇಷ್ಟು ದಿನದ ಸಂಪಾದನೆಯನ್ನು ಈ ಚಿತ್ರಕ್ಕೆ ಹಾಕಿದ್ದೇನೆ ಎಂದು ಹೇಳಿದರು.
ನಾಯಕ ಅನೂಪ್ ಮಾತನಾಡುತ್ತ ನಿರ್ದೇಶಕರು ಒಳ್ಳೇ ಕಥೆ ಮಾಡಿಕೊಂಡಿದ್ದರು. ನನ್ನ ಹಿಂದಿನ ಚಿತ್ರದ ಪಾತ್ರಕ್ಕೂ ಇದಕ್ಕೂ ವ್ಯತ್ಯಾಸವಿದೆ. ಜಾಸ್ತಿ ಮಾತಾಡದ, ಯಾವುದನ್ನೂ ಎಕ್ಸ್ ಪ್ರೆಷನ್ ಮಾಡದಂಥ ವ್ಯಕ್ತಿ. ನಾನಿಲ್ಲಿ ಹೀರೋ, ವಿಲನ್ ಎರಡೂ ಥರದ ಕ್ಯಾರೆಕ್ಟರ್ ಪ್ಲೇ ಮಾಡಿದ್ದೇನೆ ಎಂದು ಹೇಳಿದರು.
ನಂತರ ನಾಯಕಿ ಧನ್ಯಾ ರಾಮ್‌ಕುಮಾರ್ ಮಾತನಾಡುತ್ತ ಈ ಸ್ಕ್ರಿಪ್ಟ್ ಕೇಳಿದಾಗಲೇ ನನಗೆ ಇಷ್ಟವಾಯ್ತು, ಮಿಸ್ಟ್ರಿ ಥ್ರಿಲ್ಲರ್, ಅದಕ್ಕೇ ನಾನು ನನ್ನ ಎರಡನೇ ಚಿತ್ರವಾಗಿ ಈ ಸಿನಿಮಾ ಸೆಲೆಕ್ಟ್ ಮಾಡಿಕೊಂಡೆ. ಚಿತ್ರದಲ್ಲಿ ನಾನು ಅಪ್ಪನ ಮುದ್ದಿನ ಮಗಳು, ತುಂಬಾ ಟ್ವಿಸ್ಟ್ ಅಂಡ್ ಟರ್ನ್ ಇರುವ ಚಿತ್ರ. ಕೊನೇತನಕ ಏನಾಗುತ್ತೆ ಅಂತ ಗೊತ್ತಾಗಲ್ಲ ಎಂದು ಹೇಳಿದರು. ಉಳಿದಂತೆ ಮೈತ್ರಿ ಜಗ್ಗಿ, ರಕ್ಷಾ ಉಮೇಶ್ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು, ಸುನೇರಿ ಆರ್ಟ್ ಕ್ರಿಯೇಶನ್ಸ್ ಮೂಲಕ ಪುನೀತ್ ನಾಗರಾಜು, ವಸಂತ್ ರಾವ್ ಎಂ. ಕುಲಕರ್ಣಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಿಜೋ ಪಿ.ಜಾನ್ ಅವರ ಛಾಯಾಗ್ರಾಹಣ, ಸ್ಯಾಂಡಿ ಅದಾನ್ಕಿ ಅವರ ಸಂಗೀತ ನಿರ್ದೇಶನ, ಮಧು ತುಂಬಕೆರೆ ಅವರ ಸಂಕಲನ ಚಿತ್ರಕ್ಕಿದೆ.