‘ಫ್ರೀಡಮ್’ ಅಲ್ಬಮ್ ಸಾಂಗ್ ಬಿಡುಗಡೆ
'ಥಗ್ಸ್ ಆಫ್ 1980' ಟೈಟಲ್ ಲಾಂಚ್
ಗಾಯಕಿ ಈಶಾನಿಗೆ ಶಿವಣ್ಣ, ದರ್ಶನ್ ಮೆಚ್ಚುಗೆ
ಸಾಕಷ್ಟು ಕನ್ನಡಿಗರು ವಿದೇಶದಲ್ಲಿದ್ದುಕೊಂಡೇ ಕನ್ನಡ ಭಾಷೆಯ ಘಮಲನ್ನು ಪಸರಿಸುತ್ತಿದ್ದಾರೆ. ಅಂಥವರಲ್ಲಿ ಗಾಯಕಿ ಈಶಾನಿ ಕೂಡ ಒಬ್ಬರು. ಮೂಲತಃ ಮೈಸೂರಿನವರಾದ ಈಶಾನಿ ಸದ್ಯ ದುಬೈನಲ್ಲಿ ನೆಲೆಸಿದ್ದಾರೆ. ಚಿಕ್ಕವರಿದ್ದಾಗಿನಿಂದಲೇ ತಾಯಿಯ ಕೊಡುಗೆ ಎನ್ನುವಂತೆ ಗಾಯನದ ಬಗ್ಗೆ ಒಲವು ಬೆಳೆಸಿಕೊಂಡು ಬಂದಿದ್ದ ಇವರು ಈಗಾಗಲೇ 17 ಇಂಗ್ಲೀಷ್ ಅಲ್ಬಮ್ ಸಾಂಗ್ ಹಾಡಿದ್ದಾರೆ. ಕನ್ನಡದಲ್ಲೂ ಮೂರು ಆಲ್ಬಂ ಗೀತೆಗಳನ್ನು ಹಾಡಿ ಅದರಲ್ಲಿ ಹೆಜ್ಜೆ ಹಾಕಿದ್ದಾರೆ. ಆ ಪೈಕಿ ಇತ್ತೀಚೆಗಷ್ಟೇ ಕನ್ನಡದ ಮೂರನೇ ಆಲ್ಬಂ ಗೀತೆಯಾದ ‘ಫ್ರೀಡಮ್’ನ್ನು ಬಿಡುಗಡೆ ಮಾಡಲಾಯಿತು. ಈಶಾನಿ ಅವರ ಈ ಮೊದಲಿನ 2 ಕನ್ನಡದ ಅಲ್ಬಮ್ ಗೀತೆಗಳೆಂದರೆ, ರೈಟರ್ ಹಾಗೂ ಊರ್ಮಿಳ.
ಗಾಯಕಿ ಈಶಾನಿ ಅವರು ನಟ ಶಿವರಾಜ್ ಕುಮಾರ್ ಹಾಗೂ ದರ್ಶನ್ ಅವರನ್ನು ಭೇಟಿ ಮಾಡಿದಾಗ ಅವರು, ಸಾಗರದಾಚೆಗೂ ಕನ್ನಡನಾಡಿನ ಪ್ರತಿಭೆಯಾಗಿ ಬೆಳಗುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರೋತ್ಸಾಹದ ಮಾತುಗಳನ್ನಾಡಿ ಹುರಿದುಂಬಿಸಿದ್ದಾರೆ.
