*"GST" ಕಟ್ಟಲು ಮುಂದಾದ ಸೃಜನ್ ಲೋಕೇಶ್* ..
*ಸೃಜನ್ ಲೋಕೇಶ್ ಮೊದಲ ನಿರ್ದೇಶನದ ಚಿತ್ರಕ್ಕೆ ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣ* .
ಖ್ಯಾತ ನಟ ಸೃಜನ್ ಲೋಕೇಶ್ ನಟನಾಗಿ, ನಿರ್ಮಾಪಕನಾಗಿ ಜನಪ್ರಿಯ. ಈಗ "G S T" ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಈ ಚಿತ್ರವನ್ನು ಪ್ರತಿಷ್ಠಿತ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಶ್ರೀಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ದೃಶ್ಯಕ್ಕೆ ಸಂದೇಶ್ ನಾಗರಾಜ್ ಆರಂಭ ಫಲಕ ತೋರಿದರು. ಗಿರಿಜಾ ಲೋಕೇಶ್ ಕ್ಯಾಮೆರಾ ಚಾಲನೆ ಮಾಡಿದರು.
ಟಿ.ಎಸ್.ನಾಗಾಭರಣ, ಪಿ.ಶೇಷಾದ್ರಿ, ಸುಂದರರಾಜ್, ತಾರಾ, ಶೃತಿ, ನಿರೂಪ್ ಭಂಡಾರಿ ಮುಂತಾದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಈ ಚಿತ್ರದಲ್ಲಿ ಮೂರು ವಿಶೇಷಗಳಿದೆ ಎಂದು ಮಾತು ಆರಂಭಿಸಿದ ಸೃಜನ್ ಲೋಕೇಶ್, ನನ್ನ ಲಕ್ಕಿ ನಂಬರ್ 7. ಮೊದಲು ಇದು 2023 ಇದನ್ನು ಕೂಡಿಸಿದಾಗ ಏಳು ಬರುತ್ತದೆ. ನನ್ನ ನಟನೆಯ 25 ನೇ ಚಿತ್ರ. 2+5 =7.
ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದ 34ನೇ ಚಿತ್ರ. 3 + 4 ಕೂಡಿದಾಗ ಏಳಾಗುತ್ತದೆ. ಇನ್ನೊಂದು ವಿಶೇಷ, ನಮ್ಮ ತಾತನ ಚಿತ್ರದಲ್ಲಿ ನಮ್ಮ ಅಪ್ಪ ಬಾಲ ಕಲಾವಿದನಾಗಿ, ನಮ್ಮಪ್ಪನ ಚಿತ್ರದಲ್ಲಿ ನಾನು ಬಾಲ ಕಲಾವಿದನಾಗಿ ಅಭಿನಯಿಸಿದ್ದರು. ಈಗ ನನ್ನ ಚಿತ್ರದಲ್ಲಿ ನನ್ನ ಮಗ ಮಾಸ್ಟರ್ ಸುಕೃತ್ ಬಾಲ ಕಲಾವಿದನಾಗಿ ನಟಿಸುತ್ತಿದ್ದಾನೆ. ನಾಲ್ಕನೇ ಜನರೇಶನ್ ಈ ರೀತಿ ನಟಿಸುತ್ತಿರುವುದು ಇದೇ ಮೊದಲು ಎನ್ನಬಹುದು. ಮತ್ತೊಂದು ವಿಶೇಷವೆಂದರೆ ನನ್ನ ಮೊದಲ ನಿರ್ದೇಶನದ ಚಿತ್ರದಲ್ಲೇ ನನ್ನ ತಾಯಿಗೆ ಆಕ್ಷನ್ ಕಟ್ ಹೇಳುತ್ತಿರುವುದು. ಈ ಎಲ್ಲಾ ಕಾರಣಗಳಿಂದ ಈ ಚಿತ್ರ ನನಗೆ ವಿಶೇಷ. ಇನ್ನು "G S T" ಬಗ್ಗೆ ಹೇಳಬೇಕೆಂದರೆ, ಚಿತ್ರಕ್ಕೆ "ಘೋಸ್ಟ್ ಇನ್ ಟ್ರಬಲ್" ಎಂಬ ಅಡಿಬರಹವಿದೆ. ಈ ವಾಕ್ಯ ಹೇಳುವಂತೆ "ದೆವ್ವಗಳಿಗೂ ಸಮಸ್ಯೆಯಿದೆ" ಎಂಬುದು. ಆ ಸಮಸ್ಯೆ ಏನು ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಈ ಚಿತ್ರದಲ್ಲಿ ಮನರಂಜನೆಯ ಮಹಾಪೂರ ಹರಿಯುವುದು ಗ್ಯಾರೆಂಟಿ. ಇಂದಿನಿಂದಲೇ ಚಿತ್ರೀಕರಣ ಪ್ರಾರಂಭವಾಗಲಿದೆ.
ಸಂದೇಶ್ ಪ್ರೊಡಕ್ಷನ್ಸ್ ಜೊತೆ ಕೆಲಸ ಮಾಡುತ್ತಿರುವುದು ನನಗೆ ಹೆಮ್ಮೆ .
ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.
ಸೃಜನ್ , ನನ್ನ ಆತ್ಮೀಯ ಗೆಳೆಯ. ಗೆಳೆಯನಿಗಾಗಿ ಮಾಡುತ್ತಿರುವ ಸಿನಿಮಾವಿದು ಎಂದು ನಿರ್ಮಾಪಕ ಸಂದೇಶ್ ಎನ್ ತಿಳಿಸಿದರು. ಸಂದೇಶ್ ಪ್ರೊಡಕ್ಷನ್ಸ್ ನ ಸಂದೇಶ್ ನಾಗರಾಜ್ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಚಿತ್ರದಲ್ಲಿ ನಟಿಸುತ್ತಿರುವ ರಜನಿ ಭಾರದ್ವಾಜ್, ಗಿರಿಜಾ ಲೋಕೇಶ್, ಪ್ರಮೋದ್ ಶೆಟ್ಟಿ, ನಿವೇದಿತಾ, ತಬಲ ನಾಣಿ, ಅರವಿಂದ್ ರಾವ್, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ ಮುಂತಾದವರು, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್, ಗೀತಸಾಹಿತಿ ಕವಿರಾಜ್, ಸಂಭಾಷಣೆಕಾರ ರಾಜಶೇಖರ್ ಮತ್ತು ತೇಜಸ್ವಿ ನಾಗ್ "G S T" ಕುರಿತು ಮಾತನಾಡಿದರು.