ಘೋಸ್ಟ್ದಲ್ಲಿ ಅನುಪಮ್ಖೇರ್ ನಟನೆ
ಬಾಲಿವುಡ್ ನಟ ಅನುಪಮ್‌ಖೇರ್ ‘ಘೋಸ್ಟ್’ ಚಿತ್ರದಲ್ಲಿ ಅಭಿನಯಿಸುತ್ತಾರೆಂದು ಸುದ್ದಿಯಾಗಿತ್ತು. ಅದರಂತೆ ಬೆಂಗಳೂರಿಗೆ ಬಂದು ತಮ್ಮ ಭಾಗದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದವರು ಸೆಟ್‌ಗೆ ಭೇಟಿ ನೀಡಿದಾಗ ನಾಯಕ ಶಿವರಾಜ್‌ಕುಮಾರ್ ಅವರೊಂದಿಗಿನ ಮಾತಿನ ಭಾಗದ ಶೂಟಿಂಗ್ ನಡೆಯತ್ತಿತ್ತು. ಬಿಡುವು ಮಾಡಿಕೊಂಡು ತಂಡವು ಮಾತಿಗೆ ಕುಳಿತುಕೊಂಡರು.
ಮೊದಲು ಮಾತನಾಡಿದ ಅನುಪಮ್‌ಖೇರ್ ಇದು ನನ್ನ ೫೩೫ನೇ ಸಿನಿಮಾ. ಹಿಂದಿ ಸಿನಿಮಾಗಳ ಜತೆಗೆ ಈಗಾಗಲೇ ದಕ್ಷಿಣ ಭಾರತದ ಮಲಯಾಳಂ, ತೆಲುಗು, ತಮಿಳು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದೇನೆ. ಸಿನಿಮಾಗೆ ಎಂದಿಗೂ ಭಾಷೆ ಅಡ್ಡಿ ಬರುವುದಿಲ್ಲ ಎಂಬುದು ನನ್ನ ಬಲವಾದ ನಂಬಿಕೆ. ಅಳು, ನಗು, ನೋವು ಹೀಗೆ ಎಲ್ಲಾ ಭಾವನಾತ್ಮಕ ಅಂಶಗಳು ಎಲ್ಲಾ ಭಾಷೆಗಳಲ್ಲೂ ಒಂದೇ ಆಗಿರುತ್ತದೆ. ಅದಕ್ಕೆ ಭಾಷೆಯ ಭೇದ ಇರುವುದಿಲ್ಲ. ಚಿತ್ರಗಳನ್ನು ಬಾಲಿವುಡ್, ಟಾಲಿವುಡ್, ಕಾಲಿವುಡ್ ಅಂಥ ಬೇರೆ ಬೇರೆಯಾಗಿ ನೋಡುವುದು ಸರಿಯಲ್ಲ. ಇಲ್ಲಿ ತಯಾರಾಗುವ ಸಿನಿಮಾಗಳನ್ನು ಭಾರತೀಯ ಸಿನಿಮಾಗಳು ಅಂಥ ನೋಡುವುದು ಸೂಕ್ತ. ಯಾವುದೇ ಭಾಷೆಯ ಚಿತ್ರಗಳಲ್ಲಿ ನನಗೆ ತಾರತಮ್ಯವಿಲ್ಲ. ಹತ್ತು ವರ್ಷಗಳ ಹಿಂದೆಯೇ ಕರೆ ಬಂದಿತ್ತು. ಆದರೆ ಡೇಟ್ಸ್ ಸಮಸ್ಯೆಯಿಂದ ಆಗಲಿಲ್ಲ. ಇದರಲ್ಲಿ ನನ್ನ ಪಾತ್ರದ ಮೂಲಕವೇ ಕಥೆಗೆ ತಿರುವು ಕೊಡುತ್ತದೆ. ಇನ್ನು ಏನಿದ್ದರೂ ಚಿತ್ರಮಂದಿರಕ್ಕೆ ಬನ್ನಿರೆಂದು ಆಹ್ವಾನ ನೀಡಿದರು.
ಥ್ರಿಲ್ಲರ್ ಕಥೆಯಾಗಿದ್ದು, ಮಲೆಯಾಳಂನ ಜಯರಾಂ, ಹಿಂದಿಯ ಅನುಪಮ್‌ಖೇರ್ ನಟಿಸುತ್ತಿರುವುದು ಸಂತಸ ತಂದಿದೆ. ನಾನಿಲ್ಲಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಶಿವರಾಜ್‌ಕುಮಾರ್ ಪಾತ್ರದ ಪರಿಚಯ ಮಾಡಿಕೊಂಡರು.
ಶಿವಣ್ಣನ ಅಭಿಮಾನಿಯಾಗಿ ಅವರಿಗೆ ಒಂದು ಸಿನಿಮಾ ಮಾಡುವ ಆಸೆ ಮೊದಲಿನಿಂದಲೂ ಇತ್ತು. ಈಗ ನೆರವೇರಿದೆ. ಶೇಕಡಾ ೯೦ರಷ್ಟು ಮುಗಿದಿದೆ. ಇನ್ನು ೧೨ ದಿನಗಳ ಬಾಕಿ ಇದೆ ಅಂತ ನಿರ್ದೇಶಕ ಶ್ರೀವತ್ಸ ಹೇಳಿದರು. ‘ಘೋಸ್ಟ್-೨’ ಬರುವ ಕುರಿತಂತೆ ನಿರ್ಮಾಪಕ ಸಂದೇಶ್ ಮಾಹಿತಿ ಹರಿಬಿಟ್ಟರು.