ಪ್ರೀಡಮ್ ಸಾಂಗ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಗಾಯಕಿ ಈಶಾನಿ ‘ನಾನು ಮೈಸೂರಿನವಳು. ದುಬೈನಲ್ಲಿ ವಾಸವಿದ್ದು, ಆಲ್ಬಂ ಸಾಂಗ್ ಮಾಡುತ್ತ ಬಂದಿದ್ದೇನೆ. ಈಗಾಗಲೇ ಇಂಗ್ಲೀಷ್‌ನಲ್ಲಿ 17 ಅಲ್ಬಮ್ ಗೀತೆಗಳನ್ನು ಮಾಡಿದ್ದೇನೆ. ನನ್ನ ತಂದೆ-ತಾಯಿ ಕರ್ನಾಟಕದಲ್ಲೇ ಇದ್ದು, ಅವರಿಗೆ ನಾನು ಕನ್ನಡ ಭಾಷೆಯಲ್ಲಿ ಸಾಂಗ್ ಮಾಡಬೇಕು ಎಂಬ ಆಸೆ ಇತ್ತು. ನನಗೂ ಸಹ ಕನ್ನಡದಲ್ಲಿ ಹಾಡುವ ಬಯಕೆ ಇತ್ತು. ಹಾಗಾಗಿ ಈ ಪ್ರಯತ್ನಗಳು ನಡೆದವು. ಕನ್ನಡ ಸಾಂಗ್‌ಗಳಿಗೂ ಎಲ್ಲಾ ಕಡೆ ಒಳ್ಳೆಯ ರೆಸ್ಪಾನ್ಸ್ ಬರ್ತಾ ಇದೆ. ನಾನು 13 ವರ್ಷದವಳಿದ್ದಾಗಿಂದಲೂ ಹಾಡುತ್ತಾ ಬಂದಿದ್ದೇನೆ. 2016ರಲ್ಲಿ ಮೊದಲು ಹಾಡನ್ನು ಬರೆದು ನಾನೇ ಹಾಡಿದೆ. ಈ ಅಲ್ಬಮ್ ಸಾಂಗ್‌ಗಳಿಗಾಗಿ ನಿರ್ದೇಶಕರನ್ನು ಭೇಟಿಯಾದೆ. ಈಗ ಸಿನಿಮಾದಲ್ಲಿ ನಟಿಸುವ ಆಸೆ ಹುಟ್ಟಿದೆ. ಜೊತೆಗೆ ಸಿನಿಮಾದ ಸಾಂಗ್ ಹಾಡುವ ಆಸೆಯೂ ಇದೆ. ದುಬೈನಲ್ಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಡಿಗ್ರಿ ಮುಗಿಸಿ, ಈಗ ಸಂಪೂರ್ಣ ಸಮಯವನ್ನು ಸಂಗೀತಕ್ಕಾಗಿಯೇ ಮಿಸಲಿಟ್ಟಿದ್ದೇನೆ. ಲಾಸ್ ಎಂಜಲೀಸ್‌ನ ದೊಡ್ಡ ವೇದಿಕೆಯಲ್ಲಿ ಹಾಡಿದ್ದೇನೆ. ಕನ್ನಡದ ಹುಡುಗಿಯಾಗಿ ಇನ್ನಷ್ಟು ಕನ್ನಡ ಹಾಡುಗಳನ್ನು ಮಾಡಬೇಕು ಎಂಬ ಆಸೆಯಿದೆ’ ಎಂದರು.
ಫ್ರೀಡಮ್ ಗೀತೆಯನ್ನು ಈಶಾನಿ ಅವರ ತಂದೆ ಶೇಖರ್, ತಾಯಿ ಇಂದ್ರಾಣಿ ಬಿಡುಗಡೆ ಮಾಡಿದರು. ‘ಮಗಳ ಈ ಸಾಂಗ್ ಲಾಂಚ್ ಮಾಡಲು ತುಂಬಾ ಖುಷಿಯಾಗುತ್ತಿದೆ. ಇದರಲ್ಲಿ ಮಗಳು ಕನ್ನಡ ಕಲಿತು ಹಾಡಿದ್ದಾರೆ’ ಎಂದು ಇಂದ್ರಾಣಿ ತಿಳಿಸಿದರು. ಇದೇ ಸಂದರ್ಭದಲ್ಲಿ ಈ ಗೀತೆಯ ನಿರ್ದೇಶಕ ಗಿರಿ ಗೌಡ ಅವರು ಆ್ಯಕ್ಷನ್ ಕಟ್ ಹೇಳಲಿರುವ ‘ಥಗ್ಸ್ ಆಫ್ 1980’ ಚಿತ್ರದ ಟೈಟಲ್ ಲಾಂಚ್ ಕೂಡ ಮಾಡಲಾಯಿತು. ‘ಇದು ನನ್ನ ನಿರ್ದೇಶನದ ಎರಡನೇ ಸಿನಿಮಾ ಆಗಿದ್ದು, ಹಳ್ಳಿಯ ಬ್ಯಾಕ್ ಡ್ರಾಪ್ನಲ್ಲಿ, ನಡೆಯುವ ಸಮುದ್ರ ತೀರದ ಕಥೆ ಇದಾಗಿದೆ’ ಎಂದರು. ವಾಸುಕಿ ವೈಭವ ಅವರು ಫ್ರೀಡಮ್ ಹಾಡಿಗೆ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ.
