ಕುತೂಹಲ ಕೆರಳಿಸುವ ನೋಡದ ಪುಟಗಳು
ರಿಯಲ್ ಲೈಫ್ ಚಿತ್ರಗಳು ಹೆಚ್ಚು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಆ ಸಾಲಿಗೆ ’ನೋಡದ ಪುಟಗಳು’ ಚಿತ್ರವೊಂದು ಸದ್ದಿಲ್ಲದೆ ಬಿಡುಗಡೆಗೆ ಸಿದ್ದವಾಗಿದೆ. ’ಜೀವನಪೂರ್ತಿ ತಿರುವುಗಳು ಬರುತ್ತದೆ. ನಿನ್ನ ತಿರುವು ಬರುವ ತನಕ ಕಾಯಬೇಕು’ ಎಂದು ಇಂಗ್ಲೀಷ್‌ದಲ್ಲಿ ಅಡಿಬರಹವಿದೆ. ಬಿಡುಗಡೆಯಾಗಿರುವ ಟ್ರೇಲರ್‌ಗೆ ಸುಚೇಂದ್ರಪ್ರಸಾದ್ ಧ್ವನಿ ನೀಡಿರುವುದು ತೂಕ ಹೆಚ್ಚಿದೆ.
ನವ ಪ್ರತಿಭೆ ಎಸ್.ವಸಂತ್‌ಕುಮಾರ್ ಸಿನಿಮಾಕ್ಕೆ ರಚನೆ,ನಿರ್ದೇಶನ ಹಾಗೂ ಸ್ವೀಟ್ ಅಂಡ್ ಸಾಲ್ಟ್ ಮೂವೀಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಮೂಲತ: ಟೆಕ್ಕಿಯಾಗಿರುವ ಇವರು ಬಣ್ಣದ ಲೋಕದ ಆಸೆಯಿಂದ ನಿರ್ದೇಶನದ ಕೋರ್ಸ್‌ನ್ನು ಕಲಿತುಕೊಂಡು, ಕೂಡ್ಲುರಾಮಕೃಷ್ಣ, ಯೋಗಿ ಅಭಿನಯದ ’ಯಕ್ಷ’ ಚಿತ್ರಕ್ಕೆ ಸಹಾಯಕನಾಗಿ ಅನುಭವ ಪಡೆದುಕೊಂಡಿದ್ದಾರೆ. ನಂತರ ಕಿರುಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಮೊನ್ನೆಯಷ್ಟೇ ಅಶ್ವಿನಿಪುನೀತ್‌ರಾಜ್‌ಕುಮಾರ್ ತುಣುಕುಗಳನ್ನು ವೀಕ್ಷಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ.
ವರ್ಷ ವರ್ಷ ನಿರ್ದಿಷ್ಟ ಅವಧಿಯಲ್ಲಿ ಒಂದಷ್ಟು ಘಟನೆಗಳು ಜರುಗುತ್ತವೆ. ಮುಂದೆ ಇದರ ಆಧಾರದ ಮೇಲೆ ಸಣ್ಣ ಏಳೆಯನ್ನು ಬರೆದುಕೊಂಡು ಗೆಳೆಯನಿಗೆ ಹೇಳಿದ್ದಾರೆ. ಚೆನ್ನಾಗಿದೆ ಏಕೆ ಸಿನಿಮಾ ಮಾಡಬಾರದೆಂದು ಸಲಹೆ ನೀಡಿದ್ದಾರೆ. ಆತನ ಮಾತನ್ನು ಗಂಭೀರವಾಗಿ ತೆಗೆದುಕೊಂಡಿದ್ದೇ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ನಾಲ್ಕು ವಯೋಮಾನದವರ ಸನ್ನಿವೇಶಗಳು ಬಂದು ಹೋಗುತ್ತದೆ. ಎಲ್ಲವು ಸೇರಿದರೆ ಕ್ಲೈಮಾಕ್ಸ್ ಆಗುತ್ತದೆ. ಆದರೆ ಒಬ್ಬರಿಗೊಬ್ಬರು ಭೇಟಿ ಆಗುವುದಿಲ್ಲ. ಎಲ್ಲರ ಬದುಕಿನಲ್ಲಿ ಕೆಟ್ಟ ಸಮಯ ಬಂದೇ ಬರುತ್ತೆ. ಅದು ನಮ್ಮನ್ನು ಹತೋಟಿಯಲ್ಲಿಡುತ್ತದೆ. ಇಲ್ಲದೆ ಹೋದಲ್ಲಿ ನಾವು ಹತೋಟಿಯಲ್ಲಿಟ್ಟು ಕೊಳ್ಳಬೇಕು. ಇದನ್ನೆ ಚಿತ್ರದಲ್ಲಿ ಹೇಳಲಿಕ್ಕೆ ಪ್ರಯತ್ನ ಮಾಡಲಾಗಿದೆ.
ನಾಯಕ ಪ್ರೀತಂಮಕ್ಕಿಹಳ್ಳಿ, ನಾಯಕಿ ಕಾವ್ಯರಮೇಶ್ ಇಬ್ಬರಿಗೂ ಎರಡನೇ ಅವಕಾಶ. ಇವರಿಗೆ ಕಥೆ ಹೇಳದೆ, ಕ್ಲೈಮಾಕ್ಸ್ ತಿಳಿಸದೆ ಕೆಲಸ ತೆಗೆದುಕೊಂಡಿರುವುದು ವಿಶೇಷ. ಉಳಿದಂತೆ ವಾಸು, ವಿಲಾಸ್‌ಕುಲಕರ್ಣಿ, ಗೌತಂ.ಜಿ, ಅಶೋಕ್‌ರಾವ್, ಪಿ.ಬಿ.ರಾಜುನಾಯಕ, ಶಾಂತಿ.ಎಸ್.ಗೌಡ, ಸೌಭಾಗ್ಯ, ಮೋಹನ್‌ಕುಮಾರ್, ರಘುಶ್ರೀವತ್ಸ, ಅಮೃತೇಶ್, ರೇಣುಕಗೌಡ ಮುಂತಾದವರು ನಟಿಸಿದ್ದಾರೆ.
ಪ್ರಶಾಂತಗುಣಕಿ-ಸಿ.ರಘುನಾಥ್ ಸಾಹಿತ್ಯದ ಹಾಡುಗಳಿಗೆ ವಿಘ್ನೇಶ್‌ಮೆನನ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಕುಮಾರ್.ಎನ್, ಸಂಕಲನ ರಘುನಾಥ್.ಎಂ ಅವರದಾಗಿದೆ. ಹೆಸರಘಟ್ಟ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.