ಅಂದಹಾಗೆ ಈ ಗೀತೆಯನ್ನು ಎ.ಎಸ್ ಪ್ರೋಡಕ್ಷನ್ಸ್ ಬ್ಯಾನರ್‌ನಲ್ಲಿ ವೆಂಕಟ್ ಅವರು ನಿರ್ಮಾಣ ಮಾಡಿದ್ದಾರೆ. ಜೊತೆಗೆ ಚಿತ್ರದ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ವೇದಿಕೆಯಲ್ಲಿ ಮಾತನಾಡಿದ ವೆಂಕಟ್ ‘ಈಶಾನಿ ಅವರ ಇಂಗ್ಲಿಷ್ ಸಾಂಗ್ ನೋಡಿ, ಇವರಿಂದ ಕನ್ನಡ ಸಾಂಗ್ ಮಾಡಿಸಬೇಕು ಎಂದುಕೊಂಡೆವು. ಅವರ ತಂದೆಯವರ ಸಹಕಾರದಿಂದ ಈ ಕೆಲಸ ಆಯ್ತು. ಮೊದಲ ಎರಡು ಕನ್ನಡ ಅಲ್ಬಮ್ ಗೀತೆಗಳಿಗೆ ಈಶಾನಿ ಅವರೇ ಸಾಹಿತ್ಯ ಬರೆದು ನಟಿಸಿದ್ದಾರೆ. ಈಗಾಗಲೇ ನಮ್ಮ ಬ್ಯಾನರ್ ನಲ್ಲಿ ಮೂರು ಸಾಂಗ್ ಬಂದಿದ್ದು, ಮುಂದೆ ‘ಅಸ್ಟೇ ವಿಷ್ಯ’ ಅಲ್ಬಮ್ ಸಾಂಗ್ ಕೂಡ ಬರಲಿದೆ. ಈಗಾಗಲೇ ರಿಲೀಸಾಗಿರುವ ಈಶಾನಿ ಅವರ ಎರಡು ಕನ್ನಡ ಸಾಂಗ್‌ಗಳಿಗೆ ಉತ್ತಮ ರೆಸ್ಪಾನ್ಸ್ ಬರುತ್ತಿದೆ. ಕನ್ನಡದ ಹುಡುಗಿ ಈಶಾನಿ ಇಂಟರ್‌ನ್ಯಾಶನಲ್ ಸಿಂಗರ್ ಆಗಿ ಹೆಸರು ಮಾಡಿರುವುದು ವಿಶೇಷ’ ಎಂದರು. ಇನ್ನು ಇದೇ ಸಂದರ್ಭದಲ್ಲಿ ನಟ ವರ್ಧನ್ ಮಾತನಾಡಿ ‘ನಾನು ಥಗ್ಸ್ ಆಫ್ 1980 ಸಿನಿಮಾದಲ್ಲಿ ನಟಿಸುತ್ತಿದ್ದು, ಇದರಲ್ಲಿ ಒಳ್ಳೆಯ ಕಥೆ ಇದೆ’ ಎಂದು ಹೇಳಿದರು.